ಬೆಂಗಳೂರು: ‘ಕೇಂದ್ರ ಸರ್ಕಾರದ ತೆರಿಗೆ ಆದಾಯದಲ್ಲಿ ರಾಜ್ಯಗಳ ಬಾಬ್ತಿಗೆ ಕರ್ನಾಟಕದಿಂದ ಹೋಗುವ ಮೊತ್ತದಲ್ಲಿ ಶೇ 60ರಷ್ಟು ನಮಗೇ ವಾಪಸ್ ಬರಬೇಕು. ತೆರಿಗೆ ಪಾಲು ಹಂಚಿಕೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ ಸರಿಪಡಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16ನೇ ಹಣಕಾಸು ಆಯೋಗವನ್ನು ಒತ್ತಾಯಿಸಿದರು.
ರಾಜ್ಯಗಳಿಗೆ ತೆರಿಗೆ ಪಾಲು ಮತ್ತು ಇತರ ಸಹಾಯಾನುದಾನಗಳ ಪ್ರಮಾಣ ನಿರ್ಧರಿಸುವ ಸಂಬಂಧ ರಾಜ್ಯಗಳ ಜತೆಗೆ ಸಮಾಲೋಚನಾ ಸಭೆ ಆರಂಭಿಸಿರುವ 16ನೇ ಹಣಕಾಸು ಆಯೋಗವು, ಗುರುವಾರ ರಾಜ್ಯಕ್ಕೆ ಭೇಟಿ ನೀಡಿದೆ.
ಅರವಿಂದ್ ಪನಾಗರಿಯಾ ಅಧ್ಯಕ್ಷತೆಯ ಆಯೋಗದ ಜತೆಗೆ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಾವು ಕೇಂದ್ರಕ್ಕೆ ಒಂದು ರೂಪಾಯಿ ನೀಡಿದರೆ, ನಮಗೆ ವಾಪಸ್ ಬರುತ್ತಿರುವುದು 15 ಪೈಸೆಯಷ್ಟೆ. ಬಡ ರಾಜ್ಯಗಳಿಗೆ ನೆರವು ನೀಡಬೇಕು ಎಂಬುದನ್ನು ನಾವು ಒಪ್ಪುತ್ತೇವೆ. ಆದರೆ ಅದಕ್ಕೆಂದು ಕರ್ನಾಟಕದ ಹಿತಾಸಕ್ತಿಯನ್ನು ಬಲಿಕೊಡಲಾಗದು. ಉತ್ತಮವಾಗಿ ಕಾರ್ಯನಿರ್ವಹಿಸಿ, ತೆರಿಗೆ ಸಂಗ್ರಹದಲ್ಲಿ ಗುರಿ ಮುಟ್ಟಿರುವ ಕರ್ನಾಟಕದಂತಹ ರಾಜ್ಯಗಳಿಗೆ ನಷ್ಟವಾಗುವುದನ್ನು ತಡೆಯಿರಿ’ ಎಂದು ಒತ್ತಾಯಿಸಿದರು.
‘15ನೇ ಹಣಕಾಸು ಆಯೋಗವು ಕೇಂದ್ರದ ತೆರಿಗೆ ಆದಾಯದಲ್ಲಿ ಕರ್ನಾಟಕದ ಪಾಲನ್ನು ಶೇ 4.713ರಿಂದ ಶೇ 3.647ಕ್ಕೆ ಇಳಿಕೆ ಮಾಡಿತ್ತು. ಇದರಿಂದ ಐದು ವರ್ಷಗಳಲ್ಲಿ ರಾಜ್ಯಕ್ಕೆ ಸುಮಾರು ₹80,000 ಕೋಟಿ ನಷ್ಟವಾಗಿದೆ. ಈ ಅನ್ಯಾಯವನ್ನು ಸರಿಪಡಿಸಬೇಕು. ತೆರಿಗೆ ಪಾಲು ನಿರ್ಧರಿಸುವಲ್ಲಿ 15ನೇ ಹಣಕಾಸು ಆಯೋಗವು ಪರಿಗಣಿಸಿದ್ದ ಮಾನದಂಡಗಳನ್ನು ಪರಿಷ್ಕರಿಸಬೇಕು’ ಎಂದು ಕೋರಿದರು.
ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ನಷ್ಟವಾದ ಕಾರಣ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ದತ್ತಾಂಶಗಳ ರೂಪದಲ್ಲಿ ಆಯೋಗಕ್ಕೆ ವಿವರಿಸಿದರು. ಈ ವಿವರ ಮತ್ತು ರಾಜ್ಯದ ಬೇಡಿಕೆಗಳನ್ನು ಒಳಗೊಂಡ ವರದಿಯನ್ನು ಮುಖ್ಯಮಂತ್ರಿ, ಆಯೋಗಕ್ಕೆ ಸಲ್ಲಿಸಿದರು.
ಆಯೋಗದ ಸದಸ್ಯರಾದ ಅಜಯ್ ನಾರಾಯಣ ಝಾ, ಅನ್ನಿ ಜಾರ್ಜ್ ಮ್ಯಾಥ್ಯೂ, ಮನೋಜ್ ಪಾಂಡಾ ಮತ್ತು ಸೌಮ್ಯಕಾಂತಿ ಘೋಷ್ ಸಭೆಯಲ್ಲಿ ಇದ್ದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಇದ್ದರು.
16ನೇ ಹಣಕಾಸು ಆಯೋಗವು ನಮ್ಮ ಮನವಿಯನ್ನು ಪರಿಗಣಿಸಿ ನಮಗಾಗಿರುವ ಅನ್ಯಾಯವನ್ನು ಸರಿಪಡಿಸುತ್ತದೆ ಎಂಬ ನಿರೀಕ್ಷೆ ಇದೆಸಿದ್ದರಾಮಯ್ಯ ಮುಖ್ಯಮಂತ್ರಿ
ರಾಜ್ಯ ಸರ್ಕಾರ ನೀಡಿದ ದತ್ತಾಂಶ ಮತ್ತು ವಿವರಣೆ ಗಮನ ಸೆಳೆಯುವಂತೆ ಇತ್ತು. ಈ ಬೇಡಿಕೆಗಳನ್ನು ಪರಿಗಣಿಸುವ ಬಗ್ಗೆ ಪರಿಶೀಲನೆ ನಡೆಸುತ್ತೇವೆಅರವಿಂದ್ ಪನಾಗರಿಯಾ ಅಧ್ಯಕ್ಷ 16ನೇ ಹಣಕಾಸು ಆಯೋಗ
ಸೆಸ್‌ಗೆ ಮಿತಿ ಹಾಕಿ:
ರಾಜ್ಯದ ಒತ್ತಾಯ 1. ಕೇಂದ್ರ ಸರ್ಕಾರದ ತೆರಿಗೆ ಆದಾಯದಲ್ಲಿನ ರಾಜ್ಯಗಳ ಪಾಲು ಈಗ ಶೇ 41ರಷ್ಟು ಇದೆ. ಅದನ್ನು ಶೇ 50ಕ್ಕೆ ಏರಿಕೆ ಮಾಡಬೇಕು 2. ಸೆಸ್ ಮತ್ತು ಸರ್‌ಚಾರ್ಜ್‌ನ ಪ್ರಮಾಣವು ಕೇಂದ್ರದ ಒಟ್ಟು ತೆರಿಗೆ ಆದಾಯದ ಶೇ 5ರಷ್ಟನ್ನು ಮೀರಬಾರದು. ಶೇ 5ರಷ್ಟನ್ನು ಮೀರಿದ ಮೊತ್ತವು ರಾಜ್ಯಗಳ ಬಾಬ್ತಿಗೆ ಜಮೆಯಾಗುವಂತೆ ಕಾನೂನು ತಿದ್ದುಪಡಿ ಮಾಡಬೇಕು 3. ಕೇಂದ್ರ ಸರ್ಕಾರದ ಎಲ್ಲ ತೆರಿಗೆಯೇತರ ಆದಾಯವನ್ನೂ ರಾಜ್ಯಗಳ ಬಾಬ್ತಿನ ವ್ಯಾಪ್ತಿಗೆ ತರಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕು 4. ಬೆಂಗಳೂರಿನ ಹೂಡಿಕೆಗೆ ಐದು ವರ್ಷಗಳಲ್ಲಿ ₹55586 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಕೇಂದ್ರವು ₹27793 ಕೋಟಿ ಅನುದಾನ ನೀಡಬೇಕು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯವು ₹25000 ಕೋಟಿ ವೆಚ್ಚ ಮಾಡಲಿದ್ದು ಕೇಂದ್ರವೂ ಅಷ್ಟೇ ಮೊತ್ತದ ಅನುದಾನ ನೀಡಬೇಕು. ಪಶ್ಚಿಮ ಘಟ್ಟದಲ್ಲಿ ವಿಕೋಪ ನಿರ್ವಹಣೆ ಮತ್ತು ಪುನರ್ವಸತಿಗೆ ₹10000 ಕೋಟಿ ಸೇರಿ ಒಟ್ಟು ₹62793 ಕೋಟಿ ಅನುದಾನ ನೀಡಬೇಕು
ನಮ್ಮ ವ್ಯಾಪ್ತಿಯದ್ದಲ್ಲ: ಆಯೋಗ 1. ಕರ್ನಾಟಕವೂ ಸೇರಿ ಈಗ ಐದು ರಾಜ್ಯಗಳ ಜತೆಗಷ್ಟೇ ಸಮಾಲೋಚನೆ ನಡೆದಿದೆ. ಎಲ್ಲ ರಾಜ್ಯಗಳ ಅಭಿಪ್ರಾಯ ಮತ್ತು ದತ್ತಾಂಶಗಳ ಆಧಾರದಲ್ಲಿ ಇದನ್ನು ಪರಿಶೀಲಿಸುತ್ತೇವೆ 2. ಸೆಸ್ ಮತ್ತು ಸರ್ಚಾರ್ಜ್‌ಗೆ ಸಂಬಂಧಿಸಿದಂತೆ ಈವರೆಗೆ ಯಾವ ಆಯೋಗವೂ ಶಿಫಾರಸು ಮಾಡಿಲ್ಲ. ಅಂತಹ ಶಿಫಾರಸಿಗೆ ಅವಕಾಶವಿದ್ದಂತಿಲ್ಲ 3. ತೆರಿಗೆಯೇತರ ಆದಾಯವನ್ನು ರಾಜ್ಯಗಳ ತೆರಿಗೆ ಬಾಬ್ತಿನ ವ್ಯಾಪ್ತಿಗೆ ತರುವ ವಿಚಾರ ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟದ್ದು 4. ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಮತ್ತು ಪ್ರದೇಶವಾರು ಅಭಿವೃದ್ಧಿಗೆ ರಾಜ್ಯ ಸರ್ಕಾರ ಇಟ್ಟಿರುವ ಅನುದಾನ ಬೇಡಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಅದನ್ನು ಪರಿಗಣಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಈಗಲೇ ಹೇಳಲಾಗದು. ಅನುದಾನಕ್ಕೆ ಶಿಫಾರಸು ಮಾಡಿದರೂ ಯಾವ ಬಾಬ್ತಿನಲ್ಲಿ ಅದನ್ನು ಕೊಡಬೇಕು ಎಂಬುದನ್ನು ಪರಿಶೀಲಿಸಬೇಕಾಗುತ್ತದೆ
‘ಎಲ್ಲ ಶಿಫಾರಸಿಗೆ ಕೇಂದ್ರ ಬದ್ಧವಾಗಿರಬೇಕಿಲ್ಲ’
‘ತೆರಿಗೆ ಆದಾಯದಲ್ಲಿನ ಪಾಲಿಗೆ ಸಂಬಂಧಿಸಿದಂತೆ ಆಯೋಗವು ಮಾಡುವ ಶಿಫಾರಸಿಗೆ ಮಾತ್ರ ಕೇಂದ್ರ ಸರ್ಕಾರ ಬದ್ಧವಾಗಿರಬೇಕು. ಸಂಚಿತ ನಿಧಿಯಿಂದ ಅನುದಾನ ನೀಡುವಂತೆ ಮಾಡುವ ಶಿಫಾರಸನ್ನು ಕೇಂದ್ರ ಸರ್ಕಾರ ಪಾಲಿಸಲೇಬೇಕು ಎಂದೇನೂ ಇಲ್ಲ’ ಎಂದು ಅರವಿಂದ್ ಪನಾಗರಿಯಾ ಹೇಳಿದರು. ಕರ್ನಾಟಕಕ್ಕೆ ಸಹಾಯಾನುದಾನದ ರೂಪದಲ್ಲಿ ₹5495 ಕೋಟಿ ನೀಡುವಂತೆ 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಅದನ್ನು ಪಾಲಿಸಲಿಲ್ಲ. ನೀವು ಮಾಡುವ ಶಿಫಾರಸುಗಳನ್ನು ಕೇಂದ್ರ ಪಾಲಿಸುತ್ತದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಎಫ್‌ಕೆಸಿಸಿಐ ಮನವಿ ಹಣಕಾಸು ಆಯೋಗದ ಅಧ್ಯಕ್ಷ ಮತ್ತು ಸದಸ್ಯರು ಗುರುವಾರ ಎಫ್‌ಕೆಸಿಸಿಐ ಜತೆಗೂ ಸಭೆ ನಡೆಸಿದರು. ‘ಕೇಂದ್ರ ಸರ್ಕಾರವು ಎಂಎಸ್‌ಎಂಇಗಳಿಗೆ ಆರ್ಥಿಕ ನೆರವು ಹೆಚ್ಚಿಸಬೇಕು ಜಿಎಸ್‌ಟಿ ಮತ್ತು ಇತರ ತೆರಿಗೆ ದರಗಳನ್ನು ಇಳಿಸಬೇಕು ಸಾಮರ್ಥ್ಯ ವೃದ್ಧಿ ಮತ್ತು ಕೌಶಲ ಅಭಿವೃದ್ಧಿಗೆ ಅನುದಾನ ಒದಗಿಸಬೇಕು. ಈ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ಆಯೋಗಕ್ಕೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.