ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಪಕ್ಷಗಳ ಗೆಲುವು, ರಾಷ್ಟ್ರೀಯ ಪಕ್ಷಗಳಿಗೆ ಪಾಠ

ವಿಶ್ಲೇಷಣೆ
Last Updated 9 ನವೆಂಬರ್ 2015, 4:12 IST
ಅಕ್ಷರ ಗಾತ್ರ

ರಾಷ್ಟ್ರದ  ಜನ ಕುತೂಹಲ ಮತ್ತು ಆತಂಕದಿಂದ ನಿರೀಕ್ಷಿಸುತ್ತಿದ್ದ ಬಿಹಾರ  ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಸಹಜವಾಗಿ ದೇಶದಲ್ಲಿ ಅನಾರೋಗ್ಯಕರವಾಗಿ ಹಬ್ಬುತ್ತಿದ್ದ ಅಸಹಿಷ್ಣುತೆಯ ವಾತಾವರಣದಿಂದ ಆತಂಕಗೊಂಡಿದ್ದ ಜನರಿಗೆ ನೆಮ್ಮದಿ ಸಿಕ್ಕಂತಾಗಿದೆ. ಅಭಿವೃದ್ಧಿ ಮತ್ತು ಅಸಹಿಷ್ಣುತೆ ಇವುಗಳ ಮಧ್ಯೆ ನಡೆದ ಸಂಘರ್ಷದಲ್ಲಿ ಅಭಿವೃದ್ಧಿ ಗೆದ್ದಿದೆ ಎಂದು ಬಹಳ ಸರಳವಾಗಿ ಈ ಚುನಾವಣೆಯ ಫಲಿತಾಂಶವನ್ನು ವ್ಯಾಖ್ಯಾನಿಸುವುದಾಗಲೀ ಅಥವಾ ಈ ಫಲಿತಾಂಶ ಬಿಹಾರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳುವುದಾಗಲಿ ಅದು ಪರಿಪೂರ್ಣ ವಿಶ್ಲೇಷಣೆಯಾಗುವದಿಲ್ಲವೆಂದೇ ನನ್ನ ಭಾವನೆ. 

ಏಕೆಂದರೆ ಈ ಚುನಾವಣೆಯಲ್ಲಿ ಬಳಕೆಯಾದ ವಸ್ತುವಿಷಯಗಳು, ಉದ್ಘಾರಗೊಂಡ ಮಾತುಗಳು, ಪಡೆದುಕೊಂಡ ತಿರುವುಗಳು ಇವುಗಳನ್ನೆಲ್ಲಾ ಗಮನಿಸಿದಾಗ ಇದು ದೇಶದ ಉದ್ದಗಲಕ್ಕೂ ತನ್ನದೇ ಆದ ಸಂದೇಶಗಳನ್ನು ರವಾನಿಸಿದೆ. ಸಾಮಾನ್ಯವಲ್ಲದ ಚುನಾವಣೆ: ಒಂದು ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶ ಒಂದು ಸಾಮಾನ್ಯ ಘಟನೆಯಾಗಿರಬೇಕಾಗಿತ್ತು.

ಆದರೆ ಇದು ಇಷ್ಟೊಂದು ಮಹತ್ವ ಪಡೆದುಕೊಳ್ಳಲು ಕಾರಣವಾದ ಹಿನ್ನೆಲೆಯನ್ನು ನೋಡಿದಾಗ ಈ ಚುನಾವಣೆ ಒಂದು ಸಾಮಾನ್ಯ ಜನತಾಂತ್ರಿಕ ಪ್ರಕ್ರಿಯೆಗಿಂತಲೂ ಮಿಗಿಲಾಗಿ ದೇಶಾದ್ಯಂತ ಜನರನ್ನು ಮರು ಚಿಂತನೆಗೆ ಹಚ್ಚಿದೆ ಎಂದೇ ನನ್ನ ಭಾವನೆ. ಈ ಚುನಾವಣೆ ಒಂದು ಸಾಮಾನ್ಯ ಚುನಾವಣೆಯಂತೆ ನಡೆದಿದ್ದಲ್ಲಿ ಸಹಜವಾಗಿ ನಿತೀಶ್ ಈಗ ಗೆದ್ದಿರುವಂತೆಯೇ ಗೆದ್ದುಬರುತ್ತಿದ್ದರು. ಆದರೆ ಈ ಚುನಾವಣೆಗೆ ವಿಶೇಷ ಮಹತ್ವ ಬಂದದ್ದು ನಿತೀಶ್‌ ಅವರಿಂದಲ್ಲ.  ಬದಲಿಗೆ ಮೋದಿಯವರಿಂದ ಎಂಬುದೇ ಈಗ ವಿಶ್ಲೇಷಣೆಗೆ ಗ್ರಾಸ ಒದಗಿಸಿರುವುದು.

ಕುಸಿದ ಮೋದಿ ಅಲೆ: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೋದಿಯವರು ಪ್ರಧಾನಿಯಾಗಿರಲಿಲ್ಲ.  ಆದರೆ 2014ರಲ್ಲಿ ನರೇಂದ್ರ ಮೋದಿ ಎಂಬ ಭ್ರಮಾತ್ಮಕ ಅಲೆ ದೇಶವನ್ನು ಅಪ್ಪಳಿಸಿತಷ್ಟೆ. ಅದರ ಪರಿಣಾಮವಾಗಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಮೋದಿಯವರು ಪ್ರಧಾನಿಯಾಗಿ, ಮಾಧ್ಯಮಗಳ (ಕೆಲವು) ನೀಲಿಗಣ್ಣಿನ ಮನುಷ್ಯ ಅಮಿತ್ ಷಾ ಬಿಜೆಪಿ ಅಧ್ಯಕ್ಷರಾದ ಮೇಲೆ ಮೋದಿಯವರ ಕಣ್ಣು ಬಿದ್ದದ್ದೇ ಬಿಹಾರದ ಮೇಲೆ.  ಬಿಜೆಪಿ ಹೆಚ್ಚು ತಲೆಕೆಡಿಸಿಕೊಂಡಿದ್ದು ಬಿಹಾರದ ಬಗ್ಗೆಯೇ.

ಮಾಂಝಿಯನ್ನು ದಾಳವಾಗಿ ಅದು ಬಳಸಿಕೊಂಡ ರೀತಿಯೇ ಇದಕ್ಕೆ ಸಾಕ್ಷಿ.  ಹೀಗಾಗಿ 2015ರಲ್ಲಿ  ಬಿಹಾರದ ಜನ ಚುನಾವಣೆಗೆ ಹೋಗಲಿದ್ದಾರೆ ಎಂಬ ಕಾರಣಕ್ಕಾಗಿಯೇ ಅದಕ್ಕೆ ಪ್ರತಿಯಾಗಿ ಬಿಹಾರದಲ್ಲಿ ಬಿಜೆಪಿ  ತನ್ನದೇ ಆದ ತಂತ್ರಗಳಲ್ಲಿ ನಿರತವಾಯಿತು.  ಬಿಹಾರದ ಚುನಾವಣೆಯ ಫಲಿತಾಂಶ ಒಂದು ವೇಳೆ ತನಗೆ ವಿರುದ್ಧವಾಗಿ ಬಂದಲ್ಲಿ ಅದು  ಮೋದಿಯವರ  ಜನಪ್ರಿಯತೆಗೆ  ಎಲ್ಲಿ ಕುಂದು ತರುತ್ತದೆಯೋ ಎಂಬ  ಆತಂಕ ಮತ್ತು ಅನುಮಾನದಿಂದ ಬಿಜೆಪಿ  ಬಿಹಾರದಲ್ಲಿ ಹೆಣೆಯತೊಡಗಿದ  ಸಮರ ತಂತ್ರಗಳು ತನ್ನಷ್ಟಕ್ಕೆ ತಾನೇ  ಬಿಹಾರ ವಿಧಾನ ಸಭಾ ಚುನಾವಣೆಯ ಫಲಿತಾಂಶವನ್ನು  ಮೋದಿ ಸರ್ಕಾರದ 500 ದಿನಗಳ ಆಡಳಿತಕ್ಕೆ ಜನ ನೀಡುವ ಜನಾದೇಶ ಎಂದು ಪರಿಭಾವಿಸುವಂತಾಯಿತು.

ಇದಕ್ಕೆ ಉತ್ತಮ ನಿದರ್ಶನವೆಂದರೆ ಬಿಜೆಪಿಯ ವಕ್ತಾರ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳಿದ ಮಾತು. ಬಿಹಾರದ ಚುನಾವಣೆಯಲ್ಲಿ ನಮ್ಮ ನಾಯಕ ಮತ್ತು ಕೇಂದ್ರ ಬಿಂದು ನರೇಂದ್ರ ಮೋದಿಯವರೇ. ಅವರು ಎಲ್ಲ ಕಡೆಯೂ ಪ್ರಚಾರ ಮಾಡುತ್ತಾರೆ. ಇದು ಅವರ ನೇತೃತ್ವದ ಚುನಾವಣೆ ಎಂದು ಹೇಳಿದರಷ್ಟೇ ಅಲ್ಲ, ಅದರಂತೆಯೇ ಮೋದಿಯವರೂ ಕೂಡ 30ಕ್ಕೂ ಮಿಗಿಲಾಗಿ ಪ್ರಚಾರ ಸಭೆಗಳನ್ನು ಬಿಹಾರದಲ್ಲಿ ನಡೆಸಿದರು.  ಹಾಗಾಗಿ  ಬಿಹಾರದ ಚುನಾವಣೆ ಮೋದಿ ವರ್ಸಸ್‌ ಇತರರು ಎಂದು ಭಾವಿಸುವಂತಹ ವಾತಾವರಣವನ್ನು ಸೃಷ್ಟಿಸಿದವರೇ ಬಿಜೆಪಿಯವರು.

ಹೀಗೆ  ಮೋದಿ ಕೇಂದ್ರಿತ ಚುನಾವಣೆಯಾಗಿ ಪರಿವರ್ತಿತವಾದ 2015ರ ಚುನಾವಣೆ ಸಹಜವಾಗಿ ನಿತೀಶ್ ಅಲೆಯನ್ನು ಮಂಕುಗೊಳಿಸಬೇಕಿತ್ತು.  ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಎದೆಯುಬ್ಬಿಸಿ ನಿಲ್ಲುವಂತಹ ಫಲಿತಾಂಶ ಹೊರಬೀಳಬೇಕಾಗಿತ್ತು. ಏಕೆಂದರೆ 2014 ರ ಲೋಕಸಭಾ ಚುನಾವಣೆಯಲ್ಲಿ  ದೇಶಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದು  ತಮ್ಮದೇ ಆದ ವಿಶಿಷ್ಟ ಭಾವ ಭಂಗಿಯಲ್ಲಿ ಆಕ್ರಮಣಕಾರಿ ಧಾಟಿಯಲ್ಲಿ ದೇಶದ ಉದ್ದಗಲಕ್ಕೂ ಹರಿಹಾಯುವಂತೆ ಹರಿದಾಡಿದ ಮೋದಿಯವರಿಗೆ ಸಿಕ್ಕ ಅಭೂತಪೂರ್ವ ಜನಬೆಂಬಲದಿಂದ ಸಿಕ್ಕ ಅಧಿಕಾರವನ್ನು ಬಳಸಿಕೊಂಡ ರೀತಿ ಜನರಿಗೆ  ಮೆಚ್ಚುಗೆಯಾಗಿದ್ದಲ್ಲಿ ಮೋದಿ ಕೇಂದ್ರಿತ ಬಿಹಾರ ಚುನಾವಣೆಯಲ್ಲೂ 2014ರ ಲೋಕಸಭಾ ಚುನಾವಣೆಯ ಫಲಿತಾಂಶವೇ ಮರುಕಳಿಸಬೇಕಿತ್ತು.

ಆದರೆ ಈಗ ಹೊರಬಿದ್ದಿರುವ ಬಿಹಾರ  ಫಲಿತಾಂಶ 2014ರ ಲೋಕಸಭಾ ಚುನಾವಣೆಯ ಫಲಿತಾಂಶ ಭ್ರಮಾತ್ಮಕ ತಳಹದಿಯ ಮೇಲೆ ದಿಢೀರ್ ನಿರ್ಮಿತವಾದ ಮರಳಿನ ಮನೆ ಎಂಬುದನ್ನು ಹೇಳುತ್ತಿದೆ. ಮೋದಿರಹಿತ 2010ರ  ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿಕೊಂಡಿದ್ದ ಸ್ಥಾನಗಳು 94 ಇದ್ದರೆ ಮೋದಿ ಸಹಿತ 2015ರ ರ ವಿಧಾನಸಭಾ ಚುನಾವಣೆಯಲ್ಲಿ ಆ ಸ್ಥಾನಗಳ ಸಂಖ್ಯೆ 70ರ ಆಸುಪಾಸಿಗೆ ಕುಸಿದಿದೆ ಎಂದರೆ ಅಷ್ಟರ ಮಟ್ಟಿಗೆ ಮೋದಿ ಅಲೆ ಕ್ಷೀಣಿಸಿದೆ ಎಂದೇ ಅರ್ಥ. ಹಾಗಾಗಿ 2014ರ ಭ್ರಮಾಲೋಕದಿಂದ ಜನ ವಾಸ್ತವತೆಗೆ ಮರಳುತ್ತಿದ್ದಾರೆ ಎಂದು ಧಾರಾಳವಾಗಿ ಹೇಳಬಹುದು.

ಕೈಕೊಟ್ಟ ಜಾತಿ ಲೆಕ್ಕಾಚಾರ: ಬಿಹಾರದಲ್ಲಿ ಏಕೆ ಎಲ್ಲ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲೂ ಜಾತಿ ಲೆಕ್ಕಾಚಾರ ಕೆಲಸ ಮಾಡಿಯೇ ಮಾಡುತ್ತದೆ.  ಆದರೆ ಜಾತಿ ಮತ್ತು ಧರ್ಮವನ್ನು ಪೈಪೋಟಿಯಿಂದ ಚುನಾವಣೆಯವಸ್ತುವಿಷಯವನ್ನಾಗಿ ಮಾಡಿದ ಬಿಜೆಪಿಯ ಸಮರತಂತ್ರ ಅದಕ್ಕೇ ಮುಳುವಾಯಿತೆನ್ನಬಹುದು. ಬಿಹಾರದಲ್ಲಿ ಬನಿಯಾಗಳು ಮತ್ತು ಬ್ರಾಹ್ಮಣರು ಬಹುಸಂಖ್ಯಾತರು.  ನಂತರ ಭೂಮಿಹಾರ್, ಯಾದವ, ಖುಷ್‌ವಾ, ರಜಪೂತ ಸಮುದಾಯಗಳು. ಮುಸಲ್ಮಾನರು ಮತ್ತು ಪರಿಶಿಷ್ಠ ಜಾತಿಗಳು ನಿರ್ಣಾಯಕ ಪಾತ್ರಧಾರಿಗಳು. 

ನಿತೀಶ್‌ಕುಮಾರ್‌ರವರ ಸಮುದಾಯವಾದ ಕುರ್ಮಿ ಜಾತಿ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ 4  ಮಾತ್ರ. ಆದಾಗ್ಯೂ ನಿತೀಶ್ ಕುಮಾರ್‌ಗೆ ಬಿಹಾರ ರಾಜ್ಯದಲ್ಲಿ ನಿರಂತರವಾಗಿ ಸಿಗುತ್ತಾ ಬಂದ ಜನಬೆಂಬಲ ಜಾತಿ ಧರ್ಮಗಳಿಗೆ ಮೀರಿದ್ದು ಎಂಬ ಸರಳ ಸತ್ಯವನ್ನು ಬಿಜೆಪಿ ಅರ್ಥಮಾಡಿಕೊಳ್ಳಲಿಲ್ಲವೆನಿಸುತ್ತದೆ. ಹಳಿ ತಪ್ಪಿದ್ದ ಬಿಹಾರದ ರಾಜ್ಯಾಡಳಿತವನ್ನು  ತನ್ನ ಸರಳ ಮತ್ತು ದಕ್ಷ ನಡವಳಿಕೆಯಿಂದ ಸರಿದಾರಿಗೆ ತಂದ ನಿತೀಶ್ ಕುಮಾರ್‌ರವರು ಅನುಸರಿಸಿದ್ದು ಮತಾಂಧ ತಂತ್ರವನ್ನಲ್ಲ ಬದಲಿಗೆ ಅಭಿವೃದ್ಧಿಯ ಮಂತ್ರವನ್ನು.

ಚುನಾವಣೆಯ ಪ್ರಾರಂಭದಲ್ಲಿ ಆರ್ಥಿಕ ಅಭಿವೃದ್ಧಿಯ ವಿಷಯವನ್ನೇ ಒತ್ತುಕೊಟ್ಟು ಮಾತನಾಡಲು ಆರಂಭಿಸಿದ ಮೋದಿಯವರು ಕೋಟಿಗಟ್ಟಲೆ ಹಣದ ವಿಶೇಷ ಪ್ಯಾಕೇಜ್‌ಗಳ ಘೋಷಣೆ ಮಾಡಿದರು.  ಆದರೆ ಬರುಬರುತ್ತಾ ತಮ್ಮ ಘೋಷಣೆಗಳು ಜನರಲ್ಲಿ ವಿಶ್ವಾಸ ಮೂಡಿಸುತ್ತಿಲ್ಲ ಎಂಬ ಅರಿವಾದ ಮೇಲೆ ಜಾತಿ ಮತ್ತು ಧರ್ಮದ ರಾಜಕಾರಣವನ್ನೇ ಚುನಾವಣಾ ತಂತ್ರವನ್ನಾಗಿ ಪ್ರಯೋಗಿಸತೊಡಗಿದರು. ಒಂದು ಹಂತದ ಚುನಾವಣೆ ನಡೆದು ಮತ್ತೊಂದು ಹಂತದ ಚುನಾವಣೆ ನಡೆಯುವ ಹೊತ್ತಿಗೆ ಬಿಜೆಪಿ, ಪ್ರತಿ ಹಂತಕ್ಕೂ ಒಂದೊಂದು ರೀತಿಯ ಜಾತಿ ಮತ್ತು ಧರ್ಮದ ವಿಷಯಗಳನ್ನು  ಬಳಕೆ ಮಾಡಿಕೊಳ್ಳತೊಡಗಿತು.

ಮೇಲ್ಜಾತಿಯ ಮತದಾರರು  ನಿರ್ಣಾಯಕರಾಗಿರುವ ಚುನಾವಣಾ ಹಂತದಲ್ಲಿ ಆರ್ಎಸ್ಎಸ್ ಮೂಲಕ ಮೀಸಲಾತಿಯ ಪುನರ್ ವಿಮರ್ಶೆ ಎಂಬ ವಿಷಯವನ್ನು ಹರಿಬಿಡಲಾಯಿತು.  ಹಿಂದುಳಿದ ಜಾತಿಗಳ ಮತ್ತು  ಮೇಲ್ಜಾತಿಗಳ ಮತದಾರರು ಹೆಚ್ಚಿದ್ದು ಮುಸ್ಲಿಮರ ಸಂಖ್ಯೆಯೂ ನಿರ್ಣಾಯಕವಾಗಿರುವ ಚುನಾವಣಾ ಹಂತದಲ್ಲಿ ಗೋಮಾಂಸದ ವಿಷಯ, ದಾದ್ರಿ  ಪ್ರಕರಣ ಇವುಗಳನ್ನು  ವ್ಯವಸ್ಥಿತವಾಗಿ ತೇಲಿ ಬಿಡಲಾಯಿತು.

ಪ್ರಾದೇಶಿಕತೆಗೆ ಒತ್ತು: ರಾಜಕೀಯವಾಗಿ ಹೇಳುವುದಾದರೆ ಈ ಫಲಿತಾಂಶ ರಾಷ್ಟ್ರೀಯ ಪಕ್ಷಗಳಿಗೆ ಒಂದು ದೊಡ್ಡ ಪಾಠ.  ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕತೆಯನ್ನು ತೊಡೆದುಹಾಕಲು ಸಾಧ್ಯವೇ ಇಲ್ಲವೆಂಬ ಸಂದೇಶವನ್ನು ಸ್ಪಷ್ಟವಾಗಿ ಸಾರಿದೆ.  ಲಾಲೂ ಅಂತಹವರ ಸ್ನೇಹ ಮಾಡಿಕೊಂಡೂ ಚುನಾವಣೆಗೆ ಹೋದ ನಿತೀಶ್ ಕುಮಾರ್‌ರವರ ಬದ್ಧತೆಯನ್ನು ಜನ ಅನುಮಾನಿಸಲಿಲ್ಲ.  ಅವರ ಬೆಂಬಲಕ್ಕೆ ನಿಂತರು ಎಂದರೆ  ಅದು ಪ್ರಾದೇಶಿಕ ಪಕ್ಷಗಳಿಗೆ ಸಿಕ್ಕ  ಬೆಂಬಲ ಎಂದೇ ಭಾವಿಸಬೇಕಾಗುತ್ತದೆ.  ಕಾಂಗ್ರೆಸ್‌ನಂತಹ ಒಂದು ಕಾಲದ ರಾಷ್ಟ್ರೀಯ ಪಕ್ಷ ನಿತೀಶ್ ರವರ ಮಹಾಮೈತ್ರಿ ಕೂಟದ ಬಾಲಂಗೋಚಿಯಾಗಬೇಕಾಯಿತೆಂದರೆ ಅಷ್ಟರಮಟ್ಟಿಗೆ ಇದು ರಾಷ್ಟ್ರೀಯ ಪಕ್ಷಗಳ  ಆತ್ಮಾವಲೋಕನಕ್ಕೆ ಎಡೆಮಾಡಿಕೊಡಬೇಕು.

ಜಾತ್ಯತೀತತೆ, ಸಾಮಾಜಿಕ ನ್ಯಾಯ, ಸರಳ, ಜನಪರ ಆಡಳಿತ, ಪ್ರಾದೇಶಿಕತೆಯ ಒತ್ತಾಸೆಯುಳ್ಳ ಸಮಾನ ಮನಸ್ಕ ಜನರೂ ಮತ್ತು ಪಕ್ಷಗಳ ಒಕ್ಕೂಟದತ್ತ ಜನರ ಚಿತ್ತ ಹರಿಯುತ್ತಿದೆ ಎಂಬ ಸ್ಪಷ್ಟ ಸಂದೇಶವನ್ನು ಈ ಫಲಿತಾಂಶ ರವಾನಿಸಿದೆ.  2014ರ ರ ಲೋಕಸಭಾ ಚುನಾವಣೆಯ ನಂತರ  ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ದೇಶದ ಭವಿಷ್ಯದ ಬಗ್ಗೆ ಕಾಳಜಿ ಇಟ್ಟುಕೊಂಡವರಿಗೆ ಆತಂಕ ಉಂಟು ಮಾಡುವಂತಹ ಸಂಗತಿಗಳಾಗಿವೆ. 

ಆರ್ಥಿಕ, ಸಾಮಾಜಿಕ ಅಭಿವೃದ್ಧಿಯ ಯೋಜನೆಗಳು ಹೊಸ ಚಿಂತನೆ ಮತ್ತು ಹೊಸ ಸ್ವರೂಪದಲ್ಲಿ ಹೊಸ ಬಗೆಯ ಕಾರ್ಯಕ್ರಮಗಳಾಗಿ ಜಾರಿಗೆ ಬರಲಿವೆ ಎಂಬ  ನಿರೀಕ್ಷೆ ಹೊತ್ತಿದ್ದ  ಜನಸಾಮಾನ್ಯರು ಕ್ರಮೇಣ ವಾಸ್ತವ ಸತ್ಯಗಳನ್ನು ಅರ್ಥಮಾಡಿಕೊಳ್ಳತೊಡಗಿದ ಮೇಲೆ ಅಭಿವೃದ್ಧಿಯ ವಿಷಯವನ್ನು ಗೌಣವಾಗಿಸಿ ಭಾವನಾತ್ಮಕ ವಿಷಯಗಳನ್ನು ಅಬ್ಬರವಾಗಿಸಿ ಜನರ ಚಿಂತಕ ಚಿಕಿತ್ಸಕ ಮನಸ್ಸಿನ ಮೇಲೆ ಮಂಪರು ಕವಿಸುವ ಪ್ರಯತ್ನ ನಡೆಯತೊಡಗಿದ್ದು ವಿಷಾದಕರ ಸಂಗತಿ.

ಹಾಗಾಗಿಯೇ ಅಭಿವೃದ್ಧಿಯ ವಿಷಯವಾಗಲಿ, ರೈತರ ಆತ್ಮಹತ್ಯೆಯ ವಿಷಯವಾಗಲಿ, ಯುವಕರ ನಿರುದ್ಯೋಗದ ಸಮಸ್ಯೆಯಾಗಲಿ, ಸಾಮಾಜಿಕ ನ್ಯಾಯವಾಗಲಿ, ಚರ್ಚೆ ಮತ್ತು ಚಿಂತನೆಯ ಮುಂಚೂಣಿಯಲ್ಲಿರದೆ ಗೋಮಾಂಸ, ಹಂದಿ ಮಾಂಸ, ದಾದ್ರಿ, ಮೀಸಲಾತಿ, ಭಗವದ್ಗೀತೆ ಇಂತಹ ಅನವಶ್ಯಕ ವಿವಾದಾಸ್ಪದ ಸಂಗತಿಗಳೇ ಆದ್ಯತಾ ವಿಷಯಗಳಾದವು. ಇದರ ಪರಿಣಾಮವಾಗಿ ಸಹಿಷ್ಣುತೆಯ ನೆಲಕ್ಕೆ ಹೆಸರಾಗಿದ್ದ ದೇಶದಲ್ಲಿ ಅಸಹಿಷ್ಣುತೆಯ ಭಯೋತ್ಪಾದನೆ ಆರಂಭವಾಯಿತು. ಜನತಂತ್ರದ ಥಳಕು ಪೋಷಾಕಿನಲ್ಲಿ ಮೂಲಭೂತವಾದದ ಕೊಳಕು ವಿಷಯಗಳು ಹೊರಬರತೊಡಗಿತು. 

ಹೀಗಾಗಿ ದೇಶ ಎತ್ತ ಹೋಗುತ್ತಿದೆಯೋ ಎಂಬ ಆತಂಕಕ್ಕೆ ಜನ ಒಳಗಾಗಿದ್ದಾಗಲೇ ಬಿಹಾರ ವಿಧಾನಸಭಾ ಚುನಾವಣೆ ನಡೆಯಿತು. ಜನರ ಅನುಮಾನಕ್ಕೆ ಪುಷ್ಟಿಕೊಡುವಂತೆ ಈ ಚುನಾವಣೆಯಲ್ಲೂ ಅಂತಹ ಕೊಳಕು ಸಂಗತಿಗಳೇ ಚುನಾವಣಾ ವಸ್ತು ವಿಷಯಗಳಾದವು.  ಹಾಗಾಗಿ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಕೇವಲ ಅಲ್ಲಿಗಷ್ಟೇ ಅಲ್ಲ, ದೇಶಕ್ಕೂ ಒಂದು ಸಂದೇಶ ನೀಡುವಂತಹುದಾಗಿತ್ತು.  ಸದ್ಯ ಈಗ ಬಂದಿರುವ ಫಲಿತಾಂಶ  ನಮ್ಮ ಆತಂಕವನ್ನು ಅಷ್ಟರಮಟ್ಟಿಗೆ ನಿವಾರಣೆ ಮಾಡಿದೆ ಎಂದೆನ್ನಬಹುದು.  ಬಿಹಾರದ ತನ್ನ ನೆಲದಲ್ಲಿ ಅಂತೂ ಬುದ್ಧ ನಕ್ಕಿದ್ದಾನೆ.  ಆ ಬುದ್ಧ ಬೆಳಕು ಈಗಲಾದರೂ ನಮ್ಮ ರಾಜಕೀಯ ಪಕ್ಷಗಳಿಗೆ ಮತ್ತು ರಾಜಕಾರಣಗಳಿಗೆ ಸರಿದಾರಿ ತೋರಿಸಲಿ ಎಂಬುದು ಜನರ ಆಶಯ.

(ಲೇಖಕ ಕಡೂರು ಶಾಸಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT