ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಭಾರಿ ಮಳೆ ನಿರೀಕ್ಷೆ

Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  ಬಂಗಾಳಕೊಲ್ಲಿಯ ವಾಯವ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಘಟ್ಟಪ್ರದೇಶಗಳಲ್ಲಿ ದಿನವೊಂದಕ್ಕೆ 13ರಿಂದ 24 ಸೆಂ.ಮೀ ಪ್ರಮಾಣದಲ್ಲಿ ಅತಿಯಾದ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಹವಾಮಾನ ಇಲಾಖೆಯ ನಿರ್ದೇಶಕ  ಬಿ.ಪುಟ್ಟಣ್ಣ, `ವಾಯವ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಸಮುದ್ರ ಮಟ್ಟದಿಂದ 7.6 ಕಿ.ಮೀ ಎತ್ತರದವರೆಗೂ ಸುಳಿಗಾಳಿ ಸುತ್ತುವುದರಿಂದ ಮಾರುತಗಳು ಚಲಿಸಿದ ದಿಕ್ಕಿನಲ್ಲಿ ಮಳೆ ಹೆಚ್ಚಾಗಿ ಸುರಿಯಲಿದೆ' ಎಂದು ಮಾಹಿತಿ ನೀಡಿದರು.

`ಮಾರುತಗಳು ಪಶ್ಚಿಮ ದಿಕ್ಕಿನಿಂದ ಸುಮಾರು 45 ರಿಂದ 55 ಕಿ.ಮೀ ವೇಗದಲ್ಲಿ ಚಲಿಸುವುದರಿಂದ ಸಮುದ್ರದ ಅಲೆಗಳ ಏರಿಳಿತ ಹೆಚ್ಚಾಗಿರುತ್ತದೆ. ಹೀಗಾಗಿ ಕರಾವಳಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುತ್ತದೆ' ಎಂದು ತಿಳಿಸಿದರು. `ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಈಗಾಗಲೇ ವ್ಯಾಪಕ ಮಳೆಯಾಗಿರುವ ಕರಾವಳಿಯಲ್ಲಿ ಹೆಚ್ಚಿನ ಮಳೆ ನಿರೀಕ್ಷೆ ಇರುವುದರಿಂದ ಸಾರ್ವಜನಿಕರು ಇಲಾಖೆಯ ಮುನ್ಸೂಚನೆಗಳನ್ನು ಅಗತ್ಯವಾಗಿ ಪಾಲಿಸಬೇಕು' ಎಂದು ಮನವಿ ಮಾಡಿದರು.

`ವಾಯುಭಾರ ಕುಸಿತ ಪರಿಣಾಮದಿಂದ ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲೂ ಕೂಡ ವ್ಯಾಪಕವಾದ ಮಳೆಯಾಗಲಿದೆ. ಬೆಂಗಳೂರಿನಲ್ಲಿ 1ರಿಂದ 4 ಸೆಂ.ಮೀ ಸಾಧಾರಣ ಮಳೆಯಾಗಲಿದೆ' ಎಂದು ಹೇಳಿದರು.

ವಾಯುಭಾರ ಕುಸಿತ
ಚೆನ್ನೈ (ಪಿಟಿಐ): ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಕಾರಣ ಕರ್ನಾಟಕದ ಕರಾವಳಿಯಲ್ಲಿ ಭಾರಿ ಮಳೆಯಾಗಲಿದೆ. ಕೇರಳದಲ್ಲಿ ನೈಋತ್ಯ ಮಾರುತಗಳು ಬಿರುಸಾಗಿರುವುದರಿಂದ ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಮುಂಗಾರು ಚುರುಕಾಗಲಿದೆ ಎಂದು ಇಲ್ಲಿನ ಪ್ರಾದೇಶಿಕ ಹವಾಮಾನ ಕಚೇರಿ ಗುರುವಾರ ಮುನ್ಸೂಚನೆ ನೀಡಿದೆ.

`ಕರ್ನಾಟಕ, ಕೇರಳ, ಆಂಧ್ರಪ್ರದೇಶದ ಉತ್ತರ ಕರಾವಳಿಯಲ್ಲಿ ಮುಂದಿನ 48 ತಾಸುಗಳಲ್ಲಿ ಭಾರಿ ಮಳೆಯಾಗಲಿದೆ' ಎಂದು ಪ್ರಾದೇಶಿಕ ಹವಾಮಾನ ಕಚೇರಿಯ ನಿರ್ದೇಶಕ ಎಸ್.ಆರ್. ರಮಣನ್ ತಿಳಿಸಿದ್ದಾರೆ. ಆಂಧ್ರದ ತೆಲಂಗಾಣ, ನೀಲಗಿರಿ ಶ್ರೇಣಿ, ಲಕ್ಷದ್ವೀಪ,  ದಕ್ಷಿಣ ಕರ್ನಾಟಕದ ಪಶ್ಚಿಮಘಟ್ಟಗಳ ಪ್ರದೇಶಗಳಲ್ಲೂ ಮಳೆ ಬಿರುಸುಗೊಳ್ಳಲಿದೆ ಎಂದು ಮುನ್ಸೂಚನೆ ತಿಳಿಸಿದೆ.

ಹವಾಮಾನ ಇಲಾಖೆಯ ಅಂಕಿಅಂಶದಂತೆ ದಕ್ಷಿಣ ಭಾರತದಲ್ಲಿ ಈ ಸಾರಿ ಮುಂಗಾರು ಉತ್ತಮವಾಗಿಯೇ ಸುರಿದಿದೆ. ಆಂಧ್ರ ಕೊಯಿಡಾ ಮತ್ತು ಕೇರಳದ ವೈಕೊಂಗಳಲ್ಲಿ 10 ಸೆಂ.ಮೀ. ಮತ್ತು ಕರ್ನಾಟಕದ ಕ್ಯಾಸಲ್‌ರಾಕ್, ತಮಿಳುನಾಡಿನ ಚಿನ್ನಕಳರ್‌ನಲ್ಲಿ ಆರು ಸೆಂ.ಮೀ. ಮಳೆ ಬಿದ್ದಿದೆ. ಈ ಮಧ್ಯೆ, ಚೆನ್ನೈ ನಗರದಲ್ಲಿ ಬುಧವಾರ ಇಡೀ ರಾತ್ರಿ ಮಳೆ ಸುರಿದ್ದಿದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.  ಮುಂದಿನ 24 ತಾಸುಗಳ ಕಾಲ ಚೆನ್ನೈನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT