ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ | ರಾಜ್ಯ ಸರ್ಕಾರದ ನ್ಯಾಯಾಂಗ ಹೋರಾಟಕ್ಕೆ ಭಾಗಶಃ ಜಯ– ಕಾಂಗ್ರೆಸ್‌

Published 27 ಏಪ್ರಿಲ್ 2024, 11:22 IST
Last Updated 27 ಏಪ್ರಿಲ್ 2024, 11:22 IST
ಅಕ್ಷರ ಗಾತ್ರ

ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಇಂದು ರಾಜ್ಯಕ್ಕೆ ₹3,454 ಕೋಟಿ ಬರ ಪರಿಹಾರ ಘೋಷಿಸಿದ್ದು, ರಾಜ್ಯ ಸರ್ಕಾರದ ನ್ಯಾಯಾಂಗ ಹೋರಾಟಕ್ಕೆ ಭಾಗಶಃ ಜಯ ಸಿಕ್ಕಿದಂತಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಬರ ಪರಿಹಾರ ಬಿಡುಗಡೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಘಟಕ, ಸುಪ್ರೀಂ ಕೋರ್ಟ್‌ಗೆ ಧನ್ಯವಾದ ತಿಳಿಸಿದ್ದು, ನ್ಯಾಯಾಲಯದ ನಿರ್ದೇಶನಕ್ಕೆ ಬೆದರಿದ ಕೇಂದ್ರದ ಬಿಜೆಪಿ ಸರ್ಕಾರ ಕೊನೆಗೂ ಅಲ್ಪ ಮೊತ್ತದ ಬರ ಪರಿಹಾರದ ಹಣ ಬಿಡುಗಡೆ ಮಾಡಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಈ ವೇಳೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌, ‘ಕರ್ನಾಟಕ ದ್ರೋಹಿ ಕೇಂದ್ರ ಸರ್ಕಾರ ಮತ್ತೊಮ್ಮೆ ಕನ್ನಡಿಗರಿಗೆ ವಂಚನೆ ಮಾಡಿದೆ. ಬರದಿಂದ ಕರ್ನಾಟಕಕ್ಕೆ ₹35,000 ಕೋಟಿಗೂ ಅಧಿಕ ನಷ್ಟವಾಗಿದೆ. ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರವೇ ನಮ್ಮ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ್ದು ₹18,172 ಕೋಟಿಗೆ, ಆದರೆ ಸುಪ್ರೀಂ ಕೋರ್ಟಿನಿಂದ ತಪರಾಕಿ ಬರಿಸಿಕೊಂಡು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ ₹3,454 ಕೋಟಿ. ಇದು ನಮಗೆ ಅಗತ್ಯವಿರುವ ಮೊತ್ತದ ಕಾಲು ಭಾಗಕ್ಕಿಂತ ಕಡಿಮೆ’ ಎಂದು ಹೇಳಿದೆ.

‘ನ್ಯಾಯಾಲಯದ ಕಣ್ಣಿಗೂ ಮಣ್ಣೆರಚುವ ಕೇಂದ್ರ ಸರ್ಕಾರದ ಕುತಂತ್ರದ ನಡೆಯನ್ನು ಕನ್ನಡಿಗರು ಅರ್ಥ ಮಾಡಿಕೊಂಡಿದ್ದಾರೆ. ನ್ಯಾಯಯುತ ಪರಿಹಾರಕ್ಕಾಗಿ ಕನ್ನಡಿಗರು ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲು ಹತ್ತಬೇಕೇ’ ಎಂದು ಪ್ರಶ್ನಿಸಿದೆ.

‘ಬರ ಪರಿಹಾರದಲ್ಲಿ ಕೇಂದ್ರ ಸರ್ಕಾರದ ಮೋಸದ ಕಣ್ಣಾಮುಚ್ಚಾಲೆ ಆಟ ಮುಂದುವರೆದಿದೆ. ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲಿಸಿದಂತೆಯೂ ಇರಬೇಕು, ಕರ್ನಾಟಕಕ್ಕೆ ಅನ್ಯಾಯ ಆಗುವಂತೆಯೂ ಇರಬೇಕು ಎಂಬ ಚಾಣಾಕ್ಷತನ ತೋರಿದೆ’ ಎಂದು ಅಸಮಾಧಾನ ಹೊರಹಾಕಿದೆ.

‘ನ್ಯಾಯಾಂಗ ಹೋರಾಟದ ಮೂಲಕ ರಾಜ್ಯದ ಹಕ್ಕಿನ ಪಾಲನ್ನು ಪಡೆಯಲು ಶ್ರಮವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೂ ಧನ್ಯವಾದಗಳು’ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT