ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 1,316 ಖಾಸಗಿ ಶಾಲೆಗಳು ಅನಧಿಕೃತ

Last Updated 14 ಫೆಬ್ರುವರಿ 2023, 18:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 1,316 ಖಾಸಗಿ ಅನುದಾನರಹಿತ ಶಾಲೆಗಳನ್ನು ಅನಧಿಕೃತ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಗುರುತಿಸಿದೆ.

ಬೆಂಗಳೂರು ಉತ್ತರದ 485, ಬೆಂಗಳೂರು ದಕ್ಷಿಣದ 386, ತುಮಕೂರು ಜಿಲ್ಲೆಯ 109 ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 66 ಶಾಲೆಗಳು ಸೇರಿವೆ. ಪೋಷಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಅನಧಿಕೃತ ಶಾಲೆಗಳ ಪಟ್ಟಿಯನ್ನು ಶೀಘ್ರ ಪ್ರಕಟಿಸಲಾಗುವುದು. ಶಿಕ್ಷಣ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಂತಹ ಶಾಲೆಗಳ ಆಡಳಿತ ಮಂಡಳಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್‌ ಮಾಹಿತಿ ನೀಡಿದ್ದಾರೆ.

63 ಶಾಲೆಗಳು ನೋಂದಣಿ ಮಾಡಿಸಿಲ್ಲ, 74 ಶಾಲೆಗಳು ಅನುಮತಿ ಪಡೆಯದೇ ತರಗತಿಗಳನ್ನು ಮೇಲ್ದರ್ಜೆಗೇರಿಸಿವೆ. 95 ಶಾಲೆಗಳು ರಾಜ್ಯದ ಅನುಮತಿ ಪಡೆದು ಸಿಬಿಎಸ್‌ಸಿಗೆ ಪ್ರವೇಶ ನೀಡುತ್ತಿವೆ. 294 ಶಾಲೆಗಳು ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು, ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸುತ್ತಿವೆ. 620 ಶಾಲೆಗಳು ಅನುಮತಿಗಿಂತ ಹೆಚ್ಚುವರಿ ವಿಭಾಗಗಳನ್ನು ಹೊಂದಿವೆ. 141 ಶಾಲೆಗಳನ್ನು ಅನುಮತಿ ಪಡೆಯದೆ ಸ್ಥಳಾಂತರಿಸಿರುವುದು ಪತ್ತೆಯಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನ ಕೆಲ ಪ್ರಮುಖ ಶಾಲೆಗಳು ಅನುಮತಿ ಪಡೆಯದೆ ಮಕ್ಕಳಿಗೆ ಸಿಬಿಎಸ್‌ಇಗೆ ಪ್ರವೇಶ ನೀಡಿವೆ ಎಂದು ಹಲವು ಪೋಷಕರು ಪ್ರತಿಭಟನೆ ನಡೆಸಿ, ದೂರು ನೀಡಿದ್ದರು. ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿತ್ತು.

ಗಡಿಯಲ್ಲಿ ಗುಂಡು ಹಾರಿಸಲೂ ‘ನಾಗ್ಪುರ’ ಆದೇಶ: ಹರಿಪ್ರಸಾದ್

ಬೆಂಗಳೂರು: ದೇಶದ ಗಡಿಯಲ್ಲಿ ಒಂದು ಗುಂಡು ಹಾರಿಸಲು ಈ ಹಿಂದೆ ಮೇಲಿನವರ ಆದೇಶಕ್ಕೆ ಕಾಯಬೇಕಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ ಎಂದ ವಿಧಾನ ಪರಿಷತ್‌ನ ಮುಖ್ಯಸಚೇತಕ ವೈ.ಎ.ನಾರಾಯಣಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ‘ಹೌದು, ನಿಜ ಈಗ ನಾಗ್ಪುರದ ಆದೇಶ ಸಾಕು’ ಎಂದು ಕಾಲೆಳೆದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮುಂದುವರಿದ ಚರ್ಚೆಯಲ್ಲಿ ಕಾಂಗ್ರೆಸ್‌ ಸದಸ್ಯ ಯು.ಬಿ. ವೆಂಕಟೇಶ್‌ ಮಾತನಾಡಿ, ಬಿಜೆಪಿ ವಾಸ್ತವದ ಸೂತ್ರಗಳಿಗಿಂತ ಶಾಸ್ತ್ರಕ್ಕೆ ಮನ್ನಣೆ ನೀಡುತ್ತದೆ. ಶನಿ ಎರಡನೇ ಮನೆಗೆ ಒಕ್ಕರಿಸಿದೆ. ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಗೊತ್ತಾಗಿದೆ ಎಂದರು.

‘ಇತರೆ ಸದಸ್ಯರು ಮಾತನಾಡುವಾಗ ಅವಕಾಶ ಕೊಡಬೇಕು. ಬತ್ತಿ ಇಟ್ಟು ಕುಳಿತುಕೊಳ್ಳಬಾರದು’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ನಾರಾಯಣಸ್ವಾಮಿಗೆ ತಿವಿದರು. ಚರ್ಚೆ ನಡೆಯುವಾಗ ಪರಸ್ಪರ ಮಾತನಾಡುತ್ತಿದ್ದ ಸಚಿವ ಮುರುಗೇಶ ನಿರಾಣಿ, ಬಿಜೆಪಿಯ ಆಯನೂರು ಮಂಜುನಾಥ್‌ ಅವರನ್ನು ಪ್ರತ್ಯೇಕವಾಗಿ ಕುಳಿತುಕೊಳ್ಳುವಂತೆ ಸಭಾಪತಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT