ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾ.ಪಂ. ಬಲವರ್ಧನೆಗೆ ಕ್ರಮ: ಪ್ರಿಯಾಂಕ್‌ ಖರ್ಗೆ

Published : 14 ಫೆಬ್ರುವರಿ 2024, 16:27 IST
Last Updated : 14 ಫೆಬ್ರುವರಿ 2024, 16:27 IST
ಫಾಲೋ ಮಾಡಿ
Comments

ಬೆಂಗಳೂರು: ‘ಗ್ರಾಮ ಪಂಚಾಯತಿಗಳ ಬಲವರ್ಧನೆ,  ಸುಗಮ ಕಾರ್ಯನಿರ್ವಹಣೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನು ಹಂತ ಹಂತವಾಗಿ ತೆಗೆದುಕೊಳ್ಳಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಅವರು, ‌‘ಆದಷ್ಟು ಬೇಗ ಕೈಪಿಡಿ ಬಿಡುಗಡೆ ಮಾಡಲಾಗುವುದು. ‌ಗ್ರಾಮ ಸಭೆಗಳು ಸಮರ್ಪಕವಾಗಿ ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೆ, ಗ್ರಾಮ ಸಭೆ ವಿಷಯಗಳು ಆನ್ ಲೈನ್‌ನಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ಗ್ರಾಮ ಪಂಚಾಯತಿಗಳಲ್ಲಿ ಕೆಡಿಪಿ ಸಭೆ ಕಡ್ಡಾಯಗೊಳಿಸಲು ಸೂಚನೆ ನೀಡಲಾಗುವುದು. ಬಾಪೂಜಿ ಸೇವಾ ಕೇಂದ್ರಗಳಲ್ಲಿ 72 ಸೇವೆಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಈ ಕೇಂದ್ರಗಳನ್ನು ಇನ್ನಷ್ಟು ಸಶಕ್ತಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ಗ್ರಾಮ ಪಂಚಾಯತಿಗಳಲ್ಲಿ ‌ವಿದ್ಯುತ್ ಸಮಸ್ಯೆ ಪರಿಹರಿಸಲು ಸೋಲಾರ್ ಬಳಕೆಗೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಬಜೆಟ್‌ನಲ್ಲಿ ಅನುದಾನ ಸಿಗುವ ಸಾಧ್ಯತೆಯಿದೆ. ಅಲ್ಲದೆ, ಗ್ರಾಮ ಪಂಚಾಯತಿಗಳಿಗೆ ರೇಟಿಂಗ್ ಕೊಡುವ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಪಿಡಿಒಗಳಿಗೆ ಇ-ಹಾಜರಾತಿ ವ್ಯವಸ್ಥೆ ಮಾಡಿದ್ದು, ಎಷ್ಟು ದಿನ ಕೆಲಸ ಮಾಡುತ್ತಾರೊ ಅಷ್ಟು ದಿನ ಸಂಬಳ ಸಿಗಲಿದೆ. ಗ್ರಾಮ ಪಂಚಾಯತಿ ಸದಸ್ಯರಿಗೆ ಬಸ್ ಪಾಸ್‌ ಕೊಡುವ ಬಗ್ಗೆ ಸಾರಿಗೆ ಸಚಿವರ ಜೊತೆ ಚರ್ಚೆ ಮಾಡಲಾಗುವುದು. ಗ್ರಾಮ ಪಂಚಾಯತಿ ಸದಸ್ಯರಿಗೆ ಆಯುಷ್ಮಾನ್ ಭಾರತ್ ಯೋಜನೆ ಅನ್ವಯವಾಗುತ್ತದೆ. ಹೀಗಾಗಿ ಪ್ರತ್ಯೇಕ ವಿಮಾ ಯೋಜನೆ ವ್ಯವಸ್ಥೆ ಸಾಧ್ಯವಿಲ್ಲ’ ಎಂದೂ ಹೇಳಿದರು.

ಸಂವಿಧಾನದ ಆಶಯದಂತೆ ರೂಪಿಸಿರುವ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆಯ ಪ್ರಕಾರ ಎಲ್ಲ ಅಧಿಕಾರಗಳನ್ನೂ ಗ್ರಾಮ ಪಂಚಾಯಿತಿಗಳಿಗೆ ನೀಡಬೇಕು. ಹಣಕಾಸು ಅಧಿಕಾರವನ್ನೂ ಹಸ್ತಾಂತರಿಸಬೇಕು. ಅದಕ್ಕೆ ಅಗತ್ಯವಾದ  ರೂಪುರೇಷೆ ಸಿದ್ಧಪಡಿಸಬೇಕು. ಗೌರವಧನ, ಭತ್ಯೆ ಹೆಚ್ಚಳ ಮಾಡಬೇಕು ಎಂದು ಮಂಜುನಾಥ ಭಂಡಾರಿ ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT