ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮ ಮೇಲೆ ಕೇಸ್ ಹಾಕಿದ್ರಲ್ಲಾ, ಅದಕ್ಕೆ ಏನೆಂದು ಕರೆಯುವುದು? ಸಿದ್ದರಾಮಯ್ಯ

‘ನನ್ನ, ಡಿ.ಕೆ. ಶಿವಕುಮಾರ್‌ ಹಾಗೂ ರಾಹುಲ್‌ ಗಾಂಧಿ ಅವರ ಮೇಲೆ ಕೇಸ್ ಹಾಕಿದ್ರಲ್ಲಾ ಅದಕ್ಕೆ ಏನೆಂದು ಕರೆಯುವುದು?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದರು.
Published 15 ಜೂನ್ 2024, 7:32 IST
Last Updated 15 ಜೂನ್ 2024, 7:32 IST
ಅಕ್ಷರ ಗಾತ್ರ

ಮೈಸೂರು: ‘ನನ್ನ, ಡಿ.ಕೆ. ಶಿವಕುಮಾರ್‌ ಹಾಗೂ ರಾಹುಲ್‌ ಗಾಂಧಿ ಅವರ ಮೇಲೆ ಕೇಸ್ ಹಾಕಿದ್ರಲ್ಲಾ ಅದಕ್ಕೆ ಏನೆಂದು ಕರೆಯುವುದು?’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದರು.

‘ದೇವೇಗೌಡರ ಕುಟುಂಬದ ನಂತರ ಯಡಿಯೂರಪ್ಪ ಅವರ ಕುಟುಂಬವನ್ನು ಗುರಿ ಮಾಡಲಾಗಿದೆ’ ಎಂಬ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಇಲ್ಲಿ ಶನಿವಾರ ತಿರುಗೇಟು ನೀಡಿದ ಅವರು, ‘ರಾಹುಲ್‌ ಗಾಂಧಿ ಅವರ ಸದಸ್ಯತ್ವವನ್ನೇ ರದ್ದುಗೊಳಿಸಿದ್ದರಲ್ಲಾ ಅದಕ್ಕೆ ಏನೆಂದು ಕರೆಯುವುದು? ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೇ ಕಳಿಸಿದ್ದಾರಲ್ಲಾ ಅದಕ್ಕೆ ಏನೆಂದು ಕರೆಯುವುದು? ದ್ವೇಷದ ರಾಜಕಾರಣ ಎಂದು ಕರೆಯಬೇಕೋ ಅಥವಾ ಪ್ರೀತಿಯ ರಾಜಕಾರಣ ಎನ್ನಬೇಕಾ? ಸೇಡಿನ ರಾಜಕಾರಣ ಮಾಡುವವರು ಅವರು. ಅದೇ ಬಿಜೆಪಿಯವರ ಕೆಲಸ. ನಾವು ಯಾವತ್ತು ಕೂಡ ಸೇಡಿನ ರಾಜಕಾರಣ ಮಾಡುವುದಿಲ್ಲ. ನಾನು ನೆನ್ನೆ–ಮೊನ್ನೆ ರಾಜಕೀಯಕ್ಕೆ ಬಂದಿಲ್ಲ. ಇಂದಿನವರೆಗೂ ಯಾರ ಮೇಲೂ ಸೇಡಿನ ರಾಜಕಾರಣ ಮಾಡಿಲ್ಲ’ ಎಂದರು.

‘ನೀಟ್’ ಅಕ್ರಮ– ತನಿಖೆ, ಮರುಪರೀಕ್ಷೆಗೆ ಆಗ್ರಹ

‘ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಈ ವರ್ಷ ನಡೆಸಿದ ‘ನೀಟ್‌’ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಆ ಬಗ್ಗೆ ತನಿಖೆ ನಡೆಸಬೇಕು ಹಾಗೂ ಮರುಪರೀಕ್ಷೆ ಮಾಡಬೇಕು ಎಂದು ಒತ್ತಾಯಿಸಿ ಪತ್ರ ಬರೆದಿದ್ದೇನೆ’ ಎಂದು ತಿಳಿಸಿದರು.

‘ಎನ್‌ಟಿಎ (ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ) ಸರಿಯಾಗಿ ಪರೀಕ್ಷೆ ನಡೆಸಿಲ್ಲ. ಕೃಪಾಂಕ ಕೊಟ್ಟು ಯಾರನ್ನೂ ಪಾಸ್ ಮಾಡಬಾರದು. ಹಾಗೆ ಮಾಡುವುದು ಕೆಟ್ಟ ಅಭ್ಯಾಸ. ಚೆನ್ನಾಗಿ ಓದಿ ಪರೀಕ್ಷೆ ಬರೆದವರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ಸಂಪುಟದಲ್ಲಿ ದಕ್ಷಿಣ ಭಾರತದದವರಿಗೆ ಆದ್ಯತೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದಕ್ಷಿಣ ಭಾರತದಲ್ಲಿ ಜನರು ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ಬಿಜೆಪಿಯು ಆರ್‌ಎಸ್‌ಎಸ್‌ ಅಡಿಪಾಯದ ಪಕ್ಷ. ಅದು ಆರ್‌ಎಸ್‌ಎಸ್‌ನ ರಾಜಕೀಯ ಮುಖವಾಡ. ಹೀಗಾಗಿ, ಜನರು ಅವರನ್ನು ಬೆಂಬಲಿಸುವುದಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷಕ್ಕೆ ಉತ್ತರ ಭಾರತದ ವಿವಿಧೆಡೆ ಕೂಡ ಹಿನ್ನಡೆಯಾಗಿದೆ. ಅಹಂಕಾರ ಇರುವುದರಿಂದ ಜನರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ಆರ್‌ಎಸ್ಎಸ್‌ನವರೇ ಹೇಳಿಕೆ ನೀಡಿದ್ದಾರೆ’ ಎಂದು ಟೀಕಿಸಿದರು.

‘ದ್ವೇಷದ ರಾಜಕಾರಣ ಮಾಡುವುದೇ ಬಿಜೆಪಿಯವರ ಕೆಲಸ. ಹೆದರಿಸುವುದು, ಬೆದರಿಸುವುದು ಆ ಪಕ್ಷದ ಸಂಸ್ಕೃತಿ. ಇದಕ್ಕಾಗಿ ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐ ಬಳಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಜನರು ಈ ಬಾರಿ ಬಿಜೆಪಿಯವರಿಗೆ ಬಹುಮತ ಕೊಡಲಲ್ಲ’ ಎಂದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಆದಾಯ ಮಿತಿಯನ್ನು ಹೆಚ್ಚಿಸಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆಯಲ್ಲಾ ಎಂಬ ಪ್ರಶ್ನೆಗೆ, ‘ಆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜಿನ ಶುಲ್ಕವನ್ನು ಶೇ.10ರಷ್ಟು ಹೆಚ್ಚಿಸಿರುವುದು ನನಗೆ ಗೊತ್ತಿಲ್ಲ. ಆ ಬಗ್ಗೆ ಪರಿಶೀಲಿಸುತ್ತೇನೆ’ ಎಂದು ತಿಳಿಸಿದರು.

‘ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಆದಷ್ಟು ಶೀಘ್ರದಲ್ಲೇ ಮಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT