ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೈಲಿನಲ್ಲಿ ಟೀ–ಪಾರ್ಟಿ ಆಯೋಜಿಸಿದ್ದು ವಿಲ್ಸನ್‌ ಗಾರ್ಡನ್‌ ನಾಗ: ನಟ ದರ್ಶನ್

Published : 29 ಆಗಸ್ಟ್ 2024, 0:16 IST
Last Updated : 29 ಆಗಸ್ಟ್ 2024, 0:16 IST
ಫಾಲೋ ಮಾಡಿ
Comments

ಬೆಂಗಳೂರು: ‘ಆಗಸ್ಟ್‌ 22ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ಬ್ಯಾರಕ್‌ ಎದುರು ಟೀ ಪಾರ್ಟಿ ಆಯೋಜಿಸಿದ್ದು ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಅಲಿಯಾಸ್‌ ನಾಗರಾಜ’ ಎಂಬುದಾಗಿ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ಚಿತ್ರನಟ ದರ್ಶನ್‌ ಪೊಲೀಸರಿಗೆ ತಿಳಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ, ವಿಡಿಯೊ ಕರೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸ್ ತನಿಖಾ ತಂಡಗಳು ಬುಧವಾರ ಹಲವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಿದವು.

ಜೈಲಿನೊಳಗೆ ವಿಶೇಷ ಆತಿಥ್ಯ ಪಡೆದು ಕುರ್ಚಿಯಲ್ಲಿ ಕುಳಿತು ಸಿಗರೇಟ್‌ ಸೇದುತ್ತಾ ರೌಂಡ್‌ ಟೇಬಲ್‌ ಪಾರ್ಟಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌, ವಿಲ್ಸನ್‌ ಗಾರ್ಡನ್‌ ನಾಗ, ಕುಳ್ಳ ಸೀನ ಹಾಗೂ ದರ್ಶನ್‌ ವ್ಯವಸ್ಥಾಪಕ ನಾಗರಾಜ್‌ ಅವರನ್ನು ತನಿಖಾಧಿಕಾರಿಗಳು ಬುಧವಾರ ವಿಚಾರಣೆಗೆ ಒಳಪಡಿಸಿದರು.

ಸಿಗರೇಟ್‌ ಸೇದಿ, ಪಾರ್ಟಿ ನಡೆಸಿದ್ದ ಸ್ಥಳವನ್ನು ವೀಕ್ಷಿಸಿದ ತನಿಖಾಧಿಕಾರಿಗಳು ಮಹಜರು ನಡೆಸಿದರು. ಅಲ್ಲದೇ ಸಿ.ಸಿ.ಟಿ.ವಿ ಕ್ಯಾಮೆರಾಗಳ ಕಾರ್ಯಕ್ಷಮತೆ ಪರಿಶೀಲಿಸಿದ ಪೊಲೀಸರು ಕೆಲವು ಡಿವಿಆರ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಗೊತ್ತಾಗಿದೆ.

‘ಆ.22ರಂದು ಸಂಜೆ ನಾನಿದ್ದ ಬ್ಯಾರಕ್‌ಗೆ ವ್ಯಕ್ತಿಯೊಬ್ಬ ಬಂದು, ‘ನಮ್ಮ ಬಾಸ್’ ನಾಗ ಬರಲು ಹೇಳಿದ್ದಾರೆ ಎಂದರು. ನಾನು ಎದ್ದು ಹೋದೆ. ಆಗ ಆವರಣದಲ್ಲಿ ನಾಲ್ಕು ಕುರ್ಚಿ, ಟೇಬಲ್‌ ವ್ಯವಸ್ಥೆ ಮಾಡಲಾಗಿತ್ತು. ಹೋಗುತ್ತಿದ್ದಂತೆಯೇ ನಾಗ ಪರಿಚಯಿಸಿಕೊಂಡು, ಕುಳಿತುಕೊಳ್ಳಲು ಹೇಳಿದ. ಕುಳಿತುಕೊಂಡ ಬಳಿಕ ಟೀ ಹಾಗೂ ಸಿಗರೇಟ್ ತೆಗೆದುಕೊಳ್ಳುವಂತೆ ಕೊಟ್ಟ. ಅವರೊಂದಿಗೆ ಸ್ವಲ್ಪ ಸಮಯ ಮಾತಾಡಿದ್ದೆ. ನಾನು ಯಾರಿಗೂ ಸಿಗರೇಟ್, ಟೀ ಬೇಕೆಂದು ಕೇಳಿಲ್ಲ’ ಎಂಬುದಾಗಿ ದರ್ಶನ್‌ ವಿಚಾರಣೆ ವೇಳೆ ಹೇಳಿದ್ದಾರೆ ಎಂದು ಗೊತ್ತಾಗಿದೆ.

ಇನ್ನು ಮೊಬೈಲ್‌ನಲ್ಲಿ ರೌಡಿಶೀಟರ್ ಪುತ್ರನ ಜತೆ ವಿಡಿಯೊ ಕರೆ ಮಾಡಿರುವ ಸಂಬಂಧ ಹೇಳಿಕೆ ನೀಡಿರುವ ದರ್ಶನ್‌, ‘ಧರ್ಮ ಯಾರೆಂಬುದು ಗೊತ್ತಿಲ್ಲ. ನನ್ನ ಕೋಣೆಗೆ ಬಂದವರು ಯಾರು? ಕರೆ ಮಾಡಿದವರು ಯಾರು ಎಂಬುದೂ ತಿಳಿದಿಲ್ಲ. ವಿಡಿಯೊ ಕರೆ ಮಾಡಿಕೊಂಡು ವ್ಯಕ್ತಿಯೊಬ್ಬ ಬಂದು ದರ್ಶನ್ ಸರ್ ಇದ್ದಾರೆಂದು ಹೇಳಿ ಮೊಬೈಲ್‌ ನನ್ನ ಕಡೆ ತಿರುಗಿಸಿದ. ಅತ್ತ ಯುವಕ ಹಾಯ್‌ ಎಂದು ಹೇಳಿದ್ದಕ್ಕೆ ಸೌಜನ್ಯದಿಂದ ಪ್ರತಿಕ್ರಿಯಿಸಿದ್ದೆ ಅಷ್ಟೇ’ ಎಂದು ಹೇಳಿಕೆ ನೀಡಿದ್ದಾರೆ.

ಕಾರಾಗೃಹಗಳ ನಿಯಮ ಉಲ್ಲಂಘಿಸಿ ಮೊಬೈಲ್‌ ಬಳಸಿ ವಿಡಿಯೊ ಕರೆ ಮಾಡಿದ್ದ ಸತ್ಯ ಹಾಗೂ ಧರ್ಮ ಎಂಬವರನ್ನೂ ಪೊಲೀಸರು ವಿಚಾರಣೆ ನಡೆಸಿದ್ಧಾರೆ.

‘ವಿಡಿಯೊ ಕರೆ ಮಾಡಿದ್ದ ಮೊಬೈಲ್‌ ಸಿಕ್ಕಿಲ್ಲ. ಆ ಮೊಬೈಲ್ ನಾಶ ಪಡಿಸಿರುವ ಸಾಧ್ಯತೆಯಿದೆ. ಯಾರ ಹೆಸರಿನ ಸಿಮ್‌ನಲ್ಲಿ ಕರೆ ಮಾಡಲಾಗಿತ್ತು ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ತನಿಖಾಧಿಕಾರಿಗಳು ಹೇಳಿದರು.

ಜೈಲು ಸಿಬ್ಬಂದಿ ಹೇಳಿಕೆ ದಾಖಲು: ರಟ್ಟಿನ ಪೆಟ್ಟಿಗೆಯಲ್ಲಿ ವಸ್ತುಗಳನಿಟ್ಟು ಸಾಗಣೆ ಮಾಡಿದ್ದ ಪ್ರಕರಣದಲ್ಲಿ ಜೈಲು ಸಿಬ್ಬಂದಿಗಳಾದ ಕೆ.ಎಸ್‌.ಸುದರ್ಶನ್‌, ಪರಮೇಶ್ ನಾಯಕ್‌ ಲಮಾಣಿ, ರಾಯಮಾನೆ ಹಾಗೂ ಕೈದಿ ಮುಜೀಬ್‌ನನ್ನು ವಿಚಾರಣೆ ನಡೆಸಲಾಗಿದೆ ಎಂದು ಗೊತ್ತಾಗಿದೆ.

ಅವಧಿ ವಿಸ್ತರಣೆ: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು 24ನೇ ಎಸಿಎಂಎಂ ನ್ಯಾಯಾಲಯವು ಸೆಪ್ಟೆಂಬರ್‌ 9ರ ವರೆಗೆ ವಿಸ್ತರಿಸಿ ಆದೇಶಿಸಿದೆ.

ನ್ಯಾಯಾಂಗ ಬಂಧನದ ಅವಧಿ ಬುಧವಾರಕ್ಕೆ ಅಂತ್ಯವಾಗಿದ್ದರಿಂದ ಎಲ್ಲ ಆರೋಪಿಗಳನ್ನು ವಿಡಿಯೊ ಕಾನ್ಪರೆನ್ಸ್‌ ಮೂಲಕ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಯಿತು.

ಆಗ ತನಿಖಾಧಿಕಾರಿಗಳ ಪರ ವಕೀಲರು, ‘ದರ್ಶನ್ ಹಾಗೂ ಸಹಚರರು ಮೃತನ ಕುಟುಂಬಕ್ಕೆ ಬೆದರಿಕೆ ಹಾಕಬಹುದು. ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡಬೇಕು’ ಎಂದು ಕೋರಿದರು. ನ್ಯಾಯಾಧೀಶರು ಅವಧಿ ವಿಸ್ತರಿಸಿ ಆದೇಶಿಸಿದರು.

ಇದೇ ವೇಳೆ ವಿಚಾರಣಾಧೀನ ಕೈದಿ ಪ್ರದೂಷ್‌, ‘ತಮ್ಮ ತಂದೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಕೀಲರ ಭೇಟಿಗೂ ನನಗೆ ಅವಕಾಶ ಸಿಗುತ್ತಿಲ್ಲ. ಬೆಳಗಾವಿ ಜೈಲಿಗೆ ಸ್ಥಳಾಂತರಿಸದೆ ಇದೇ ಜೈಲಿನಲ್ಲಿ ಇರುವುದಕ್ಕೆ ಅವಕಾಶ ಮಾಡಿಕೊಡಿ’ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.‌

ನ್ಯಾಯಾಧೀಶರು ಮನವಿ ತಿರಸ್ಕರಿಸಿ, ಜೈಲು ನಿಯಮಾವಳಿ ಪ್ರಕಾರ ವಕೀಲರು ಹಾಗೂ ಕೈದಿಯ ಕಡೆಯವರಿಗೆ ಭೇಟಿಗೆ ಅವಕಾಶ ಕಲ್ಪಿಸುವಂತೆ ಸೂಚಿಸಿದರು.

ಬಳ್ಳಾರಿ ಜೈಲಿಗೆ ದರ್ಶನ್‌ ಸ್ಥಳಾಂತರ

ಬಳ್ಳಾರಿ ಜೈಲಿಗೆ ದರ್ಶನ್ ಅವರನ್ನು ಗುರುವಾರ ಬೆಳಿಗ್ಗೆಯೇ ಸ್ಥಳಾಂತರಿಸುವ ಸಾಧ್ಯತೆಯಿದೆ. ಬುಧವಾರ ಸಂಜೆಯೇ ಸ್ಥಳಾಂತರಕ್ಕೆ ಜೈಲು ಸಿಬ್ಬಂದಿ ಹಾಗೂ ನಗರ ಪೊಲೀಸರು ಸಿದ್ಧತೆ ನಡೆಸಿದ್ದರು. ಆದರೆ ದರ್ಶನ್‌ ವಿಚಾರಣೆ ಬಾಕಿಯಿದ್ದ ಕಾರಣಕ್ಕೆ ಸ್ಥಳಾಂತರ ವಿಳಂಬವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಉಳಿದ ಒಂಬತ್ತು ಆರೋಪಿಗಳ ಸ್ಥಳಾಂತರವೂ ಗುರುವಾರವೇ ನಡೆಯಲಿದೆ ಎಂದು ಗೊತ್ತಾಗಿದೆ.

ವಿಐಪಿ ಬ್ಯಾರಕ್‌ಗೆ ದರ ನಿಗದಿ

ಅಪರಾಧ ಪ್ರಕರಣಗಳಲ್ಲಿ ಪರಪ್ಪನ ಅಗ್ರಹಾರ ಸೇರಿದರೆ ಆರಂಭದಲ್ಲಿ ಕ್ವಾರಂಟೈನ್‌ ಸೆಲ್‌ನಲ್ಲಿ ಆರೋಪಿಯನ್ನು ಇಡಲಾಗುತ್ತದೆ. ನಂತರ ವಿಐಪಿ ಬ್ಯಾರಕ್‌ಗೆ ಹೋಗಬೇಕಾದರೆ ಜೈಲು ಸಿಬ್ಭಂದಿಗೆ ಹಣ ನೀಡಬೇಕು’ ಎಂದು ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಯೊಬ್ಬರು ತಿಳಿಸಿದ್ದಾರೆ.

‘ಕಾರಾಗೃಹದಲ್ಲಿ ವಿಶೇಷ ಬ್ಯಾರಕ್‌ಗಳಿವೆ. ಆ ಬ್ಯಾರಕ್‌ನಲ್ಲಿ ಉಳಿಯಲು 15 ದಿನಕ್ಕೆ ₹30ರಿಂದ ₹40 ಸಾವಿರ ನಿಗದಿ ಪಡಿಸಲಾಗಿದೆ. ರೌಡಿಗಳು ಉಳ್ಳವರು ಸಿಬ್ಬಂದಿಗೆ ಹಣ ಕೊಟ್ಟು ಆ ಬ್ಯಾರಕ್‌ಗಳಲ್ಲಿ ಉಳಿಯುತ್ತಾರೆ. ಇಲ್ಲದಿದ್ದರೆ ಸಾಮಾನ್ಯ ಸೆಲ್‌ನಲ್ಲಿ ಇತರೆ ಕೈದಿಗಳ ಜತೆಗೆ ಇರಬೇಕು’ ಎಂದು ಬಹಿರಂಗ ಪಡಿಸಿದ್ದಾರೆ.

‘ಪರಪ್ಪನ ಅಗ್ರಹಾರದಲ್ಲಿ ರೌಡಿಗಳಿಗೆ ಸುಲಭವಾಗಿ ಮೊಬೈಲ್ ಸಿಗುತ್ತದೆ. ದಾಳಿ ಮಾಹಿತಿ ಗೊತ್ತಾದ ತಕ್ಷಣವೇ ಭೂಮಿಯೊಳಗೆ ಬಚ್ಚಿಡುತ್ತಾರೆ. ಇದಕ್ಕಾಗಿಯೇ ಜೈಲು ಆವರಣದ ಮೈದಾನದಲ್ಲಿ ಗುಂಡಿಗಳನ್ನು ಮಾಡಿಕೊಂಡಿದ್ಧಾರೆ. ಕೆಲವರು ಬಾಳೆ ದಿಂಡು ಸೀಳಿ ಅದರಲ್ಲಿ ಮೊಬೈಲ್‌ ಸಿಮ್‌ ಹಾಗೂ ಹಣವನ್ನು ಬಚ್ಚಿಡುತ್ತಾರೆ. ಜೈಲಿನ ಒಳಗೆ ಕ್ಯಾಂಟೀನ್‌ ಇದೆ. ಆರೋಪಿ ಜೈಲು ಸೇರಿದಾಗ ಆತನ ಬಳಿಯಿದ್ದ ಹಣವನ್ನು ಜೈಲು ಸಿಬ್ಬಂದಿ ಪಡೆದು ಕೂಪನ್‌ ನೀಡುತ್ತಾರೆ. ನಂತರ ಆರೋಪಿಗೆ ಬೇಕಾದಾಗ ಬಿಸ್ಕತ್‌ ಚಿಪ್ಸ್ ಖರೀದಿಸಬಹುದು’ ಎಂದು ನಿವೃತ್ತ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಪವಿತ್ರಾ ಜಾಮೀನು: 31ಕ್ಕೆ

ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪವಿತ್ರಾಗೌಡ ಜಾಮೀನು ಅರ್ಜಿ ವಿಚಾರಣೆ ನಡೆಸಿದ 57ನೇ ಸಿಸಿಎಚ್ ನ್ಯಾಯಾಲಯವು ಆಗಸ್ಟ್‌ 31ಕ್ಕೆ ಆದೇಶ ಕಾಯ್ದಿರಿಸಿದೆ. ‌ ಪ್ರಕರಣದ ಮೊದಲ ಆರೋಪಿ ಪವಿತ್ರಾ ಜಾಮೀನು ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ ಇತರೆ ಆರೋಪಿಗಳಾದ ಅನುಕುಮಾರ್, ವಿನಯ್, ಕೇಶವಮೂರ್ತಿ ಸಹ ಜಾಮೀನಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

ಪವಿತ್ರಾ ಹಾಗೂ ಅನುಕುಮಾರ್ ಜಾಮೀನು ಅರ್ಜಿಯ ಆದೇಶವನ್ನು ಇದೇ 31ಕ್ಕೆ ಕಾಯ್ದಿರಿಸಿದರೆ, ವಿನಯ್ ಹಾಗೂ ಕೇಶವ ಮೂರ್ತಿ ಜಾಮೀನು ಆದೇಶವನ್ನು ಸೆಪ್ಟೆಂಬರ್‌ 2ಕ್ಕೆ ಕಾಯ್ದಿರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT