ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ತಿರುಚುತ್ತಿರುವ YSR ಕಾಂಗ್ರೆಸ್: ಚುನಾವಣಾ ಆಯೋಗಕ್ಕೆ ನಾಯ್ಡು ದೂರು

Published 9 ಜನವರಿ 2024, 10:40 IST
Last Updated 9 ಜನವರಿ 2024, 10:40 IST
ಅಕ್ಷರ ಗಾತ್ರ

ವಿಜಯವಾಡ: ‘ಆಂಧ್ರಪ್ರದೇಶದ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷ ನೇತೃತ್ವದ ಸರ್ಕಾರವು ಮತದಾರರ ಪಟ್ಟಿ ತಿರುಚುವ ಮೂಲಕ ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಹಾಳು ಮಾಡುತ್ತಿದೆ‘ ಎಂದು ಆರೋಪಿಸಿ ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ ಅವರಿಗೆ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಮಂಗಳವಾರ ದೂರು ನೀಡಿದ್ದಾರೆ.

ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರೊಂದಿಗೆ ಚುನಾವಣಾ ಆಯೋಗ ಕಚೇರಿಗೆ ಭೇಟಿ ನೀಡಿದ ನಾಯ್ಡು, ‘ರಾಜ್ಯದಲ್ಲಿ ಹಿಂದೆಂದೂ ನಡೆಯದಷ್ಟು ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಪ್ರಜಾಪ್ರಭುತ್ವದ ಅಪಹಾಸ್ಯವಾಗುತ್ತಿದೆ. ನಾವು ಕೆಲಸ ಮಾಡುವುದನ್ನು ತಡೆಯುತ್ತಿರುವ ವೈಎಸ್‌ಆರ್‌ಸಿಪಿಯ ಮುಖಂಡರು ಹಾಗೂ ಕಾರ್ಯಕರ್ತರು ನಮ್ಮ ಪಕ್ಷದ ಸಂಪೂರ್ಣ ಆಧಾರವನ್ನೇ ನಾಶಪಡಿಸುತ್ತಿದ್ದಾರೆ’ ಎಂದು ದೂರಿದ್ದಾರೆ.

‘ವೈ.ಎಸ್.ಜಗನ್‌ಮೋಹನ್ ರೆಡ್ಡಿ ನೇತೃತ್ವದ ರಾಜ್ಯ ಸರ್ಕಾರವು, ಮತದಾರರ ಪಟ್ಟಿಯನ್ನೇ ತಿರುಚುತ್ತಿದೆ. ಜತೆಗೆ ನಕಲಿ ಮತದಾರರನ್ನು ಪಟ್ಟಿಗೆ ಸೇರಿಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗವೇ ಅಧಿಕಾರಿಗಳನ್ನು ನೇಮಿಸಿ ಚುನಾವಣೆಯ ಸಂಪೂರ್ಣ ಪ್ರಕ್ರಿಯೆ ನಡೆಸಬೇಕು. ಆ ಮೂಲಕ ಆಂಧ್ರದ ಈ ಕ್ರಮವು ದೇಶಕ್ಕೆ ಮಾದರಿಯಾಗಬೇಕು’ ಎಂದು ಒತ್ತಾಯಿಸಿದ್ದಾರೆ.

‘ಅನುಭವಿ ಶಿಕ್ಷಕರು ಮತ್ತು ಸರ್ಕಾರಿ ನೌಕರರನ್ನು ಚುನಾವಣಾ ಕೆಲಸಗಳಿಗೆ ಆಯೋಗ ನೇಮಿಸುತ್ತದೆ. ಆದರೆ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷವು ಪೊಲೀಸರನ್ನು ಬೂತ್‌ ಮಟ್ಟದ ಅಧಿಕಾರಿಗಳನ್ನಾಗಿ ನೇಮಿಸಿದೆ. ಹೀಗೆ 83 ಕ್ಷೇತ್ರಗಳಲ್ಲಿ ಸುಮಾರು 2,600 ಮಹಿಳಾ ಪೊಲೀಸರನ್ನು ರಾಜ್ಯ ಸರ್ಕಾರ ನೇಮಿಸಿದೆ. ಆದರೆ ಚುನಾವಣಾ ಕೆಲಸದಲ್ಲಿ ಇವರಿಗೆ ಇರುವ ಅನುಭವ ಮತ್ತು ಅರ್ಹತೆ ಏನು’ ಎಂದು ನಾಯ್ಡು ಪ್ರಶ್ನಿಸಿದ್ದಾರೆ.

‘ಕೇಂದ್ರ ಮೀಸಲು ಪಡೆ ಪೊಲೀಸರನ್ನು ವೀಕ್ಷಕರನ್ನಾಗಿ ಚುನಾವಣಾ ಆಯೋಗ ನಿಯೋಜಿಸಬೇಕು. ಆ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ತಡೆಯಲು ಕ್ರಮ ವಹಿಸಬೇಕು. ಇಷ್ಟು ಮಾತ್ರವಲ್ಲ, ಪ್ರಸಕ್ತ ಸರ್ಕಾರ ಆಯೋಜಿಸಿರುವ ‘ಆಂಧ್ರಕ್ಕೆ ಜಗನ್ ಏಕೆ ಬೇಕು’ ಎಂಬ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಹಿತ ಇತರ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಮತ್ತೊಂದೆಡೆ ಟಿಡಿಪಿ ಹಾಗೂ ಜನಸೇನಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ನೂರಾರು ದೂರುಗಳು ದಾಖಲಾಗುತ್ತಿವೆ. ಇವುಗಳನ್ನು ತಡೆಯಬೇಕು’ ಎಂದು ಮುಖ್ಯ ಆಯುಕ್ತರ ಗಮನಕ್ಕೆ ತಂದರು.

‘ನಮ್ಮ ಈ ಹೋರಾಟವು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವವರೆಗೂ ನಡೆಯಲಿದೆ’ ಎಂಬ ಚಂದ್ರಬಾಬು ನಾಯ್ಡು ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಆಯುಕ್ತ, ‘ಪ್ರಜಾಪ್ರಭುತ್ವ ಉಳಿಸಲು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT