ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿಸಾಗರ ಸಂರಕ್ಷಣೆ-ಗೆ ನಟರ ಪಣ

ನೇತೃತ್ವ ವಹಿಸಿಕೊಳ್ಳಲು ಸ್ವಾಮೀಜಿಗೆ ಕಿಶೋರ್‌, ರೂಪಾ ಅಯ್ಯರ್‌ ಮನವಿ
Last Updated 2 ಜುಲೈ 2018, 20:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರದ (ಸೂಳೆಕೆರೆ) ಹೂಳೆತ್ತುವ ಹಾಗೂ ಒತ್ತುವರಿ ತೆರವು ಗೊಳಿಸುವ ಅಭಿಯಾನಕ್ಕೆ ಚಿತ್ರನಟ ಕಿಶೋರ್ ಹಾಗೂ ನಟಿ ರೂಪಾ ಅಯ್ಯರ್ ಕೈಜೋಡಿಸಿದ್ದಾರೆ.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನಡೆಸುವ ಸದ್ಧರ್ಮ ನ್ಯಾಯಪೀಠದಲ್ಲಿ ಸೋಮವಾರ ಹಾಜರಾದ ಚಿತ್ರನಟ–ನಿರ್ದೇಶಕಿ, ಅಭಿಯಾನದ ಸ್ವರೂಪದ ಕುರಿತು ಗಮನ ಸೆಳೆದರು.

ಕೆರೆಯಲ್ಲಿ ಹೂಳು ತುಂಬಿದ್ದರಿಂದ ನೀರು ಸಂಗ್ರಹಣಾ ಸಾಮರ್ಥ್ಯ 3 ಟಿಎಂಸಿ ಅಡಿಯಿಂದ 1.6 ಟಿಎಂಸಿ ಅಡಿಗೆ ಕುಸಿದಿದೆ ಎಂಬ ಸಂಗತಿಯನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ನಟ ಕಿಶೋರ್‌, ‘ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆ ಹೊಂದಿದ ಶಾಂತಿಸಾಗರದಲ್ಲಿ ಹೂಳು ತುಂಬಿದೆ. ಒತ್ತುವರಿ ತೆರವಿಗೆ ಕಾನೂನು ಪ್ರಕ್ರಿಯೆ ಆರಂಭಿಸುವ ಅಗತ್ಯವಿದೆ. ಸರ್ಕಾರದ ಸಹಾಯವಿಲ್ಲದೆ ಕೆರೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ತೋರಿಸಲು ಸ್ಥಳೀಯರು ಮುಂದಾಗಿದ್ದಾರೆ. ಇದಕ್ಕೆ ನಮ್ಮ ಬೆಂಬಲವೂ ಇದೆ’ ಎಂದರು.

‘ಕೆರೆ ಉಳಿದರೆ ನಾಡು ಅಭಿವೃದ್ಧಿಯಾಗುತ್ತದೆ. ಕೆರೆಯಲ್ಲಿ ನೀರು ಇದ್ದರೆ ರೈತರಿಗೆ ಅನುಕೂಲವಾಗುತ್ತದೆ. ಅಳಿವಿನಂಚಿಗೆ ಸಾಗಿರುವ ಕೃಷಿ ಮತ್ತು ಪರಿಸರವನ್ನು ಉಳಿಸಲು ಸಾಧ್ಯವಿದೆ. ಈ ಅಭಿಯಾನವನ್ನು ಜನರು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ನಟಿ, ನಿರ್ದೇಶಕಿ ರೂಪಾ ಅಯ್ಯರ್‌ ಮಾತನಾಡಿ, ‘ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ನೀರು ಒದಗಿಸುವ ಶಾಂತಿಸಾಗರ ಕೆರೆಯನ್ನು ಜೀರ್ಣೋದ್ಧಾರ ಮಾಡುವ ಅಗತ್ಯವಿದೆ. ಕೆರೆ, ಕಾಲುವೆಗಳ ಸಂರಕ್ಷಣೆಗೆ ನೇತೃತ್ವ ವಹಿಸುವಂತೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ವಿನಂತಿಸಿಕೊಂಡಿದ್ದೇವೆ’ ಎಂದು ಹೇಳಿದರು.

*
ಶಾಂತಿಸಾಗರ ಸಂರಕ್ಷಣೆಗೆ ಮುಂದಾಗಿದ್ದು ಸ್ವಾಗತಾರ್ಹ. ಇದರಲ್ಲಿ ಯಾವುದೇ ರಾಜಕೀಯ ಬೆರೆಸಬಾರದು. ಅಭಿಯಾನ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ನಡೆಯಲಿ
–ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ತರಳಬಾಳು ಮಠ, ಸಿರಿಗೆರೆ

*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT