ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸುಕಾಗುತ್ತಿರುವ ಎಎಪಿ ಜನಪ್ರಿಯತೆ

ರಾಜ್ಯವಾರ್ತೆ
Last Updated 24 ಮೇ 2015, 19:30 IST
ಅಕ್ಷರ ಗಾತ್ರ

ನವದೆಹಲಿ:  ದೇಶದಲ್ಲಿ ಈಗಿರುವ ರಾಜಕೀಯ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಸಂಕಲ್ಪದೊಂದಿಗೆ ಅರವಿಂದ ಕೇಜ್ರಿವಾಲ್‌ ಅವರು  ಚುನಾವಣೆಯಲ್ಲಿ ಗೆದ್ದರು. ಮೌಲ್ಯಾಧಾರಿತ ರಾಜಕಾರಣದ ಮಂತ್ರ ಜಪಿಸುತ್ತ ದೆಹಲಿ ಗದ್ದುಗೆ ಏರಿದರು. 
ರಾಜಕೀಯದಲ್ಲಿ ಈ ರೀತಿಯ  ಚಮತ್ಕಾರಗಳು ಸಹಜ. ಈ ಹಿಂದೆ  ಕೂಡ ಇಂತಹ ನಾಟಕಗಳಿಗೆ  ಭಾರತೀಯ ರಾಜಕಾರಣ ಸಾಕ್ಷಿಯಾಗಿತ್ತು.

‘ಇಂಡಿಯಾ ಅಗೆನೆಸ್ಟ್‌ ಕರಪ್ಷನ್‌’ ಆಂದೋಲನದ ಸಂದರ್ಭದಲ್ಲಿಯೇ  ಕೇಜ್ರಿವಾಲ್‌ ಅವರಲ್ಲಿ  ಅಹಂಭಾವ ಇಣುಕುತ್ತಿತ್ತು.  ಮುಖ್ಯಮಂತ್ರಿಯಾಗಿದ್ದೇ ತಡ ಅವರು ತಮ್ಮ ಮೂಗಿನ ನೇರಕ್ಕೆ ವರ್ತಿಸಲು ಶುರುಮಾಡಿದರು. ಇದಕ್ಕೆ ತಾಜಾ ಉದಾಹರಣೆಯೆಂದರೆ ಇದೀಗ ಅವರು  ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಜತೆ ಸಂಘರ್ಷಕ್ಕೆ ಇಳಿದಿರುವುದು.  ಚುನಾಯಿತ ಸರ್ಕಾರವು ಅಧಿಕಾರಕ್ಕಾಗಿ ನಡೆಸುವ ಕಾನೂನುಬದ್ಧ ಹೋರಾಟವನ್ನು  ಕೇಜ್ರಿವಾಲ್‌ ವೈಯಕ್ತಿಕ ಸಂಘರ್ಷಕ್ಕೆ ತಿರುಗಿಸಿದರು. ಅವರು ಈ ವಿಷಯವನ್ನು  ರಾಜಕೀಯ ವೇದಿಕೆಗಳಲ್ಲಿ ಅತ್ಯಂತ ಗಂಭೀರವಾಗಿ ಎತ್ತಬಹುದಿತ್ತು.

ಕೇಜ್ರಿವಾಲ್‌ ಮುಂದಿನ ಪೀಳಿಗೆಯ ಮುಖ್ಯ ನಾಯಕರಲ್ಲಿ ಒಬ್ಬರು.   ಭಾರತದ ಪ್ರಜಾತಂತ್ರಕ್ಕೆ ಉತ್ತಮ ಕೊಡುಗೆ ನೀಡಬಹುದಾದ ಹೊಸ ರೀತಿಯ ನಾಯಕತ್ವವನ್ನು ಜನ ಇವರಿಂದ ಎದುರು ನೋಡಬಹುದೇ? ಕೇಜ್ರಿವಾಲ್‌ ಕಾರ್ಯವೈಖರಿಯನ್ನು ನೋಡಿದರೆ ಈ ಪ್ರಶ್ನೆಗೆ ಹೌದು ಎಂದು ಉತ್ತರ ಕೊಡುವುದು ಕಷ್ಟವಾಗುತ್ತದೆ.

ಇತ್ತೀಚೆಗಿನ ಕೆಲವು ವಿದ್ಯಮಾನಗಳನ್ನು ನೋಡಿದರೆ  ಅವರು ಮೊದಲಿನಂತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.  ತಮಗೆ ನಿಷ್ಠರಾಗಿರಲಿಲ್ಲ ಎನ್ನುವ ಆರೋಪದ ಮೇಲೆ ಹಿರಿಯ ಮುಖಂಡರಾದ ಯೋಗೇಂದ್ರ ಯಾದವ್‌, ಪ್ರಶಾಂತ್‌ ಭೂಷಣ್‌, ಆನಂದ್‌ ಕುಮಾರ್‌್, ಅಜಿತ್‌್ ಝಾ ಅವರನ್ನೆಲ್ಲ  ಮೂಲೆಗುಂಪು ಮಾಡಿ, ಕೊನೆಗೆ ಪಕ್ಷದಿಂದಲೇ ಹೊರಹಾಕಿದರು. ಇವರೆಲ್ಲ ಪಕ್ಷ ಹಾಗೂ ಕೇಜ್ರಿವಾಲ್‌್ ವರ್ಚಸ್ಸು ಹೆಚ್ಚಿಸುವುದಕ್ಕೆ ಸಾಕಷ್ಟು ಶ್ರಮಿಸಿದ್ದರು.

ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಕೇಜ್ರಿವಾಲ್‌ ಈ ರೀತಿ ನಡೆದುಕೊಳ್ಳುತ್ತಾರಾ ಎಂದು ಅನೇಕರು ಅಚ್ಚರಿಪಟ್ಟುಕೊಂಡರು.  ಈ ಮೊದಲು, ಅಣ್ಣಾ ಹಜಾರೆ ಹಾಗೂ ಅರುಣಾ ರಾಯ್‌ ವಿಷಯದಲ್ಲಿಯೂ ಅವರು ಇದೇ ರೀತಿ ನಡೆದುಕೊಂಡಿದ್ದರು.

ಯಾದವ್‌ ಹಾಗೂ ಇತರರು ತಮ್ಮ ವಿರುದ್ಧ ಪಿತೂರಿ ಮಾಡಿದ್ದಾಗಿ ಕೇಜ್ರಿವಾಲ್‌ ಮಾಡಿದ ಆರೋಪಗಳಲ್ಲಿ ಎಳ್ಳಷ್ಟೂ ಹುರುಳಿರಲಿಲ್ಲ. ಯಾಕೆಂದರೆ ಕೇಜ್ರಿವಾಲ್‌ ನಾಯಕತ್ವವನ್ನು ಪ್ರಶ್ನಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ.

‘ಎಲ್ಲವೂ ನನ್ನ ಮೂಗಿನ ನೇರಕ್ಕೇ ನಡೆಯಬೇಕು’ ಎನ್ನುವ ಅವರ ಧೋರಣೆಯು ಪಕ್ಷದ ವ್ಯವಹಾರಗಳಲ್ಲಿ  ಮಾತ್ರವಲ್ಲ ಆಡಳಿತದಲ್ಲಿಯೂ ವ್ಯಕ್ತವಾಗಿದೆ. ಇದಕ್ಕೆ ಹಿರಿಯ ಅಧಿಕಾರಿ ಆಶಿಷ್‌ ಜೋಷಿ ಪ್ರಕರಣವೇ ಸಾಕ್ಷಿ.   ಜೋಷಿ ‘ದೆಹಲಿ ಸಮಾಲೋಚನಾ ಆಯೋಗ’ಕ್ಕೆ ಎಎಪಿಯ ಆರು ಕಾರ್ಯಕರ್ತರನ್ನು ಸಮನ್ವಯಕಾರರನ್ನಾಗಿ ನೇಮಿಸಿಕೊಳ್ಳುವುದಕ್ಕೆ  ನಿರಾಕರಿಸಿದ್ದರು. ಇದೇ ಕಾರಣಕ್ಕೆ ಅವರನ್ನು ಆಯೋಗದಿಂದ ತೆಗೆದು ಹಾಕಲಾಯಿತು.

‘ಸಚಿವರನ್ನು ತುಚ್ಛವಾಗಿ ನಡೆಸಿಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ’ ಎಂದು ಪಕ್ಷದೊಳಗೆ  ಕೆಲವರು ಆರೋಪಿಸುತ್ತಾರೆ. ಕೇಜ್ರಿವಾಲ್‌ ನಡೆಯಿಂದ ಬೆಂಬಲಿಗರು ಹಾಗೂ ಅಭಿಮಾನಿಗಳು ಕಳವಳಗೊಂಡಿದ್ದಾರೆ. ಜನರಲ್ಲಿ ಅಪಾರ ನಿರೀಕ್ಷೆಗಳನ್ನು ಹುಟ್ಟುಹಾಕಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಎಎಪಿಯ ಜನಪ್ರಿಯತೆ ನಿಧಾನವಾಗಿ ಮಸುಕಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT