ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ಪ್ರಕಟವಾಗದ 5ನೇ ತರಗತಿ ಫಲಿತಾಂಶ; ಪ್ರವೇಶಕ್ಕೆ ಪರದಾಟ

ಅಂಕಪಟ್ಟಿ, ಟಿಸಿ ಇಲ್ಲದೇ ಆದರ್ಶ ವಿದ್ಯಾಲಯಗಳಲ್ಲಿ ಪ್ರವೇಶ ನಿರಾಕರಣೆ
Published 3 ಮೇ 2024, 1:02 IST
Last Updated 3 ಮೇ 2024, 1:02 IST
ಅಕ್ಷರ ಗಾತ್ರ

ಬಾಗಲಕೋಟೆ: ಐದನೇ ತರಗತಿಯ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಆದರೆ, ಆದರ್ಶ ವಿದ್ಯಾಲಯಗಳಿಗೆ 6ನೇ ತರಗತಿ ಪ್ರವೇಶಕ್ಕಾಗಿ ಮೇ 7 ಕೊನೆ ದಿನವೆಂದು ನಿಗದಿಪಡಿಸಲಾಗಿದೆ. ಐದನೇ ತರಗತಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ ಸಿಗದ ಕಾರಣ ಪಾಲಕರು, ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆ, ಆಯ್ಕೆಯಾದ ಆದರ್ಶ ವಿದ್ಯಾಲಯಕ್ಕೆ ಅಲೆದಾಡುವಂತಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ 6 ಆದರ್ಶ ವಿದ್ಯಾಲಯಗಳಿವೆ. ರಾಜ್ಯದಲ್ಲಿ ಒಟ್ಟು 74 ಶಾಲೆಗಳಿವೆ. ಪ್ರತಿ ಶಾಲೆಗೆ 120 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ರಾಜ್ಯದಾದ್ಯಂತ ಸಾವಿರಾರು ವಿದ್ಯಾರ್ಥಿಗಳದ್ದು ಇದೇ ಸ್ಥಿತಿ ಇದೆ.

ಆದರ್ಶ ವಿದ್ಯಾಲಯ ಇಂಗ್ಲಿಷ್‌ ಮಾಧ್ಯಮ ಪ್ರವೇಶಕ್ಕೆ ನಡೆಸಿದ್ದ ಪ್ರವೇಶ ಪರೀಕ್ಷೆ ಆಧಾರದ ಮೇಲೆ ಏಪ್ರಿಲ್ 29ರಂದು ಪ್ರವೇಶಕ್ಕೆ ಅರ್ಹತಾ ಪಟ್ಟಿ ಪ್ರಕಟಿಸಲಾಗಿದೆ. ಆಯ್ಕೆಯಾದವರು ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ, ಆಧಾರ್‌ ಕಾರ್ಡ್, ಜಾತಿ ಹಾಗೂ ಆದಾಯ ಪ್ರಮಾಣಪತ್ರದೊಂದಿಗೆ ಪ್ರವೇಶ ಪಡೆಯಬೇಕು ಎಂದು ಸೂಚಿಸಲಾಗಿದೆ.

ಮೊದಲ ಬಾರಿಗೆ ಐದನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ನಡೆಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಲಾಗಿತ್ತು. ಏಪ್ರಿಲ್ 8ರಂದು ಸುಪ್ರೀಂ ಕೋರ್ಟ್‌ 5, 8, 9ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದಂತೆ ಆದೇಶ ನೀಡಿತ್ತು. ಒಂದು ವೇಳೆ ಪ್ರಕಟಿಸಿದ್ದರೂ ಮಾನ್ಯತೆ ನೀಡುವಂತಿಲ್ಲ ಎಂದಿತ್ತು.

ಏಪ್ರಿಲ್ 8ರಂದು ಬೆಳಿಗ್ಗೆ ಫಲಿತಾಂಶ ಘೋಷಣೆ ಮಾಡಿ, ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕೋರ್ಟ್ ಆದೇಶದ ನಂತರ ಫಲಿತಾಂಶವು ಅತಂತ್ರವಾಗಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಎಸ್‌ಟಿಎಸ್‌ನಲ್ಲಿ ನಮೂದು ಮಾಡದ್ದರಿಂದ ವರ್ಗಾವಣೆ ಪ್ರಮಾಣಪತ್ರ ಜನರೇಟ್ ಆಗುವುದಿಲ್ಲ. ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ ತೆಗೆದುಕೊಂಡು ಬರುವವರೆಗೆ ಪ್ರವೇಶ ತೆಗೆದುಕೊಳ್ಳುವುದಿಲ್ಲ ಎಂದು ಆದರ್ಶ ವಿದ್ಯಾಲಯದ ಪ್ರಾಚಾರ್ಯರು ಮಕ್ಕಳನ್ನು ಮರಳಿ ಕಳುಹಿಸುತ್ತಿದ್ದಾರೆ.

‘ಜಿಲ್ಲೆಯ ಹುನಗುಂದ ಆದರ್ಶ ವಿದ್ಯಾಲಯಕ್ಕೆ ಸಹೋದರನ ಮಗ ಆಯ್ಕೆಯಾಗಿದ್ದಾನೆ. ಅಂಕಪಟ್ಟಿ, ವರ್ಗಾವಣೆ ಪ್ರಮಾಣಪತ್ರ ಮೂಲಪ್ರತಿಗಳನ್ನು ಕೊಡದೆ ಪ್ರವೇಶ ಕಷ್ಟ ಎಂದು ಶಾಲೆಯವರು ಹೇಳಿದ್ದಾರೆ. ಮೇ 7ರಂದು ಮತದಾನ ಇರುವ ಕಾರಣ ಬಹಳಷ್ಟು ಶಿಕ್ಷಕರು ಚುನಾವಣಾ ಕರ್ತವ್ಯಕ್ಕೆ ಹೋಗುತ್ತಾರೆ. ಹೀಗಾಗಿ, ಏನು ಮಾಡಬೇಕು ಎಂಬ ಗೊಂದಲವಿದೆ’ ಎಂದು ಹುನಗುಂದದ ನಿವಾಸಿ ರಾಜು ಕೌಜಗನೂರು ತಿಳಿಸಿದರು.

ಆದರ್ಶ ವಿದ್ಯಾಲಯ ಪ್ರವೇಶಕ್ಕೆ ಹೋದ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸಿದ್ದು ಗೊತ್ತಾಗಿದೆ. ಇದನ್ನು ನೋಡಲ್‌ ಅಧಿಕಾರಿಯ ಗಮನಕ್ಕೂ ತಂದಿದ್ದೇನೆ </p><p><span class="Designate"></span></p>
ಮಾಗುಂಡಪ್ಪ ಬಡದಾನಿ, ಕ್ಷೇತ್ರ ಶಿಕ್ಷಣಾಧಿಕಾರಿ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT