ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೊನ್ನೆಗೆ ಸೊನ್ನೆ ಸೇರಿದರೆ ಶೂನ್ಯವೇ: ಕಾಂಗ್ರೆಸ್–AAP ಮೈತ್ರಿಗೆ ಶಾ ವ್ಯಂಗ್ಯ

Published 12 ಮಾರ್ಚ್ 2024, 14:40 IST
Last Updated 12 ಮಾರ್ಚ್ 2024, 14:40 IST
ಅಕ್ಷರ ಗಾತ್ರ

ನವದೆಹಲಿ: ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಪಕ್ಷವು ಕಾಂಗ್ರೆಸ್ ಜೊತೆ ಮೈತ್ರಿ ಅಥವಾ  ಕಾಂಗ್ರೆಸ್‌ನೊಂದಿಗೆ ವಿಲೀನ ಮಾಡಿದರೂ, ಯಾವುದೇ ಪ್ರಯೋಜನವಾಗುವುದಿಲ್ಲ. ಯಾಕೆಂದರೆ, ಸೊನ್ನೆಗೆ ಸೊನ್ನೆ ಸೇರಿದರೆ ಶೂನ್ಯವೇ ಆಗುತ್ತದೆ’ 

–ಹೀಗೆಂದು ಮುಂಬರುವ ಲೋಕಸಭೆ ಚುನಾವಣೆಗಾಗಿ ದೆಹಲಿ, ಹರಿಯಾಣ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಕಾಂಗ್ರೆಸ್–ಎಎಪಿ ಮೈತ್ರಿ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವ್ಯಂಗ್ಯವಾಡಿದ್ದಾರೆ. 

ರಾಷ್ಟ್ರರಾಜಧಾನಿಯಲ್ಲಿ ಡಿಲ್ಲಿ ಗ್ರಾಮೋದಯ ಅಭಿಯಾನದ ಅಡಿ 41 ಗ್ರಾಮಗಳಿಗೆ ಕೊಳವೆ ಮೂಲಕ ನೈಸರ್ಗಿಕ ಅನಿಲ ಪೂರೈಕೆ ಯೋಜನೆಗೆ ಚಾಲನೆ ಮತ್ತು 178 ಗ್ರಾಮಗಳಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ, ಅವರು ಮಾತನಾಡಿದರು. 

‘ನೀವು ಮೈತ್ರಿ ಮಾಡಿಕೊಳ್ಳಬಹುದು ಆದರೆ, 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರದ ಗದ್ದುಗೆಗೇರಲಿದ್ದಾರೆ’ ಎಂದರು. 

‘ಕಾಂಗ್ರೆಸ್‌ನ ಭ್ರಷ್ಟಾಚಾರ ಮತ್ತು ಹಗರಣಗಳ ವಿರುದ್ಧದ ಹೋರಾಟದ ಮೂಲಕ ಅಧಿಕಾರಕ್ಕೆ ಬಂದಿರುವ ಅರವಿಂದ್ ಕೇಜ್ರಿವಾಲ್ ಅವರು ಇದೀಗ ಅದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ರಾಜಕೀಯದಲ್ಲಿ ಎರಡು ರೀತಿಯ ಜನರಿದ್ದಾರೆ. ಒಂದು  ಜನರಿಗೆ ತಾವು ನೀಡಿದ ಭರವಸೆಯನ್ನು ಈಡೇರಿಸುವವರು ಮತ್ತು ತಾವು ನೀಡಿದ ಭರವಸೆಗೆ ವಿರುದ್ಧವಾಗಿ ನಡೆದುಕೊಳ್ಳುವವರು. ಈ ಎರಡೂ ರೀತಿಯ ಜನರು ದೆಹಲಿಯಲ್ಲಿದ್ದು, ಮೋದಿ ಅವರು ಜನರಿಗೆ ಕೊಟ್ಟ ಭರವಸೆ ಈಡೇರಿಸಿದರೆ, ಮತ್ತೊಬ್ಬರು ಕೇಜ್ರಿವಾಲ್, ಅವರು ಜನರಿಗೆ ನೀಡಿದ ಭರವಸೆಯಂತೆ ಏನೂ ಮಾಡಿಲ್ಲ’ ಎಂದರು. 

ಎಎಪಿ ತಿರುಗೇಟು

'ದೆಹಲಿಯ ಜನರು ‘ಪ್ರಾಮಾಣಿಕ ಸರ್ಕಾರ’ವನ್ನು ಎರಡು ಬಾರಿ ಆಯ್ಕೆ ಮಾಡಿಕೊಂಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆ ವೇಳೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ, ಸಂಸತ್ತಿನಲ್ಲಿ ಕೇಜ್ರಿವಾಲ್ ಅವರಿಗೆ ಮತ್ತಷ್ಟು ಶಕ್ತಿ ತುಂಬಲು ಕಾತುರರಾಗಿದ್ದಾರೆ’ ಎಂದು ಅಮಿತ್ ಶಾ ಅವರ ಹೇಳಿಕೆಗೆ ಎಎಪಿ ತಿರುಗೇಟು ನೀಡಿದೆ. 

‘ಇದು ‘ಧರ್ಮ’ ಮತ್ತು ‘ಅಧರ್ಮ’ದ ನಡುವಿನ ಚುನಾವಣೆಯಾಗಿದೆ. ಒಂದು ಕಡೆ ಎಎಪಿಯು ಜನರ ವಿಚಾರಗಳನ್ನಿಟ್ಟುಕೊಂಡು ಹೋರಾಡುತ್ತಿದೆ. ಮತ್ತೊಂದು ಕಡೆ ದೆಹಲಿ ಜನರಿಗಾಗಿ ಜಾರಿಗೆ ತರಲಾಗಿರುವ ಯೋಜನೆಗಳಿಗೆ ಬಿಜೆಪಿಯು ಅಡ್ಡಿಯನ್ನುಂಟು ಮಾಡುತ್ತಿದೆ. ದೆಹಲಿಯ ಜನರು ಎಎಪಿಯನ್ನು ಸತತ ಮೂರನೇ ಸಲವೂ ವಿಧಾನಸಭೆಗೆ ಕಳುಹಿಸಿದ್ದಾರೆ. ಇತ್ತೀಚೆಗಿನ ಎಂಸಿಡಿ ಚುನಾವಣೆಯಲ್ಲಿ ಎಎಪಿ ಪರ ಮತ ಚಲಾಯಿಸುವ ಮೂಲಕ 15 ವರ್ಷಗಳ ಬಿಜೆಪಿ ದುರಾಡಳಿತವನ್ನು ತಿರಸ್ಕರಿಸಿದ್ದಾರೆ’ ಎಂದು ಎಎಪಿ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT