ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಆತ್ಮಹತ್ಯೆ ಪ್ರಕರಣ: ಮಕ್ಕಳೊಂದಿಗೆ ನೆಲೆಸಲು ಪಾಲಕರೂ ಕೋಟಾದತ್ತ ಪಯಣ

Published 30 ಆಗಸ್ಟ್ 2023, 12:07 IST
Last Updated 30 ಆಗಸ್ಟ್ 2023, 12:07 IST
ಅಕ್ಷರ ಗಾತ್ರ

ಕೊಟಾ (ರಾಜಸ್ಥಾನ): ಐಐಟಿ ಹಾಗೂ ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಳದಿಂದ ಆತಂಕಗೊಂಡಿರುವ ಪಾಲಕರು, ಮಕ್ಕಳ ಆತ್ಮಸ್ಥೈರ್ಯ ಹೆಚ್ಚಿಸಲು ಅವರೊಂದಿಗೆ ಇರಲು ಕೋಟಾದತ್ತ ಪ್ರಯಾಣಿಸುತ್ತಿದ್ದಾರೆ.

ಬಿಹಾರದದ ಸೀತಾಮಹಾರಿಯವರಾದ 80 ವರ್ಷದ ನೀರು ದೇವಿ ಎಂಬುವವರು ಐಐಟಿಗೆ ಪ್ರವೇಶ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ತಮ್ಮ ಮೊಮ್ಮಗನ ಆರೈಕೆಗಾಗಿ ಕೋಟಾಕ್ಕೆ ಸ್ಥಳಾಂತರಗೊಂಡಿದ್ದಾರೆ.

‘ಎಂಜನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್‌ಗಳಿಗೆ ಸೇರಬಯಸುವ ಮಕ್ಕಳ ಮೇಲಿನ ಅತಿಯಾದ ಒತ್ತಡದಿಂದಾಗಿ, ಕೋಟಾಗೆ ಕಳುಹಿಸಿ ನಾವು ಮನೆಯಲ್ಲಿ ನೆಮ್ಮದಿಯಿಂದ ಇರದಂತ ಪರಿಸ್ಥಿತಿ ನಿರ್ಮಾಣಗೊಂಡಿದೆ’ ಎಂದು ತಮ್ಮ ಆತಂಕ ತೋಡಿಕೊಂಡಿದ್ದಾರೆ.

2023ರಲ್ಲಿ ಹೆಚ್ಚಿನ ಸಂಖ್ಯೆಯ ಆತ್ಮಹತ್ಯೆ ಪ್ರಕರಣಗಳು ಕೋಟಾದಲ್ಲಿ ದಾಖಲಾಗಿವೆ. ಆಗಸ್ಟ್‌ 27ರಂದು ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ 15 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರೆ ಈ ವರ್ಷ ಇಲ್ಲಿಯವರೆಗೆ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬಿಡುವಿಲ್ಲದ ತರಗತಿಗಳು, ಕರುಣೆ ಇಲ್ಲದ ಸ್ಪರ್ಧೆ, ಹೆಚ್ಚಿನ ಅಂಕ ಗಳಿಸುವ ಒತ್ತಡ, ಪಾಲಕರ ಅತಿಯಾದ ನಿರೀಕ್ಷೆ, ಮನೆಯತ್ತ ಸೆಳೆತದಿಂದ ವಿದ್ಯಾರ್ಥಿಗಳು ಬಳಲುತ್ತಿದ್ದಾರೆ. ಹೀಗಾಗಿ ಹಾಸ್ಟೆಲ್‌ನಲ್ಲಿ ಬಿಡುವ ಬದಲು, ಪಾಲಕರು ಈಗ ವಿದ್ಯಾರ್ಥಿಗಳೊಂದಿಗೆ ನೆಲೆಸಲು ಕೋಟಾದತ್ತ ಧಾವಿಸುತ್ತಿದ್ದಾರೆ. ಹಲವರು ರಜೆ ಪಡೆದು ಮಕ್ಕಳೊಂದಿಗೆ ಇರುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮಧ್ಯಪ್ರದೇಶದ ಸಾತ್ನಾದವರಾದ ಸಂಧ್ಯಾ ದ್ವಿವೇದಿ ಅವರು ಈಗ ಮಗನೊಂದಿಗೆ ಕೋಟಾದಲ್ಲಿ ಉಳಿದಿದ್ದಾರೆ. ಮತ್ತೊಂದೆಡೆ ಅವರ ಪತಿ ಊರಿನಲ್ಲಿ ಮನೆಯ ಹೊಣೆ ಹೊತ್ತಿದ್ದಾರೆ.

‘ನನಗೀಗ ಕೊಂಚ ಚಿಂತೆ ಕಡಿಮೆಯಾಗಿದೆ. ಮಗ ತಡರಾತ್ರಿಯವರೆಗೂ ಓದುತ್ತಾನೆ. ನಾನು ಆತನಿಗೆ ಚಹಾ ಮಾಡಿಕೊಡುತ್ತೇನೆ. ಆತನೊಂದಿಗೆ ಸಮಯ ಕಳೆಯುತ್ತೇನೆ. ಆತನ ಬೇಕು, ಬೇಡಗಳನ್ನು ಆಲಿಸಲು ನಾನಿದ್ದೇನೆ. ತಿಂಗಳಲ್ಲಿ ಎರಡು ಬಾರಿ ಆತನಿಗೆ ಆರೋಗ್ಯ ಸಮಸ್ಯೆ ಕಾಡಿತು. ಆಗ ನಾನು ಅವರ ಆರೈಕೆ ಮಾಡಿದೆ. ಜೆಇಇ ಪರೀಕ್ಷೆಯಲ್ಲಿ ಮಗ ಉತ್ತಮ ಅಂಕ ಪಡೆಯಬೇಕು ಎಂಬುದಷ್ಟೇ ನನ್ನ ಅಪೇಕ್ಷೆ. ಆದರೆ ಈ ಪ್ರಕ್ರಿಯೆಯಲ್ಲಿ ಆತನನ್ನು ಕಳೆದುಕೊಳ್ಳಲು ನನಗಿಷ್ಟವಿಲ್ಲ. ಇಲ್ಲಿ ಸಂಭವಿಸುತ್ತಿರುವ ಆತ್ಮಹತ್ಯೆಗಳ ಸುದ್ದಿಗಳನ್ನು ಆಲಿಸಿ, ಮಗನೊಂದಿಗೆ ಇರಲು ಇಲ್ಲಿಗೆ ಬಂದಿದ್ದೇನೆ’ ಎಂದಿದ್ದಾರೆ.

ಕೋಟಾದಲ್ಲಿ ಕಲಿಯುವವರ ಸಂಖ್ಯೆ ವರ್ಷಕ್ಕೆ 2.5ಲಕ್ಷ

ರಾಜಸ್ಥಾನದ ಕೋಟಾದಲ್ಲಿ ಎಂಜಿನಿಯರಿಂಗ್‌ಗಾಗಿ ನಡೆಸುವ ಜೆಇಇ ಹಾಗೂ ವೈದ್ಯಕೀಯ ಕೋರ್ಸ್‌ ದಾಖಲಾಗಲು ನಡೆಸುವ ನೀಟ್ ಪರೀಕ್ಷೆಗೆ ತರಬೇತಿ ಪಡೆಯುತ್ತಿರುವವರ ಸಂಖ್ಯೆ ವರ್ಷಕ್ಕೆ 2.5 ಲಕ್ಷ ಎಂದು ಅಂದಾಜು ಮಾಡಲಾಗಿದೆ.

ನೀಟ್‌ಗಾಗಿ ಸಿದ್ಧತೆ ನಡೆಸುತ್ತಿರುವ ಮಗಳ ಆರೈಕೆಗಾಗಿ ಚಂಡೀಘಡದಲ್ಲಿ ಸಾಫ್ಟ್‌ವೇರ್‌ ಉದ್ಯೋಗದಲ್ಲಿರುವ ಶಿವಾನಿ ಜೈನ್ ಅವರು ರಜೆ ಪಡೆದು ಕೋಟಾದಲ್ಲಿ ನೆಲೆಸಿದ್ದಾರೆ.

‘ಮಗಳು ಈಗ 11ನೇ ತರಗತಿಯಲ್ಲಿದ್ದಾಳೆ. ಆಕೆ 12ನೇ ತರಗತಿ ಪೂರ್ಣಗೊಳಿಸುವವರೆಗೂ ಹಾಗೂ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವವರೆಗೂ ಕೋಟಾದಲ್ಲಿ ಇರಲಿದ್ದೇನೆ. ಆಕೆ ವಿದ್ಯಾರ್ಥಿ ನಿಲಯದಲ್ಲಿದ್ದರೆ ಮನೆಯಲ್ಲಿ ನಾವು ನೆಮ್ಮದಿಯಲ್ಲಿ ಇರುವಂತಿಲ್ಲ’ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

‘ತಮಗಾಗುತ್ತಿರುವ ಸಂಕಟ ಹಾಗೂ ತಮ್ಮ ಮೇಲಿರುವ ಒತ್ತಡವನ್ನು ಹಂಚಿಕೊಳ್ಳಲು ಮಕ್ಕಳು ಹಿಂದೇಟು ಹಾಕುತ್ತಾರೆ. ಆದರೆ ನಾನೇ ಇಲ್ಲಿರುವುದರಿಂದ ಅವರಲ್ಲಿನ ಬದಲಾವಣೆಯನ್ನು ಗ್ರಹಿಸಿ ಅವರ ಅಗತ್ಯವನ್ನು ಆಲಿಸಬಲ್ಲೆ. ಅವರ ಬೇಕು, ಬೇಡಗಳನ್ನು ಕೇಳಬಲ್ಲೆ. ನಮ್ಮ ಮತ್ತೊಬ್ಬ ಮಗ 5ನೇ ತರಗತಿಯಲ್ಲಿ ಓದುತ್ತಿದ್ದು, ಆತನನ್ನು ಪತಿ ನೋಡಿಕೊಳ್ಳುತ್ತಿದ್ದಾರೆ’ ಎಂದರು.

‘ಮಕ್ಕಳಿಗೆ ಬೇಕಾದ ಆಹಾರ ಮಾಡುವುದು, ಅವರ ಬಟ್ಟೆ ಒಗೆದು, ಇಸ್ತ್ರಿ ಮಾಡುವುದು, ಅವರ ಬೇಕು, ಬೇಡಗಳನ್ನು ಆಲಿಸುತ್ತ ಮಕ್ಕಳ ಮೇಲೆ ನಿಗಾ ಇರಿಸಿದ್ದೇನೆ. ಒತ್ತಡದಲ್ಲಿ ಯಾವುದೇ ದುಡುಕಿನ ನಿರ್ಧಾರಗಳನ್ನು ಅವರು ತೆಗೆದುಕೊಳ್ಳದಿರಲಿ ಎಂದು ನಾನೇ ಬಂದು ಇಲ್ಲಿದ್ದೇನೆ’ ಎಂದು ಬಿಹಾರದ ಜಹಾನಾಬಾದ್‌ನ ಕುಮಾರಿ ಶಿಂಪಿ ಹೇಳಿದರು. ಇವರ ಇಬ್ಬರು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ.

ಕೋಟಾದಲ್ಲಿ ಮುಂದುವರಿದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಒತ್ತಡದ ಜೀವನದಲ್ಲಿ ಮಕ್ಕಳು ಕಳೆದುಹೋಗದಂತೆ ಪಾಲಕರು ಅವರೊಂದಿಗೆ ಬಂದಿರುತ್ತಿರುವುದು ಉತ್ತಮ ಸಂಗತಿ ಎಂದು ಕೋಟಾ ಪೊಲೀಸರು ಹೇಳಿದ್ದಾರೆ.

‘ಎಲ್ಲಾ ಮಕ್ಕಳ ಪಾಲಕರು ಇಲ್ಲಿ ಬಂದು ಇರಲು ಸಾಧ್ಯವಿಲ್ಲ ಎಂಬುದನ್ನು ನಾವೂ ಬಲ್ಲೆವು. ಆದರೆ ಕೋಟಾದಲ್ಲಿ ಮಕ್ಕಳನ್ನು ತಂದು ಬಿಡುವ ಪಾಲಕರು, ಕನಿಷ್ಠ ಒಂದು ತಿಂಗಳಾದರೂ ಅವರೊಂದಿಗೆ ಇರಬೇಕು. ಮಕ್ಕಳೊಂದಿಗೆ ತಾವೂ ಸ್ಥಳ ಪರಿಚಯ, ಮಕ್ಕಳ ದಿನಚರಿ ಹಾಗೂ ಪರಿಸ್ಥಿತಿಯನ್ನು ಅರಿಯಲು ಯತ್ನಿಸಬೇಕು. ಅದರಲ್ಲೂ ಪಾಲಕರಿಂದ ಮೊದಲ ಬಾರಿ ದೂರವಾಗುವ ಮಕ್ಕಳೊಂದಿಗೆ ಪಾಲಕರು ಹೆಚ್ಚು ಸಮಯ ಕಳೆಯಬೇಕು’ ಎಂದು ಕೋಟಾದ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೀಲ್ ಠಾಕೂರ್ ಹೇಳಿದ್ದಾರೆ.

ಮುಂದಿನ ಎರಡು ತಿಂಗಳವರೆಗೆ ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನವನ್ನು ನಿಲ್ಲಿಸುವಂತೆ ಜಿಲ್ಲಾಡಳಿತವೂ ತರಬೇತಿ ಕೇಂದ್ರಗಳಿಗೆ ಸೂಚಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT