ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕಾಂಗ್ರೆಸ್‍ ಕಾರ್ಯಕರ್ತರ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ 

Last Updated 18 ಫೆಬ್ರುವರಿ 2019, 12:11 IST
ಅಕ್ಷರ ಗಾತ್ರ

ಕಾಸರಗೋಡು: ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದು,ಇವರನ್ನು ವಿಚಾರಣೆಗೊಳಪಡಿಸಲಾಗಿದೆ.

ಎರಡು ಬೈಕ್‍ಗಳನ್ನು ಪೊಲೀಸರು ವಶ ಪಡಿಸಿದ್ದು, ತನಿಖೆಗೆ ಕರ್ನಾಟಕದ ಸಹಾಯ ಪಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.
ರಾಜ್ಯ ಪೊಲೀಸ್ ಅಧಿಕಾರಿ ಲೋಕ್‍ನಾಥ್ ಬೆಹರಾ ಕರ್ನಾಟಕ ಪೊಲೀಸರೊಂದಿಗೆ ಮಾತನಾಡಿದ್ದು, ಅಲ್ಲಿಂದ ಸಹಾಯದ ಭರವಸೆ ಸಿಕ್ಕಿದೆ ಎಂದಿದ್ದಾರೆ.

ಈ ಪ್ರಕರಣದ ತನಿಖೆಗಾಗಿ ತನಿಖಾ ತಂಡ ರೂಪಿಸಿದ್ದು, ಕ್ರೈಂ ಬ್ರಾಂಚ್ ಡಿವೈಎಸ್‍ಪಿ ಇದರ ನೇತೃತವಹಿಸಲಿದ್ದಾರೆ.ಈ ತಂಡದಲ್ಲಿ ಮೂವರು ಡಿವೈಎಸ್‍ಪಿ ಮತ್ತು ಮೂವರು ಸಿಐ ಇರಲಿದ್ದಾರೆ. ಪ್ರಕರಣಲ್ಲಿ ಸಿಪಿಎಂ ಕಾರ್ಯಕರ್ತರ ಕೈವಾಡವಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಹತ್ಯೆಗೀಡಾಗಿರುವ ಕೃಪೇಶ್, ಫೆಬ್ರುವರಿಯಲ್ಲಿ ಸಲ್ಲಿಸಿದ್ದ ದೂರು ಪ್ರಕಾರ ಮೂವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದರು.ಈ ಬಗ್ಗೆಯೂ ತನಿಖಾ ತಂಡ ತನಿಖೆ ನಡೆಸುತ್ತಿದೆ ಎಂದಿದ್ದಾರೆ ಪೊಲೀಸರು.

ಬಿಕ್ಕಿ ಬಿಕ್ಕಿ ಅತ್ತ ಮುಲ್ಲಪ್ಪಳ್ಳಿ ರಾಮಚಂದ್ರನ್
ಕಾಸರಗೋಡಿನ ಪೆರಿಯಾದಲ್ಲಿ ಹತ್ಯೆಗೀಡಾದ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ ಲಾಲ್ ಮತ್ತು ಕೃಪೇಶ್ ಮನೆಗೆ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಭೇಟಿ ನೀಡಿದ್ದಾರೆ.

ಶರತ್ ಮನೆಗೆ ಭೇಟಿ ನೀಡಿದ ರಾಮಚಂದ್ರನ್, ಮನೆಯವರ ಆಕ್ರಂದನ ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಗಲಿಕೆಯ ದುಃಖ ಸಹಿಸಲಾರದೆ ಅಳುತ್ತಿದ್ದ ಶರತ್‍ನ ಸಹೋದರಿ ಅಮೃತಾ ಮತ್ತು ಅಪ್ಪ ಸತ್ಯನ್ ಅವರಿಗೆ ಸಂತೈಸುವ ವೇಳೆ ರಾಮಚಂದ್ರನ್ ದುಃಖ ತಡೆಯಲಾರದೆ ಕಂಬನಿಗೆರೆದಿದ್ದಾರೆ.

ಪೈಶಾಚಿಕ ರೀತಿಯಲ್ಲಿ ಹತ್ಯೆ ಮಾಡಿದರು!
ಕೃಪೇಶ್ ಮತ್ತು ಶರತ್ ಲಾಲ್ ಎಂಬ ಯುವಕರನ್ನು ದುಷ್ಕರ್ಮಿಗಳು ಪೈಶಾಚಿಕ ರೀತಿಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಇನ್‍ಕ್ವೆಸ್ಟ್ ವರದಿಗಳು ಹೇಳಿವೆ.ಈ ಹತ್ಯೆ ರಾಜಕೀಯ ಪ್ರೇರಿತ ಎಂದು ಪೊಲೀಸರ ಪ್ರಾಥಮಿಕ ತನಿಖಾ ವರದಿಯಲ್ಲಿ ಹೇಳಿದ್ದು,ಸ್ಥಳೀಯ ಸಿಪಿಎಂ ಕಾರ್ಯಕರ್ತರೊಂದಿಗೆ ಇದ್ದ ವೈರತ್ವವೇ ಈ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತ ಪಡಿಸಲಾಗಿದೆ.

ಕೃಪೇಶ್‍ನ ತಲೆಯಲ್ಲಿ 13 ಸೆ.ಮೀ ಆಳದ ಗಾಯವಿದೆ. ಕಾಲಿನಲ್ಲಿ 14ಕ್ಕಿಂತಲೂ ಹೆಚ್ಚು ಗಾಯಗಳಿವೆ.ಶರತ್ ಲಾಲ್‍ನ ಕುತ್ತಿಗೆಯಲ್ಲಿ 23 ಸೆ.ಮೀ ಉದ್ದದ ಗಾಯವಿದೆ.ತಲೆಗೆ ತೀವ್ರ ಗಾಯವಾಗಿದೆ.ತಲ್ವಾರಿನಿಂದ ದಾಳಿ ಮಾಡಲಾಗಿದೆ ಎಂದು ಇನ್‍ಕ್ವೆಸ್ಟ್ ವರದಿಯಲ್ಲಿ ಹೇಳಿದೆ.

ತಲೆಗೆ ತೀವ್ರ ಗಾಯವಾಗಿದ್ದ ಕೃಪೇಶ್ ಘಟನಾ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ.ಮುನ್ನಾಡ್ ಕಾಲೇಜಿನಲ್ಲಿ ನಡೆದ ಸಂಘರ್ಷವೇ ಈ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.ಸಿಪಿಎಂ ಸ್ಥಳೀಯ ನೇತಾರನ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಶರತ್‍ಲಾಲ್ ವಾರದ ಹಿಂದೆಯಷ್ಟೇ ಜಾಮೀನು ಪಡೆದು ಹೊರಬಂದಿದ್ದರು. ಈ ಊರಿನ ಜಾತ್ರೆಯಲ್ಲಿ ಸಕ್ರಿಯರಾಗಿದ್ದ ವೇಳೆ ಇವರಿಬ್ಬರನ್ನೂ ಹತ್ಯೆ ಮಾಡಲಾಗಿದೆ.

ರಾಜಕೀಯ ದ್ವೇಷ ಮತ್ತು ದುರುದ್ದೇಶದಿಂದ ಈ ಕೃತ್ಯವೆಸಗಲಾಗಿದೆ.ಇದು ಸಂಚು ಹೂಡಿ ನಡೆಸಿದ ಕೃತ್ಯ ಎಂದು ಎಫ್‍ಐಆರ್‌ನಲ್ಲಿ ಹೇಳಲಾಗಿದೆ.ಭಾನುವಾರ ರಾತ್ರಿ 7.30ಕ್ಕೆ ಇವರಿಬ್ಬರೂ ಪ್ರಯಾಣಿಸಿದ್ದ ಬೈಕ್ ತಡೆದು ನಿಲ್ಲಿಸಿ ದಾಳಿ ಮಾಡಲಾಗಿದೆ.ಗಾಯಗೊಂಡ ಕೃಪೇಶ್ 15 ಮೀಟರ್ ದೂರ ಓಡಿದ್ದರೂ ಅವನನ್ನು ಬೆನ್ನಟ್ಟಿ ಹತ್ಯೆ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ್ದ ತಲ್ವಾರಿನ ಹಿಡಿ ಪೊಲೀಸರಿಗೆ ಸಿಕ್ಕಿದೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT