ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲ್ ಪ್ರಕರಣ: ಕೇಂದ್ರದ ವಿರುದ್ಧ ಕಾಂಗ್ರೆಸ್ ಆಕ್ರೋಶ

Published 6 ಮೇ 2024, 15:18 IST
Last Updated 6 ಮೇ 2024, 15:18 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಹಿಳೆಯರ ಮೇಲೆ ಅಪರಾಧ ಎಸಗಿದವರನ್ನು ಸದಾ ರಕ್ಷಣೆ ಮಾಡುತ್ತದೆ’ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ. ಈ ಮೂಲಕ ಹಾಸನದ ಸಂಸದ ಹಾಗೂ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪವನ್ನು ಪ್ರಸ್ತಾಪಿಸಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. 

ಎಐಸಿಸಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕಿ ನೆಟ್ಟಾ ಡಿಸೋಜಾ, ‘ಬೇಟಿ ಬಚಾವೊ, ಬೇಟಿ ಪಢಾವೊ ಎಂಬುದು ಘೋಷಣೆಗೆ ಸೀಮಿತವಾಗಿದೆ. ವಾಸ್ತವ ಏನು ಎಂಬುದು ದೇಶದ ಜನರ ಕಣ್ಣ ಮುಂದೆಯೇ ಇದೆ’ ಎಂದು ಹೇಳಿದರು. 

ಧೈರ್ಯಶಾಲಿ ಮಹಿಳಾ ಕುಸ್ತಿಪಟುಗಳು ಅಥವಾ ಅಂಕಿತಾ ಭಂಡಾರಿ ಸೇರಿದಂತೆ ಯಾವುದೇ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸಲು ಪ್ರಧಾನಿ ಮೋದಿ ಅವರು ಯತ್ನಿಸಲಿಲ್ಲ. ಆದರೆ, ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರಿಗೆ ಬಿಜೆಪಿ ಸದಾ ರಕ್ಷಣೆಯಾಗಿದೆ ಎಂದು ದೂರಿದರು.  

‘ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇಶದ ಮಹಿಳೆಯರು ಕೋಪಗೊಂಡಿದ್ದಾರೆ. ಪ್ರಧಾನಿ ಮೋದಿ ಅವರ ರಕ್ಷಣೆಯಲ್ಲಿ ಐದು ವರ್ಷಗಳ ಕಾಲ ಸಂಸತ್ತಿನಲ್ಲಿ ಸುರಕ್ಷಿತವಾಗಿದ್ದ ವ್ಯಕ್ತಿಯ ನಿಜವಾದ ಗುಣವೇನು ಎಂದು ಮಹಿಳೆಯರು ಚಿಂತಿಸುತ್ತಿದ್ದಾರೆ. ಈ ರೀತಿಯ ಕೃತ್ಯವನ್ನು ಬೇರೆಯವರು ಎಸಗಿದ್ದರೆ, ಮೋದಿ ಅವರು, ನಮ್ಮ ಹೆಣ್ಣು ಮಕ್ಕಳ ರಕ್ಷಣೆಗಾಗಿ ಅಪರಾಧಿಯನ್ನು ಹಿಡಿದಿದ್ದೇವೆ ಎಂದು ದೇಶದಾದ್ಯಂತ ಹೇಳಿಕೊಂಡು ತಿರುಗುತ್ತಿದ್ದರು. ಅದೇ ತಮ್ಮ ಪ್ರೀತಿಪಾತ್ರ ವ್ಯಕ್ತಿ ಈ ಕೃತ್ಯದಲ್ಲಿ ಭಾಗಿಯಾಗಿರುವುದರಿಂದ ಅವರ ನಿಲುವು ಏನು ಎಂಬುದು ಇಡೀ ದೇಶದ ಕಣ್ಣೆದುರಿಗೆ ಇದೆ’ ಎಂದು ವಾಗ್ದಾಳಿ ನಡೆಸಿದರು. 

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸುವಂತೆ ಪ್ರಧಾನಿ ಮೋದಿ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ಪ್ರಜ್ವಲ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಮೋದಿ ಅವರಿಂದಲೇ ಪ್ರಜ್ವಲ್ ವಿದೇಶಕ್ಕೆ ಹೋಗಲು ಸಾಧ್ಯವಾಗಿದೆ. ಈ ವಿಷಯದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಮೌನವಾಗಿದ್ದಾರೆ ಎಂದು ಆರೋಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT