ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕದಲ್ಲಿ ಗಣಿಗಾರಿಕೆಗೆ 4,228 ಎಕರೆ ಅರಣ್ಯ: ಎನ್‌ಜಿಟಿ ಕಿಡಿ

Published : 14 ಸೆಪ್ಟೆಂಬರ್ 2024, 15:51 IST
Last Updated : 14 ಸೆಪ್ಟೆಂಬರ್ 2024, 15:51 IST
ಫಾಲೋ ಮಾಡಿ
Comments

ನವದೆಹಲಿ: ಕರ್ನಾಟಕದಲ್ಲಿ ಕಳೆದ 14 ವರ್ಷಗಳಲ್ಲಿ ಗಣಿಗಾರಿಕೆಗೆ 4,228 ಎಕರೆ ಅರಣ್ಯ ಬಳಸಿರುವ ಪ್ರಕರಣದಲ್ಲಿ ಗಣಿ ನಿಯಮ 1957 ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ 1986ರ ಉಲ್ಲಂಘನೆಯಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅಭಿಪ್ರಾಯಪಟ್ಟಿದೆ. 

ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಪ್ರಧಾನ ಪೀಠದ ಮುಖ್ಯಸ್ಥ ಪ್ರಕಾಶ್‌ ಶ್ರೀವಾಸ್ತವ, ನ್ಯಾಯಮೂರ್ತಿಗಳಾದ ಅರುಣ್‌ ಕುಮಾರ್ ತ್ಯಾಗಿ ಹಾಗೂ ಡಾ.ಎ.ಸೆಂಥಿಲ್‌ ವೇಲ್ ಅವರನ್ನೊಳಗೊಂಡ ಪೀಠವು, ‘ಈ ಪ್ರಕರಣದಲ್ಲಿ ಪರಿಸರ ನಿಯಮಗಳ ಅನುಷ್ಠಾನದಲ್ಲಿ ಗಂಭೀರ ಲೋಪಗಳು ಆಗಿದೆ’ ಎಂದು ಹೇಳಿದೆ. ಈ ಸಂಬಂಧ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಗಣಿ ಹಾಗೂ ಭೂವಿಜ್ಞಾನ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಅರಣ್ಯ ಪರಿಸರ ಸಚಿವಾಲಯ ಹಾಗೂ ಬಳ್ಳಾರಿ ಜಿಲ್ಲಾಧಿಕಾರಿಗೆ ನೋಟಿಸ್‌ ನೀಡಿರುವ ಪೀಠವು, ವಿವರಣೆ ನೀಡುವಂತೆ ಸೂಚಿಸಿದೆ. 

ರಾಜ್ಯದಲ್ಲಿ ಗಣಿಗಾರಿಕೆಯಿಂದಾಗಿ ಅರಣ್ಯ ನಾಶವಾಗಿದೆ. ಗಣಿ ಚಟುವಟಿಕೆಗೆ ಅವಿಭಜಿತ ಬಳ್ಳಾರಿ ಜಿಲ್ಲೆ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ 14 ವರ್ಷಗಳಲ್ಲಿ 4,228 ಎಕರೆ ಅರಣ್ಯ ಬಳಸಲಾಗಿದೆ. ಇದರಲ್ಲಿ ಬಳ್ಳಾರಿ ಜಿಲ್ಲೆಯ ಪಾಲು ಶೇ 80ರಷ್ಟು. ಗಣಿ ಚಟುವಟಿಕೆಗಳಿಂದಾಗಿ ಜಿಲ್ಲೆಯು 3,338 ಎಕರೆ ಅರಣ್ಯ ಕಳೆದುಕೊಂಡಿದೆ. 2010ರಿಂದ 2024ರ ಅವಧಿಯಲ್ಲಿ ಈ ಜಿಲ್ಲೆಗಳಲ್ಲಿ 60 ಗಣಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 39 ಯೋಜನೆಗಳಿಗೆ ಅನುಮತಿ ಕೊಡಲಾಗಿದೆ. ಅಲ್ಲದೆ, ಈ ಅವಧಿಯಲ್ಲಿ ಕನಿಷ್ಠ 5,000 ಎಕರೆ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಗುತ್ತಿಗೆಯನ್ನು ನವೀಕರಿಸಲಾಗಿದೆ ಎಂದು ಎನ್‌ಜಿಟಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. 

‘ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ, ಭಾರತೀಯ ಅರಣ್ಯ ಸಂಶೋಧನೆ ಹಾಗೂ ಶಿಕ್ಷಣ ಸಂಸ್ಥೆ ಅಧ್ಯಯನ ನಡೆಸಿತ್ತು. ಅದರ ಅಧ್ಯಯನದ ಪ್ರಕಾರ, ರಾಜ್ಯದಲ್ಲಿ 2000 ಹಾಗೂ 2021ರ ಅವಧಿಯಲ್ಲಿ 8.9 ಚದರ ಕಿ.ಮೀ (2,199 ಎಕರೆ) ಅರಣ್ಯ ನಾಶವಾಗಿದೆ. ಅಪರೂಪದ ಮರಗಳನ್ನು ಹನನ ಮಾಡಲಾಗಿದೆ. ಅಕ್ರಮ ಗಣಿಗಾರಿಕೆಯಿಂದಾಗಿ ವನ್ಯಜೀವಿಗಳ ಅಸ್ತಿತ್ವಕ್ಕೂ ಕುತ್ತು ಉಂಟಾಗಿದೆ. ಗಣಿ ಸಂಬಂಧಿತ ಮಾಲಿನ್ಯದಿಂದಾಗಿ ಆಸ್ತಮಾದಂತಹ ಕಾಯಿಲೆಗಳು ಜಾಸ್ತಿಯಾಗಿವೆ. ಕೃಷಿ ಕ್ಷೇತ್ರದ ವಾರ್ಷಿಕ ವರಮಾನ ₹200 ಕೋಟಿಯಷ್ಟು ನಷ್ಟ ಉಂಟಾಗುತ್ತಿದೆ. ಗಣಿಗಾರಿಕೆ ‍ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಬಳ್ಳಾರಿ ಜಿಲ್ಲೆಯಲ್ಲಿ 25–30 ವರ್ಷಗಳಲ್ಲಿ ಗಣಿ ಸಂಪತ್ತು ಬರಿದಾಗಲಿದೆ’ ಎಂದು ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT