ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಟ ದರ್ಶನ್‌ಗೆ ಸೇರಿದ ಫಾರ್ಮ್‌ಹೌಸ್‌ನಲ್ಲಿ ಮೇಲ್ವಿಚಾರಕ ಆತ್ಮಹತ್ಯೆ:ತನಿಖೆ ಚುರುಕು

Published 18 ಜೂನ್ 2024, 23:40 IST
Last Updated 18 ಜೂನ್ 2024, 23:40 IST
ಅಕ್ಷರ ಗಾತ್ರ

ಆನೇಕಲ್: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ಚಿತ್ರನಟ ದರ್ಶನ್‌ ಒಡೆತನದ ಫಾರ್ಮ್‌ಹೌಸ್‌ ಮೇಲ್ವಿಚಾರಕ ಶ್ರೀಧರ್‌ ಆತ್ಮಹತ್ಯೆಗೆ ಸಂಬಂಧಿಸಿದ ಕಡತಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಂಗಳವಾರ ತರಿಸಿಕೊಂಡು ಪರಿಶೀಲಿಸಿದರು.

‘ಮಗನ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಶ್ರೀಧರ್‌ ತಂದೆ ಆನೇಕಲ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಾಗಾಗಿ ಸಂಬಂಧಿಸಿದ ಕಡತ, ಮರಣೋತ್ತರ ಪರೀಕ್ಷೆ ಮತ್ತು ಎಫ್‌ಎಸ್‌ಎಲ್‌ ವರದಿ ಪರಿಶೀಲಿಸಲಾಗುತ್ತಿದೆ’ ಎಂದು ಬಾಲದಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಆನೇಕಲ್‌ ತಾಲ್ಲೂಕಿನ ಇಂಡ್ಲವಾಡಿ ಪಂಚಾಯಿತಿ ವ್ಯಾಪ್ತಿಯ ಬಗ್ಗನದೊಡ್ಡಿ ಗ್ರಾಮದಲ್ಲಿ ನಟ ದರ್ಶನ್‌ ಒಡೆತನದ ಫಾರ್ಮ್‌ಹೌಸ್‌ ಇದೆ. ಅದರ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ್‌ (35) ಇದೇ ಏ.17ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸಾವಿಗೂ ಮುನ್ನ ಬರೆದಿಟ್ಟಿರುವ ಮರಣಪತ್ರದಲ್ಲಿ (ಡೆತ್‌ನೋಟ್‌) ತನ್ನ ಸಾವಿಗೆ ಯಾರೂ ಕಾರಣ ಅಲ್ಲ ಎಂದು ಹೇಳಿದ್ದ. ಆನೇಕಲ್‌ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.

‘ಆತ್ಮಹತ್ಯೆಗೆ ಒಂಟಿತನ ಕಾರಣ. ಹಾಗಾಗಿ ಈ ಸಂಬಂಧ ಯಾರಿಗೂ ತೊಂದರೆ ಕೊಡಬೇಡಿ’ ಎಂದು ಶ್ರೀಧರ್‌ ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ. ಸಾಯುವ ಮುನ್ನ ಮಾಡಿದ ವಿಡಿಯೊ ರೆಕಾರ್ಡ್‌ನಲ್ಲಿ ಕೂಡ ಆತ ಇದೇ ಮಾತು ಹೇಳಿದ್ದಾನೆ.

‘ಶ್ರೀಧರ್‌ಗೆ ಮದುವೆ ಆಗಿರಲಿಲ್ಲ. ಮನೆಯಲ್ಲಿ ಜಗಳ ಮಾಡಿಕೊಂಡು ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದ’ ಎಂದು ಆತನ ತಂದೆ ಆನೇಕಲ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮಗನ ಸಾವಿನ ಬಗ್ಗೆ ತನಿಖೆ ಮಾಡುವಂತೆ ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT