ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಕ್ಷ ವ್ಯವಸ್ಥೆ ಇಲ್ಲದೆ ಸರ್ಕಾರ, ಅಕಾಡೆಮಿಗಳಿಲ್ಲ: ಸಚಿವ ಶಿವರಾಜ್‌ ತಂಗಡಗಿ

ಕೆಪಿಸಿಸಿ ಕಚೇರಿಯಲ್ಲಿ ಅಕಾಡೆಮಿ ಸಭೆ: ಸಚಿವ ಶಿವರಾಜ್‌ ತಂಗಡಗಿ ಸಮರ್ಥನೆ
Published 21 ಜೂನ್ 2024, 15:15 IST
Last Updated 21 ಜೂನ್ 2024, 15:15 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷ ವ್ಯವಸ್ಥೆ ಇಲ್ಲದೆ ಸರ್ಕಾರವಿಲ್ಲ, ಸರ್ಕಾರವಿಲ್ಲದೇ ಅಕಾಡೆಮಿ– ಪ್ರಾಧಿಕಾರಗಳಿಲ್ಲ’ ಎನ್ನುವ ಮೂಲಕ ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಕೆಪಿಸಿಸಿ ಕಚೇರಿಯಲ್ಲಿ ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಯನ್ನು ಸಮರ್ಥಿಸಿಕೊಂಡರು.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ‘ಪಕ್ಷ ವ್ಯವಸ್ಥೆಯ ಆಧಾರದ ಮೇಲೆ ಎಲ್ಲ ಸರ್ಕಾರಗಳು ಅಸ್ತಿತ್ವಕ್ಕೆ ಬರುತ್ತವೆ. ಈಗ ರಾಜ್ಯದಲ್ಲಿರುವುದು ಕಾಂಗ್ರೆಸ್‌ ಸರ್ಕಾರ ಎಂದೇ ಎಲ್ಲರೂ ಕರೆಯುವುದು. ಅಲ್ಲದೇ, ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಷ್ಟೇ ಅಲ್ಲ, ಉಪ ಮುಖ್ಯಮಂತ್ರಿಯೂ ಹೌದು. ಹಾಗಾಗಿ, ಪಕ್ಷದ ಕಚೇರಿಗೆ ಅಕಾಡೆಮಿ ಅಧ್ಯಕ್ಷರನ್ನು ಕರೆದಿದ್ದಾರೆ. ಅದರಲ್ಲಿ ತಪ್ಪು ಏಕೆ ಹುಡುಕಬೇಕು’ ಎಂದು ಪ್ರಶ್ನಿಸಿದರು.

ಶಿವಕುಮಾರ್‌ ಅವರು ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಸರ್ಕಾರದ ಘನತೆ ಹೆಚ್ಚಿಸುವಲ್ಲಿ ಸಾಹಿತಿಗಳ ಪಾತ್ರ ಮಹತ್ವದ್ದಾಗಿದೆ. ಹಾಗಾಗಿ, ಸಭೆ ನಡೆಸಿ ಕೆಲವೊಂದು ಸಲಹೆ ನೀಡಿದ್ದಾರೆ ಎಂದರು.

‘ಹಿಂದಿ‌ನ ಸರ್ಕಾರದಲ್ಲಿ ಅಕಾಡೆಮಿಗಳ ಅಧ್ಯಕ್ಷರ ಸಭೆ ಎಲ್ಲಿ ನಡೆಸಿದ್ದರು ಎಂದು ಹೇಳುತ್ತಾ ಹೋದರೆ ಅದು ರಾಜಕೀಯವಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಘೋಷಣೆ ಮಾಡಿದ್ದವರಿಗೂ ಪ್ರಶಸ್ತಿ ಪ್ರದಾನ ಮಾಡಲಿಲ್ಲ. ನಮ್ಮ ಸರ್ಕಾರ ಬಂದ ನಂತರ ಎಲ್ಲರಿಗೂ ಪ್ರದಾನ ಮಾಡಿದ್ದೇವೆ’ ಎಂದು ಹೇಳಿದರು.

ಸುದ್ದಿಗೋಷ್ಠಿಗೂ ಮೊದಲು, ಶಿವರಾಜ್‌ ತಂಗಡಗಿ ನೇತೃತ್ವದಲ್ಲಿ ಶುಕ್ರವಾರ ನಡೆದ ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರ ಸಭೆಯಲ್ಲಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಅವರು ಕೆಪಿಸಿಸಿ ಕಚೇರಿಯಲ್ಲಿನ ಸಭೆ ಕುರಿತು ಸಾಹಿತಿಗಳ ಟೀಕೆಗಳ ಪ್ರಸ್ತಾವ ಮಾಡಿದರೂ, ಉಳಿದ ಸಾಹಿತಿಗಳು ಮತ್ತು ಕಲಾವಿದರು ಪ್ರತಿಕ್ರಿಯಿಸಲಿಲ್ಲ. ಎಲ್ಲರೂ ಮೌನವಹಿಸಿದ್ದರು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT