ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ ವರದಿ ಸ್ವೀಕಾರ ಬೆಂಕಿ ಜತೆಗೆ ಸರ್ಕಾರದ ಆಟ: ಬೊಮ್ಮಾಯಿ

Published 1 ಮಾರ್ಚ್ 2024, 15:59 IST
Last Updated 1 ಮಾರ್ಚ್ 2024, 15:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಪಡೆಯುವ ಮೂಲಕ ಬೆಂಕಿಯ ಜೊತೆ ಆಟವಾಡಲು ಹೊರಟಿದೆ. ಇದು ಅಶಾಂತಿಗೂ ಕಾರಣವಾಗಲಿದೆ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ಜಾತ್ಯತೀತ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಹತ್ತಿರ ಬಂದಾಗ ಜಾತಿಗಳ ಮೇಲೆ ಪ್ರೀತಿ ಉಕ್ಕುತ್ತದೆ. ಜಾತಿ ಸಮಾವೇಶ ನಡೆಸುವುದು, ಸುಳ್ಳು ಆಶ್ವಾಸನೆ ಕೊಡುವುದನ್ನು ಮಾಡುತ್ತಾರೆ. ಸಿದ್ದರಾಮಯ್ಯ ಅವರು ಎಲ್ಲ ಜಾತಿಗಳ ಶಿಕ್ಷಣ ಮತ್ತು ಸಾಮಾಜಿಕ ಅಧ್ಯಯನ ಮಾಡಲು 2015ರಲ್ಲಿ ಸೂಚಿಸಿದ್ದರು. ಅವರ ಉದ್ದೇಶ ಬೇರೆ ಇತ್ತು. ಜಾತಿ ಗಣತಿ ಮಾಡುವ ಅಧಿಕಾರ ಯಾರದ್ದು ಎಂಬ ವಿಚಾರ ಸುಪ್ರೀಂ ಕೋರ್ಟ್‌ ಮುಂದಿದೆ. ಅದನ್ನು ತಪ್ಪಿಸಲು ಇವರು ಶೈಕ್ಷಣಿಕ, ಸಾಮಾಜಿಕ ಅಧ್ಯಯನ ಅಂತ ಹೇಳಿದರು. ಉದ್ದೇಶವೇ ಒಂದು ಆದೇಶವೇ ಒಂದು ಆಗಿರುವುದರಿಂದ ಈ ಗೊಂದಲ ಸೃಷ್ಟಿಯಾಯಿತು ಎಂದರು.

‘ಜಾತಿ ಸಮೀಕ್ಷೆಗೆ ನಮ್ಮ ವಿರೋಧವಿಲ್ಲ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರನ್ನು ಮೇಲೆತ್ತಬೇಕು ಎಂಬ ಕಾರಣಕ್ಕೆ ನಮ್ಮ ಸರ್ಕಾರ ಇದ್ದಾಗ, ಪರಿಶಿಷ್ಟ ಜಾತಿ– ಪಂಗಡದವರ ಮೀಸಲಾತಿ ಹೆಚ್ಚಿಸಿದ್ದೇವೆ.  ಹಿಂದುಳಿದವರಲ್ಲಿ ಅತಿ ಹಿಂದುಳಿದವರಿಗೆ ಮೀಸಲಾತಿ ಪ್ರಯೋಜನ ಸಿಗುತ್ತಿಲ್ಲ. ಅವರಿಗೆ ಸೌಲಭ್ಯ ಸಿಗಬೇಕು. ವರದಿಯನ್ನು ಮುಖ್ಯಮಂತ್ರಿ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಬಳಸಿಕೊಂಡರೆ ಅದು ಅಕ್ಷಮ್ಯ ಅಪರಾಧ’ ಎಂದು ಹೇಳಿದರು.

‘ವರದಿ ಬಗ್ಗೆ ಸಂಪುಟದ ಸಚಿವರೇ ಅಪಸ್ವರ ಎತ್ತಿದ್ದಾರೆ. ನಿಮ್ಮ ಸಂಪುಟದಲ್ಲಿ ಒಗ್ಗಟ್ಟಿಲ್ಲವೇ’ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ ಬೊಮ್ಮಾಯಿ, ‘ತುಳಿತಕ್ಕೊಳಗಾದವರ ಜೊತೆ ಆಟ ಆಡುವುದು ಸರಿಯಲ್ಲ. ಸಮಾಜದಲ್ಲಿ ಗೊಂದಲ ಉಂಟು ಮಾಡುವ ಕೆಲಸ ಮಾಡಬೇಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT