ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಹುದ್ದೆಗೇರಿದ ಚಾಯ್‌ವಾಲಾ

Last Updated 19 ಮೇ 2014, 13:39 IST
ಅಕ್ಷರ ಗಾತ್ರ

ಎಲ್ಲಾ ಚುನಾವಣಾ ಸಮೀಕ್ಷೆ­ಗಳ ನಿರೀಕ್ಷೆಯನ್ನೂ ಮೀರಿ, ಸ್ವತಃ ಬಿಜೆಪಿಗೇ ಅಚ್ಚರಿ ಹುಟ್ಟಿಸುವಂತೆ 16ನೇ ಲೋಕ­ಸಭೆಗೆ ಮೊದಲ ಸಲ ಸದಸ್ಯರಾಗಿ ಮೋದಿ ಪ್ರವೇಶಿಸಿ, ಪ್ರಧಾನಿಯಾಗಲಿರುವುದು ಭಾರತದ ಪ್ರಜಾಪ್ರಭುತ್ವದ ಅಚ್ಚರಿಗಳಲ್ಲಿ ಅಚ್ಚರಿ.

ತಂದೆ, ತಾಯಿ ಪ್ರಧಾನಿಯಾಗಿದ್ದ­ವರು ಈ ದೇಶದ ಪ್ರಧಾನಿಯಾದ ಉದಾಹರಣೆ­ಯಿದೆ (ಇಂದಿರಾ ಗಾಂಧಿ, ರಾಜೀವ್‌ ಗಾಂಧಿ). ಪ್ರತಿಷ್ಠಿತ ಕುಟುಂಬ­ದಿಂದ ಬಂದವರು ಪ್ರಧಾನಿಯಾದ ಉದಾಹರಣೆಯಿದೆ (ನೆಹರೂ), ಕಾಯಸ್ಥ ಕುಟುಂಬದಿಂದ ಬಂದವರು ಪ್ರಧಾನಿಯಾದ ನಿದ­ರ್ಶನವೂ ಇದೆ (ಲಾಲ್‌ ಬಹದ್ದೂರ್‌ ಶಾಸ್ತ್ರಿ). ಮುಖ್ಯಮಂತ್ರಿ­ಯಾದವರು ಪ್ರಧಾನಿ ಪಟ್ಟದಲ್ಲಿ ಕೆಲ ದಿನ ಕುಳಿತ ನೆನಪೂ ಇದೆ(ದೇವೇಗೌಡರು).

ಆದರೆ  ರೈಲ್ವೆ ಸ್ಟೇಷನ್‌ಗಳಲ್ಲಿ ಕೊರೆ­ಯುವ ಚಳಿಯಲ್ಲಿ ಚಹಾ ಮಾರಿದ ಗಾಣಿಗರ ಬಡ ಹುಡುಗ­ನೊಬ್ಬ ದೇಶದ ಚುಕ್ಕಾಣಿ ಹಿಡಿದ ಮೊದಲ ಉದಾಹರಣೆ ನರೇಂದ್ರ ದಾಮೋದರ ದಾಸ್‌ ಮೋದಿಯವರದು.

ಬಾಲ್ಯ: ಗುಜರಾತಿನ ಮೆಹಸಾನ್‌ ಜಿಲ್ಲೆಯ ವಡ್‌ನಗರದಲ್ಲಿ, 1950ರ ಸೆಪ್ಟೆಂಬರ್‌ 17ರಂದು ಜನಿಸಿದ ಮೋದಿ ಹಿಂದುಳಿದ     ‘ಮೋಧ್‌ ಘಾಂಚಿ’ (ಗಾಣಿಗ) ಸಮುದಾಯಕ್ಕೆ ಸೇರಿದ­ವರು. ತಂದೆ ದಾಮೋದರದಾಸ್‌ ಮೂಲ್‌ಚಂದ್‌ ಮೋದಿ ಮತ್ತು ತಾಯಿ ಹೀರಾಬೆನ್‌ ದಂಪತಿಯ ಆರು ಮಕ್ಕಳಲ್ಲಿ ಮೋದಿ ಮೂರನೆಯ ಕೂಸು.

‘ಚಿಕ್ಕಂದಿನಲ್ಲಿ ಅಪ್ಪನ ಜತೆಗೆ ರೈಲು ನಿಲ್ದಾಣ­ಗಳಲ್ಲಿ ಚಹಾ ಮಾರುತ್ತಿದ್ದೆ’ ಎಂದು ಮೋದಿ ಹೇಳಿಕೊಂಡಿದ್ದಾರೆ. ಈ ಸಮಯದಲ್ಲಿ ಅನೇಕ ಅಪಮಾನಗಳಿಗೆ ಒಳಗಾಗಿದ್ದಾರೆ. ಬಡತನದ ನೋವು ಅವರ ವ್ಯಕ್ತಿತ್ವಕ್ಕೆ ಬೇರೆಯದೇ ಖದರ್‌ ನೀಡಿತು. ಹಿರಿಯರು ಸಂಪ್ರ­ದಾಯ­ದಂತೆ ಅವರಿಗೆ ಯಶೋದಾ­ಬೆನ್‌ ಜತೆಗೆ ಬಾಲ್ಯ ವಿವಾಹ ಮಾಡಿದ್ದರು. ಈ ವಿವಾಹ ಊರ್ಜಿತವಾಗಲಿಲ್ಲ.

ಮುಂದೆ ಮೋದಿ ಎಳೆವಯಸ್ಸಿ­ನಲ್ಲಿಯೇ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದರು. ಸಂಘದ ವರಿಷ್ಠರಾದ ಗುರೂಜಿ ಗೋಳ್ವಾಲ್‌ಕರ್‌ ಮತ್ತು ಬಾಳಾಸಾಹೇಬ್‌ ದೇವರಸ್‌ ಪ್ರಭಾವ ಅವರ ವ್ಯಕ್ತಿತ್ವಕ್ಕೆ ಹೊಸ ಆಯಾಮ ನೀಡಿತು. ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಲ್ಲಿ ಸಕ್ರಿಯರಾಗಿದ್ದರು.

ಇಂದಿರಾ ಗಾಂಧಿ ಅವರು 1975ರಲ್ಲಿ ಆಂತರಿಕ ತುರ್ತುಪರಿಸ್ಥಿತಿ ಹೇರಿದಾಗ ಮೋದಿ ಹೋರಾಟದ ಹಾದಿ ಹಿಡಿದು ಭೂಗತ ಹೋರಾಟ ಮಾಡಿದರು, ಕರಪತ್ರ ಸಿದ್ಧಪಡಿಸಿದರು.  ಯುವನಾಯಕ­ರಾಗಿ ಸಂಘಟನೆಯ ಹಿರಿಯರ ಗಮನ ಸೆಳೆದರು.

ನಡುವೆ ಎರಡು ವರ್ಷ ಯಾರ ಕೈಗೂ ಸಿಗದೆ  ಶ್ರೀರಾಮ­ಕೃಷ್ಣಾಶ್ರಮದ ಮೂಲಕ ಹಿಮಾಲಯದ ಕಡೆ ಏಕಾಂಗಿಯಾಗಿ ಯಾತ್ರೆ ಕೈಗೊಂಡು ಅಲ್ಲಲ್ಲೇ ಕೆಲವು ಆಶ್ರಮಗಳಲ್ಲಿ ತಂಗುತ್ತಾ ಕಾಲಕಳೆದರು. ಮರಳಿ ಬಂದ ಅವರು ಚಹಾ ಮಾರುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಸಮಯದಲ್ಲಿ ಒಂದು ರೀತಿ ಗುಂಪಿ­ನಲ್ಲಿದ್ದೂ ಅಂತರ್ಮುಖಿ ವ್ಯಕ್ತಿತ್ವವನ್ನು ಅವರು ಮೂವತ್ತರ ವಯಸ್ಸಿನ ಒಳಗೇ ರೂಢಿಸಿಕೊಂಡರು.

ರಾಜಕೀಯ ಹೆಜ್ಜೆ
ಒಮ್ಮೆ ವಾಜಪೇಯಿ­ಯವರು ದೆಹಲಿಯಲ್ಲಿ ಇದ್ದು ಸಿಹಿ ತಿಂದು ದಪ್ಪ ಆಗುತ್ತಿದ್ದೀಯ, ಗುಜರಾತಿಗೆ ಹೋಗಿ ಏನಾದರು ಮಾಡು ಎಂದರು. ಆಗ ಮೋದಿ ಗುಜರಾತ್‌ನಲ್ಲಿ ಒಂದು ಶಾಲೆ ತೆಗೆಯುವ ಪ್ರಯತ್ನದಲ್ಲಿದ್ದರು! 2001ರಲ್ಲಿ ಮೊದಲ ಬಾರಿ ಗುಜರಾತ್‌ ಮುಖ್ಯಮಂತ್ರಿ ಯಾಗುವ ವರೆಗೂ ಅವರು ತೆರೆಮರೆಯಲ್ಲಿಯೇ ಇದ್ದರು. 2002ರ ಕೋಮು ಗಲಭೆ­ಯಲ್ಲಿ  ಸಾವಿರಕ್ಕೂ ಹೆಚ್ಚು ಜನರು, ಅದರಲ್ಲೂ ಮುಸ್ಲಿಮರು ಬಲಿ­ಯಾದರು. ಗಲಭೆ ನಿಯಂತ್ರಿಸಲು ಅವರ ನೇತೃತ್ವದ ಆಡಳಿತ ಪಕ್ಷ ವಿಫಲವಾಯಿತೆಂಬ ಟೀಕೆ ಕೇಳಿಬಂತು.

ಈ ಪ್ರಕರಣದ ಬಳಿಕ ಮೋದಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಾದಿತ ವ್ಯಕ್ತಿ ಎನಿಸಿಕೊಂಡರು. ಕಳೆದ ಒಂದು ದಶಕದಲ್ಲಿ ಮಾಧ್ಯಮ ಮತ್ತು ವಿವಿಧ ರಾಜಕೀಯ ಪಕ್ಷಗಳಿಂದ ಮೋದಿಯವರಷ್ಟು ಟೀಕೆಗಳನ್ನು  ಎದುರಿಸಿದವರು ಮತ್ತೊಬ್ಬರಿಲ್ಲ. ಸತತ ಮೂರು ಬಾರಿ ಮುಖ್ಯಮಂತ್ರಿ­ಯಾಗುವಷ್ಟರಲ್ಲಿ ಮೋದಿ ನೇರವಾಗಿ ಮಾಧ್ಯಮದ ಕಣ್ಣು ಕಿವಿಗೆ ದೊರಕದ ಕಾರ್ಯವೈಖರಿ ರೂಢಿಸಿಕೊಂಡರು. ಅವರ ಆಪ್ತರು ಈಗ ಮೋದಿ ಏನು ಯೋಚನೆ ಮಾಡುತ್ತಿದ್ದಾರೆ ಎಂದು ಮಾಧ್ಯಮಕ್ಕೆ ತಿಳಿಸುವ ಪರಿಪಾಠ ಬೆಳೆಯಿತು.
ಇಂದಿರಾ ಗಾಂಧಿ ಮತ್ತು ವಾಜಪೇಯಿ ನಂತರದ ಅತಿಜನಪ್ರಿಯ ನಾಯಕರಾಗಿ ಮೇಲೆದ್ದಿರುವ ಮೋದಿ ತಾವು ಸರ್ಕಾರ ನಡೆಸುವುದಿಲ್ಲ ಬದಲಿಗೆ ದೇಶ ಮುನ್ನಡೆಸುವೆ ಎಂದು ಹೇಳಿದ್ದಾರೆ.

ತಮ್ಮ ನೆಚ್ಚಿನ ಅಭಿವೃದ್ದಿ ಮಾದರಿ ಮತ್ತು ಸಂಘದ ರಾಷ್ಟ್ರೀಯ ಚಿಂತನೆ ಎರಡನ್ನೂ ತೂಗಿಸಿಕೊಂಡು ಹೋಗುವ ಹೊಣೆ ಈಗ ಮೋದಿ ಹೆಗಲಮೇಲಿದೆ. ಈಗ ಅವರು ಹಿಂದುತ್ವದ ಪ್ರತಿ­ಪಾದಕ ಸಾಂಸ್ಕೃತಿಕ ಸಂಘಟನೆ ಆರೆಸ್ಸೆಸ್‌ ಮುಖವಾಣಿಯಾಗಿ ದೇಶ ನಡೆಸುವರೇ ಅಥವಾ ಬಹುಚರ್ಚಿತ ಅಭಿವೃದ್ಧಿ ಮಾದರಿಯನ್ನು ಜಾರಿಗೆ ತರುವರೇ? ಪಕ್ಷದ ಒಳಗೇ ಹೊಗೆಯಾಡುತ್ತಿರುವ ಅಸಮಾಧಾನದ ಹೊಗೆಯನ್ನು ಹೇಗೆ ನಿಭಾಯಿಸುವರು? ಅವರೇ ಸೈದ್ಧಾಂತಿಕ­ವಾಗಿ ಹೇಳುತ್ತಾ ಬಂದಿರುವ ಸ್ವದೇಶಿ ಆರ್ಥಿಕ ನೀತಿ ಮತ್ತು ಭಾರತೀಯ ನೆಲೆಗಟ್ಟಿನ ಶಿಕ್ಷಣವನ್ನು ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ತರಬಲ್ಲರು? ಸಂವಿ­ಧಾನದ 370 ನೇ ವಿಧಿಯ ತಿದ್ದುಪಡಿ, ರಾಮಮಂದಿರ ನಿರ್ಮಾಣ ಮುಂತಾದ ವಿಷಯಗಳಲ್ಲಿ ದೇಶದ ಅಲ್ಪಸಂಖ್ಯಾತ ಸಮುದಾಯಗಳನ್ನೂ ಹೇಗೆ ಒಟ್ಟಿಗೆ ತೆಗೆದುಕೊಂಡು ಹೋಗುವರು ಎಂಬುದು ಮೋದಿ ಮತ್ತು ದೇಶದ ಮುಂದಿರುವ ಪ್ರಶ್ನೆಗಳು.

ವಾಜಪೇಯಿ ಯಾರನ್ನೂ ಗುರುತಿಸ­ಲಾಗದ ಸ್ಥಿತಿಯಲ್ಲಿ ಮಲಗಿದ್ದಾರೆ, ಆಡ್ವಾಣಿ ಉನ್ನತ ಹುದ್ದೆಗೆ ಹೋಗ­ಬಹುದು. ನರೇಂದ್ರ ಮೋದಿ ಪ್ರಧಾನಿ­ಯಾಗಿ ಪ್ರಮಾಣ ವಚನ ಸ್ವೀಕರಿಸ­ಲಿದ್ದಾರೆ. ಬಿಜೆಪಿ ಯಲ್ಲಿ ವಾಜಪೇಯಿ, ಅಡ್ವಾಣಿ ಯುಗ ಮುಗಿದು ಮೋದಿ ಯುಗ ಆರಂಭವಾಗಿದೆ.

ಸ್ವಂತ ವ್ಯಕ್ತಿತ್ವ ಮತ್ತು ಶಿಸ್ತಿನ ಸಂಘಟನೆ
1970ರ ದಶಕದಲ್ಲಿ ಆರೆಸ್ಸೆಸ್‌ ಪೂರ್ಣಾವಧಿ ಕಾರ್ಯಕರ್ತ ರಾಗಿದ್ದಾಗಲೂ ಕೇವಲ ಸರಳತೆಗೆ ತೃಪ್ತರಾಗದ ಮೋದಿ ಶಿಸ್ತಿನ ಸಂಘಟನೆಯ ಮೂಲ ಚೌಕಟ್ಟಿನೊಳಗೆ ಸ್ವಂತಿಕೆ ಬೆಳೆಸಿಕೊಂಡರು. ಅವರ ಅಂದಿನ ಆಪ್ತರು ನೆನಪಿಸಿಕೊಳ್ಳುವಂತೆ ಉಳಿದವರು ಒಗೆದ ಶುಭ್ರ ಬಟ್ಟೆ ಹಾಕಿಕೊಂಡರೆ ಮೋದಿ ಇಸ್ತ್ರಿ ಮಾಡಿದ ಬಟ್ಟೆ ತೊಡುತ್ತಿದ್ದರು.

ತಂತ್ರಜ್ಞಾನದ ಜೊತೆ ಮೊದಲಿನಿಂದ ಸಲಿಗೆ ಬೆಳೆಸಿಕೊಂಡಿದ್ದ ಮೋದಿ ಯಾವುದೇ ಪ್ರಮುಖ ರಾಜಕೀಯ ಹುದ್ದೆ ಏರುವ ಮೊದಲೇ ಅಂತರ್ಜಾಲ ಬಳಸುವುದು, ಕಂಪ್ಯೂಟರ್‌, ಲ್ಯಾಪ್‌­ಟಾಪ್‌ ಲೀಲಾಜಾಲವಾಗಿ ಬಳಸುತ್ತಿದ್ದರು. ಹೊಸ ವಿಚಾರ, ಹೊಸತನಕ್ಕೆ ಅವರು ಸದಾ ತಮ್ಮನ್ನು ಒಡ್ಡಿಕೊಳ್ಳುತ್ತಲೇ ಬಂದರು. ಗುಜರಾತಿನ ಮುಖ್ಯಮಂತ್ರಿಯಾದಾಗ ಈ ತಂತ್ರ­ಜ್ಞಾನದ ಅರಿವಿನ ಲಾಭವನ್ನು ಆಡಳಿತ ಚುರುಕುಗೊಳಿಸುವಲ್ಲಿ ಬಳಸಿಕೊಂಡರು.

1985ರಲ್ಲಿ ಆರೆಸ್ಸೆಸ್‌ ಪ್ರಚಾರಕ ಮೋದಿಯವರನ್ನು ಬಿಜೆಪಿಗೆ ಕಳುಹಿಸಿಕೊಟ್ಟಿತು. ಮೋದಿ ಗುಜರಾತ್‌ ಬಿಜೆಪಿಯಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು, ಅವುಗಳನ್ನು ಚೆನ್ನಾಗಿ ನಿಭಾಯಿ­ಸುತ್ತಲೇ ಮೇಲೆ ಬಂದರು. ಸಂಘ ಮತ್ತು ಪಕ್ಷ ಏನು ಹೇಳುತ್ತದೆಯೋ ಅದನ್ನು ಅವರು ಮಾಡುತ್ತಾ ಬಂದರು.ಉದಾ­ಹರಣೆಗೆ ಸಂಘ ಹೇಳಿತು ಎಂದು ಅವರು ಬಿ.ಎ ಪರೀಕ್ಷೆಗೆ ಕುಳಿತು ತೇರ್ಗಡೆಯಾದರು.
ಅದೇ ರೀತಿ ರಾಜ್ಯಶಾಸ್ತ್ರದಲ್ಲಿ ಎಂ.ಎ., ಮಾಡಲು ಹಿರಿಯರು ಹೇಳಿದಾಗ ಅದನ್ನು ಪಾಲಿಸಿದರು. 1991ರಲ್ಲಿ ಬಿಜೆಪಿ  ನಾಯಕ ಡಾ.ಮುರಳಿ ಮನೋಹರ ಜೋಶಿ ಕನ್ಯಾ­ಕುಮಾರಿಯಿಂದ ಶ್ರೀನಗರಕ್ಕೆ ‘ಏಕತಾಯಾತ್ರೆ’ ಕೈಗೊಂಡಾಗ ಅದರ ಪೂರ್ಣ ಹೊಣೆ ಮೋದಿ ಹೆಗಲಿಗೇರಿತ್ತು.

ಈಗ 16ನೇ ಲೋಕಸಭೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆಯಾದ ಮೇಲೆ ಇಡೀ ದೇಶದಲ್ಲಿ ಒಟ್ಟು ಮೂರು ಲಕ್ಷ ಕಿ.ಮೀ. ಸುತ್ತಿ ಚುನಾವಣಾ ಭಾಷಣಗಳನ್ನು ಮಾಡಿದ ಮೋದಿಗೆ ಆಗಲೇ ದೇಶದ ಉದ್ದಗಲಗಳ ಸೂಕ್ಷ್ಮ ಪರಿಚಯ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT