ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಸಾಲ್ಟ್‌ನಷ್ಟೇ ಸಾಮರ್ಥ್ಯ ಎಚ್‌ಎಎಲ್‌ಗೂ ಇದೆ: ಅಶೋಕ್‌ ಸಕ್ಸೇನ

Last Updated 10 ಜನವರಿ 2019, 7:30 IST
ಅಕ್ಷರ ಗಾತ್ರ

ಬೆಂಗಳೂರು: ‘ಡಸಾಲ್ಟ್‌ ಏವಿಯೇಷನ್‌ 100 ಯುದ್ಧ ವಿಮಾನಗಳನ್ನು ಎಷ್ಟು ಸಮಯದಲ್ಲಿ ತಯಾರಿಸುತ್ತದೆಯೊ ಅಷ್ಟೇ ಸಮಯದಲ್ಲಿ ವಿಮಾನ ಸಿದ್ಧಪಡಿಸುವಸಾಮರ್ಥ್ಯ ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್‌ಗೂ (ಎಚ್‌ಎಎಲ್‌) ಇದೆ’ ಎಂದು ಎಚ್‌ಎಎಲ್‌ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಅಶೋಕ್‌ ಸಕ್ಸೇನ ಹೇಳಿದರು.

ಎಚ್‌ಎಎಲ್‌ನಲ್ಲಿ ಸಿಬ್ಬಂದಿ ಕೊರತೆ ಇದೆ, ರಫೇಲ್‌ನಂತರ ಬಹುಮುಖಿ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಸಿದ್ಧಪಡಿಸುವ ಸಾಮರ್ಥ್ಯವಿಲ್ಲ, ಹಣದ ಕೊರತೆಯನ್ನು ಎದುರಿಸುತ್ತಿದೆ ಹೀಗೆ ಎಚ್‌ಎಎಲ್‌ ಸಾಮರ್ಥ್ಯದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ವೇಳೆ, ನ್ಯೂಸ್‌18 ಸಂಸ್ಥೆಯೊಂದಿಗೆ ಮಾತನಾಡಿರುವ ಸಕ್ಸೇನ ಅವರು ಎಚ್‌ಎಎಲ್‌ ಎಲ್ಲಾ ರೀತಿಯಿಂದಲೂ ಸಮರ್ಥವಾಗಿದೆ ಎಂದು ಸಮರ್ಥಿಸಿಕೊಂಡರು.

‘ಎಚ್‌ಎಎಲ್‌ನಲ್ಲಿ ಮಾನವ ಸಂಪನ್ಮೂಲ ಹೆಚ್ಚೊ, ಕಡಿಮೆಯೋ ಇರಬಹುದು. ಆದರೂ ಡಸಾಲ್ಟ್‌ಗೆಸರಿಸಮವಾಗಿ ಯುದ್ಧ ವಿಮಾನಗಳನ್ನು ಸಿದ್ಧಪಡಿಡುವ ಸಾಮರ್ಥ್ಯವಂತೂ ಇದೆ’ ಎಂದಿರುವ ಸಕ್ಸೇನ ಅವರು,ಎಚ್‌ಎಎಲ್‌ಗೆ ಇರುವ ಸಾಧ್ಯತೆಗಳನ್ನು ತೋರಿಸುವುದಕ್ಕಾಗಿ ಸರ್ಕಾರ ಹೊಸ ಒಪ್ಪಂದ ಮಾಡಿಕೊಳ್ಳಬೇಕು ಎಂದು ಕೋರಿದರು.

‘ಮಿಗ್‌ ಸರಣಿ, ಜಾಗ್ವಾರ್‌, ಸು–30ಎಂಕೆಐ, ಎಜೆಟಿ ಹವಾಕ್ ಸೇರಿದಂತೆ ಅನೇಕ ಆಧುನಿಕ ಯುದ್ಧ ವಿಮಾನಗಳನ್ನು ಎಚ್‌ಎಎಲ್‌ ಅನೇಕ ವರ್ಷಗಳಿಂದ ತಯಾರಿಸುತ್ತಿದೆ. ಅನುಭವ, ಮೂಲಸೌಕರ್ಯ, ಕೌಶಲ ಹಾಗೂ ರಫೇಲ್‌ ತಯಾರಿಸುವ ಸಾಮರ್ಥ್ಯ ನಮ್ಮ ಸಂಸ್ಥೆಗಿದೆ ಎನ್ನವುದನ್ನು ಇದೇ ನಿರೂಪಿಸುತ್ತದೆ’ ಎಂದರು.

‘ಬೇರೆಕಡೆಯ ತಂತ್ರಜ್ಞಾನವನ್ನು ಅತ್ಯಂತ ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಅಳವಡಿಸಿಕೊಂಡು ನಮ್ಮ ವಾಯುಸೇನೆಗೆ ಅಗತ್ಯವಾದ ಯುದ್ಧವಿಮಾನಗಳನ್ನು ಎಚ್‌ಎಎಲ್‌ ಸಿದ್ಧಪಡಿಸಿಕೊಟ್ಟಿದೆ. 2011–12ರಲ್ಲಿ ಸಾಕಷ್ಟು ಪರೀಕ್ಷೆ, ಮಾತುಕತೆಗಳ ನಂತರ 126 ರಫೇಲ್‌ ಖರೀಸುವ ಒಪ್ಪಂದವಾಗಿತ್ತು. ಇನ್ನೇನು ಒಪ್ಪಂದಕ್ಕೆ ಸಹಿ ಹಾಕಬೇಕೆನ್ನುವ ವೇಳೆ ವಿರೋಧ ಪಕ್ಷಗಳು ದನಿ ಎತ್ತಿದವು. ಎರಡೂ ಪಕ್ಷಗಳ ನಡುವಿನ ಬಿಕ್ಕಟ್ಟು ಇತ್ಯರ್ಥ್ಯವಾಗದಿದ್ದರಿಂದ ಒಪ್ಪಂದ ನೆರವೇರಲೇ ಇಲ್ಲ’ ಎಂದು ಹೇಳಿದರು.

‘ಈ ವಿಷಯ ಬಿಕ್ಕಟ್ಟಾಗಲು ಇದ್ದ ಎರಡು ಕಾರಣಗಳೆಂದರೆ, ಈ ಕೆಲಸವನ್ನು ಪೂರ್ಣಗೊಳಿಸಲು ಎಚ್‌ಎಎಲ್‌ನಲ್ಲಿ ಅಗತ್ಯ ಮಾನವ ಸಂಪನ್ಮೂಲ ಇದೆಯೇ ಎನ್ನುವುದು ಹಾಗೂ ಡಸಾಲ್ಟ್‌ ಏವಿಯೇಷನ್‌ ನೀಡಿದ್ದ ಭರವಸೆಗಳು.ಬಹುಶಃಯುದ್ಧ ವಿಮಾನಗಳ ಖರೀದಿಗಾಗಿ ಕರೆಯಲಾದ ಸವಾಲು ಬೆಲೆ(ಆರ್‌ಎಫ್‌ಕ್ಯು–ರಿಕ್ವೆಸ್ಟ್‌ ಫಾರ್‌ ಕೋಟ್‌) ನೀಡಿಕೆಯಲ್ಲಿ ಒಳಗೊಂಡಿದ್ದ ಷರತ್ತುಗಳ ಮೇರೆಗೆ ಡಸಾಲ್ಟ್‌ ಏವಿಯೇಷನ್‌ ತನ್ನ ಸವಾಲು ಬೆಲೆ ನೀಡಿದ್ದರೆ, ಆ ಎಲ್ಲ ನಿಯಮಗಳಿಗೆ ಬದ್ಧವಾಗಿರುವುದು ಡಸಾಲ್ಟ್‌ಗೆ ಅನಿವಾರ್ಯವಾಗಿರುತ್ತದೆ’ ಎಂದು ತಿಳಿಸಿದರು.

‘ಬಹುಮುಖಿ ಸಾಮರ್ಥ್ಯದ ಯುದ್ಧ ವಿಮಾನ ಖರೀದಿಯನ್ನು ವಿಳಂಬ ಮಾಡಿದಷ್ಟು ವಾಯುಸೇನೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಪ್ರಾರಂಭದಲ್ಲಿಯೇ ಈ ಗೊಂದಲಗಳನ್ನು ಸರ್ಕಾರ ಬಗೆಹರಿಸಕೊಳ್ಳಬಹುದಿತ್ತು’ ಎಂದು ಅಭಿವ್ಯಕ್ತಿಸಿದರು.

ವೃತ್ತಿ ಬದುಕಿನ ಅನುಭವದಿಂದ ಹೇಳುವುದಾದರೆ, ‘ಇನ್ನೂ ಕಾಲ ಮಿಂಚಿಲ್ಲ. ಈಗಲೂ ಪ್ರಯತ್ನಿಸಿದರೆ ಎಚ್‌ಎಎಲ್‌ನೊಂದಿಗೆ ರಫೇಲ್‌ಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಬಹುದು’ಎಂದರು.

‘ಈಗಾಗಲೇ ಡಸಾಲ್ಟ್‌ ಜೊತೆ ಒಪ್ಪಂದವಾಗಿರುವಂತೆಯೇ ಯುದ್ಧ ವಿಮಾನದ ವಿಶಿಷ್ಟತೆಗಳು, ತಯಾರಿಕಾ ಮಾನದಂಡ, ಶಸ್ತ್ರಾಸ್ತ್ರಗಳು, ಏವಿಯಾನಿಕ್ಸ್ (ವಿಮಾನಯಾನಕ್ಕೆ ಅಳವಡಿಸುವ ಎಲೆಕ್ಟ್ರಾನಿಕ್ಸ್) ಮತ್ತು ಇತರೆ ವ್ಯವಸ್ಥೆಗಳಲ್ಲಿ ಯಾವುದೇ ರಾಜಿಯಾಗದಂತೆಹೊಸ ಒಪ್ಪಂದ ಮಾಡಿಕೊಳ್ಳಬಹುದು. ಜೊತೆಗೆ ಏರ್‌ಫ್ರೇಮ್‌, ಏರಿಯೊ ಎಂಜಿನ್‌, ಏವಿಯಾನಿಕ್ಸ್‌, ರಾಡರ್‌, ವಿಮಾನದ ಬಿಡಿಭಾಗಗಳು ಹಾಗೂ ಇತರೆ ಉಪಕರಣಗಳನ್ನು ತಂತ್ರಜ್ಞಾನ ವರ್ಗಾವಣೆ ಮೂಲಕ ಸಿದ್ಧಪಡಿಸುವ ವಿಷಯ ಒಪ್ಪಂದದಲ್ಲಿ ಒಳಗೊಳ್ಳಬೇಕು’ ಎಂದು ತಿಳಿಸಿದರು.

‘2012ರಲ್ಲಿಯೇ ಒಪ್ಪಂದವಾಗಿದ್ದರೆ, 2014–15ರಲ್ಲಿಭಾರತದಲ್ಲಿಯೇ ರಫೇಲ್‌ ಯುದ್ಧ ವಿಮಾನದ ತಯಾರಿ ಪ್ರಾರಂಭವಾಗಿರುತ್ತಿತ್ತು. 2017–18ರ ವೇಳೆಗಾಗಲೇ ರಫೇಲ್‌ ಯುದ್ಧ ವಿಮಾನಗಳು ಹಾರಾಟ ನಡೆಸುತ್ತಿದ್ದವು’ ಎಂದರು.

ರಫೇಲ್ ಯುದ್ಧವಿಮಾನವನ್ನು ಸ್ಥಳೀಯವಾಗಿ ತಯಾರಿಸಿದರೆ ಅನೇಕ ಅನುಕೂಲಗಳೂ ಇವೆ. ಉತ್ತಮ ಬೆಲೆಯಲ್ಲಿ ಪರಿಣಾಮಕಾರಿ ಯುದ್ಧ ವಿಮಾನಗಳು ದೊರೆಯುತ್ತಿದ್ದವು. ತರಬೇತಿ ಸೌಲಭ್ಯ, ದುರಸ್ತಿ, ಸಲಕರಣೆಗಳು ಹೀಗೆ ಎಲ್ಲವೂ ಕಡಿಮೆ ವೆಚ್ಚದಲ್ಲಿ ಆಗುತ್ತಿತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಯುದ್ಧ ವಿಮಾನಗಳ ವಿಷಯದಲ್ಲಿ ಫ್ರಾನ್ಸ್‌ ಮೇಲಿನ ಅವಲಂಬನೆಯೂ ಕಡಿಮೆಯಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT