ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2008ರ ಚರ್ಚ್‌ ದಾಳಿ ಪ್ರಕರಣ: ಮಹೇಂದ್ರ ಕುಮಾರ್ ಖುಲಾಸೆ

Last Updated 6 ಫೆಬ್ರುವರಿ 2019, 19:11 IST
ಅಕ್ಷರ ಗಾತ್ರ

ಮಂಗಳೂರು: 2008ರಲ್ಲಿ ನಗರದ ಚರ್ಚ್‌ಗಳಿಗೆ ನುಗ್ಗಿ ಏಸುಕ್ರಿಸ್ತ ಮತ್ತು ಇತರೆ ಮೂರ್ತಿಗಳನ್ನು ಧ್ವಂಸ ಮಾಡಿದ್ದನ್ನು ಪತ್ರಿಕಾಗೋಷ್ಠಿ ನಡೆಸಿ ಸಮರ್ಥಿಸಿಕೊಂಡಿದ್ದ ಆರೋಪದ ಮೇಲೆ ದಾಖಲಿಸಿದ್ದ ಪ್ರಕರಣದಲ್ಲಿ ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರಕುಮಾರ್‌ ಅವರನ್ನು ಖುಲಾಸೆಗೊಳಿಸಿ ನಗರದ ಎರಡನೇ ಜೆಎಂಎಫ್‌ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.

ನಗರದ ಮಿಲಾಗ್ರಿಸ್‌ ಬಳಿಯ ಎಡೋರೇಶನ್‌ ಮಾನೆಸ್ಟ್ರಿಯಲ್ಲಿ 2008ರ ಸೆಪ್ಟೆಂಬರ್‌ 14ರಂದು ಧರ್ಮ ಭಗಿನಿಯರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ದಾಳಿ ನಡೆಸಿದ್ದ ಗುಂಪು ಕಿಟಕಿ ಗಾಜುಗಳನ್ನು ಪುಡಿ ಮಾಡಿತ್ತು. ಪೂಜಾಪೀಠ ಮತ್ತು ಏಸು ಕ್ರಿಸ್ತನ ಮೂರ್ತಿಯನ್ನು ಧ್ವಂಸ ಮಾಡಿತ್ತು. ಅದೇ ದಿನಗಳಲ್ಲಿ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಉಡುಪಿ ಸೇರಿದಂತೆ ಹಲವೆಡೆ ಇಂತಹ ಘಟನೆಗಳು ನಡದಿದ್ದವು.

ಆಗ ಬಜರಂಗದಳದ ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರಕುಮಾರ್‌, ಸೆ.15ರಂದು ನಗರದ ವುಡ್‌ಲ್ಯಾಂಡ್ಸ್‌ ಹೋಡೆಲ್‌ನಲ್ಲಿ ಪತ್ರಿಕಾಗೋಷ್ಠಿ ದಾಳಿಯನ್ನು ಸಮರ್ಥಿಸಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮಂಗಳೂರು ಉತ್ತರ (ಬಂದರು) ಠಾಣೆ ಪೊಲೀಸರು, ಮಹೇಂದ್ರಕುಮಾರ್‌ ಅವರನ್ನು ಬಂಧಿಸಿದ್ದರು. ತನಿಖೆ ಪೂರ್ಣಗೊಳಿಸಿ 2009ರಲ್ಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ದೀರ್ಘಕಾಲ ಈ ಪ್ರಕರಣದ ವಿಚಾರಣೆ ನಡೆದಿತ್ತು. ಮಂಗಳೂರು ಉತ್ತರ ಪೊಲೀಸ್‌ ಠಾಣೆಯ ಆಗಿನ ಇನ್‌ಸ್ಪೆಕ್ಟರ್‌ ಎಚ್‌.ಎಸ್‌.ವೆಂಕಟೇಶ್‌ ಪ್ರಸನ್ನ ಸೇರಿದಂತೆ 12 ಸಾಕ್ಷಿಗಳು ವಿಚಾರಣೆಗೆ ಹಾಜರಾಗಿದ್ದರು. ಬುಧವಾರ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶ ಬಿ.ಟಿ.ಮಹೇಶ್‌, ‘ಮಹೇಂದ್ರಕುಮಾರ್‌ ನಿರಪರಾಧಿ’ ಎಂದು ತೀರ್ಮಾನ ಪ್ರಕಟಿಸಿದರು.

‘ಕ್ರೈಸ್ತ ಧರ್ಮೀಯರು ಮತ್ತು ಹಿಂದೂಗಳ ನಡುವೆ ದ್ವೇಷ ಸೃಷ್ಟಿಸುವ ಉದ್ದೇಶದಿಂದ ಮಹೇಂದ್ರಕುಮಾರ್‌ ಪತ್ರಿಕಾಗೋಷ್ಠಿ ನಡೆಸಿರಲಿಲ್ಲ. ಕ್ರೈಸ್ತ ಧರ್ಮದ ಮೇಲೆ ಅವರಿಗೆ ಅಪಾರ ಗೌರವವಿದೆ. ಮತಾತಂತರವನ್ನು ಮಾತ್ರ ವಿರೋಧಿಸಿದ್ದರು’ ಎಂದು ಮಹೇಂದ್ರಕುಮಾರ್‌ ಪರ ವಕೀಲ ರಾಜೇಶ್‌ಕುಮಾರ್‌ ಅಮ್ಟಾಡಿ ಮಂಡಿಸಿದ್ದ ವಾದವನ್ನು ನ್ಯಾಯಾಲಯ ಮಾನ್ಯ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT