ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲೇ ಏರ್ ಷೋ ನಡೆಯಲು ಕಾರಣವುಂಟು!

ಏರೋ ಷೋ , ಹಾರೋ ಷೋ
Last Updated 21 ಫೆಬ್ರುವರಿ 2019, 8:51 IST
ಅಕ್ಷರ ಗಾತ್ರ

ಸರಿ ಸುಮಾರು ವರ್ಷದ ಹಿಂದೆ, ‘ವದಂತಿ’ಯೊಂದು ರಾಜ್ಯದಲ್ಲಿ ಹಬ್ಬಿತ್ತು. ಆ ವದಂತಿ ಕಿವಿಗೆ ಬಿದ್ದೊಡನೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಕಾರ್ಯಕರ್ತರು ರಸ್ತೆಗಳಿದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದರು. ರಾಜ್ಯದ ರಾಜಕಾರಣಿಗಳು ಸಹ ಕೇಂದ್ರದ ವಿರುದ್ಧ ಕಿಡಿಕಾರಿದ್ದರು.

ಎರಡು ದಶಕಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ದಕ್ಷಿಣ ಏಷ್ಯಾದ ಅತಿದೊಡ್ಡ ಏರೋ ಇಂಡಿಯಾ (ಏರ್ ಷೋ – ವೈಮಾನಿಕ ಪ್ರದರ್ಶನ) ಪ್ರದರ್ಶನದ 12ನೇ ಆವೃತ್ತಿಯು ಉತ್ತರಪ್ರದೇಶದ ಲಖನೌಗೆ ಸ್ಥಳಾಂತರಗೊಳ್ಳಲಿದೆ ಎಂಬುದು ಆ ವದಂತಿ ಆಗಿತ್ತು. ಮೂಲಗಳ ಪ್ರಕಾರ ಅದು ಕೇವಲ ವದಂತಿಯಷ್ಟೇ ಆಗಿರಲಿಲ್ಲ. ಸತ್ಯವೂ ಆಗಿತ್ತು. ಲಖನೌಗೆ ಏರ್ ಷೋ ಸ್ಥಳಾಂತರಕ್ಕೆ ರಕ್ಷಣಾ ಇಲಾಖೆ ಮುಂದಾಗಿತ್ತು. ಅದಕ್ಕಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯತ್ನ ನಡೆಸಿದ್ದರು ಎನ್ನುವ ಮತ್ತೊಂದು ವದಂತಿಯೂ ಹರಡಿತ್ತು ಆಗ.

ಏರ್ ಷೋ ಸ್ಥಳಾಂತರ ವದಂತಿಗೆ ರಾಜ್ಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್, ‘ಪ್ರದರ್ಶನದ ಸ್ಥಳಾಂತರದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಲಖನೌಗೆ ಸ್ಥಳಾಂತರವಾಗುತ್ತಿದೆ ಎಂಬುದು ವದಂತಿಯಷ್ಟೇ’ ಎಂದು ಸ್ಪಷ್ಟೀಕರಣ ನೀಡಿದ್ದರು. ಅಲ್ಲಿಗೆ ಪ್ರತಿಭಟನಾಕಾರರು ಕೊಂಚ ನಿರಾಳರಾಗಿದ್ದರು. ಈಚೆಗಷ್ಟೇ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲೇ ಏರ್ ಷೋ ನಡೆಸಲಾಗುತ್ತದೆ ಎಂಬುದನ್ನು ಇಲಾಖೆಯು ಅಧಿಕೃತವಾಗಿ ಪ್ರಕಟಿಸಿದ ಬಳಿಕ ಲಕ್ಷಾಂತರ ಏರ್ ಷೋ ಪ್ರಿಯರು ಸಂತಸಗೊಂಡಿದ್ದರು.

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ 12ನೇ ಆವೃತ್ತಿಯ ‘ಏರೋ ಇಂಡಿಯಾ–2019’ ನಡೆಯಲಿದೆ. ಫೆಬ್ರುವರಿ 20ರಿಂದ ಶುರುವಾಗಲಿರುವ ಈ ಪ್ರದರ್ಶನ 24ರವರೆಗೆ ನಡೆಯಲಿದೆ. ದೇಶ ವಿದೇಶಗಳ ಲೋಹದ ಹಕ್ಕಿಗಳ ಬಾನೆತ್ತರದ ಹಾರಾಟವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಕಾತುರದಿಂದ ಕಾಯುತ್ತಿದ್ದಾರೆ. ಅಂತೆಯೇ ದೇಶ–ವಿದೇಶಗಳ ಅತ್ಯಾಧುನಿಕ ವಿಮಾನಗಳ ಹಾಗೂ ಅವುಗಳ ಯಂತ್ರೋಪಕರಣಗಳ ಪ್ರದರ್ಶನ ನಡೆಯಲಿದೆ. ಜಾಗತಿಕ ಮಟ್ಟದ ವಿಚಾರ ಸಂಕಿರಣಗಳೂ ನಡೆಯಲಿವೆ.

ಬೆಂಗಳೂರಿನಲ್ಲೇ ಏಕೆ ಪ್ರದರ್ಶನ?

1996ರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಏರೋ ಇಂಡಿಯಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಒಟ್ಟು 11 ಪ್ರದರ್ಶನಗಳು ಜರುಗಿದ್ದು, ಅವೆಲ್ಲವೂ ಬೆಂಗಳೂರಿನಲ್ಲಿಯೇ ಆಯೋಜನೆಗೊಂಡಿವೆ ಎಂಬುದು ವಿಶೇಷ. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿಯೇ ಏಕೆ ಪ್ರದರ್ಶನ ಆಯೋಜಿಸಲಾಗುತ್ತಿದೆ ಎಂಬ ಪ್ರಶ್ನೆ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರವೂ ಇಲ್ಲಿದೆ.

ಪ್ರಸ್ತುತ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಹೇಗೆ ಗುರುತಿಸಿಕೊಂಡಿದೆಯೇ ಅದೇ ರೀತಿ 1990ರ ಆಸುಪಾಸಿನಲ್ಲಿ ಏರೋಸ್ಪೇಸ್ ಕ್ಷೇತ್ರದಲ್ಲೂ ವರ್ಚಸ್ಸು ಪಡೆದಿತ್ತು. ‘ಇಂಡಿಯನ್ ಏರೋಸ್ಪೇಸ್ ಇಂಡಸ್ಟ್ರಿ’ಯ ತಾಣವಾಗಿ ಖ್ಯಾತಿ ಪಡೆದಿತ್ತು. 1993ರಲ್ಲಿ ಯಲಹಂಕದ ವಾಯುನೆಲೆಯಲ್ಲೇ ಮೊದಲ ಬಾರಿಗೆ ಖಾಸಗಿಯಾಗಿ ಏರ್ ಷೋ ಆಯೋಜಿಸಲಾಗಿತ್ತು. ಅದು ಸಾಕಷ್ಟು ಸುದ್ದಿಯನ್ನೂ ಮಾಡಿತ್ತು, ರಕ್ಷಣಾ ಇಲಾಖೆಯ ಗಮನವನ್ನೂ ಸೆಳೆಯಿತು. ಇದರ ಪರಿಣಾಮವಾಗಿ, 1996ರಲ್ಲಿ ರಕ್ಷಣಾ ಇಲಾಖೆ ‘ಏರೋ ಇಂಡಿಯಾ’ ಹೆಸರಿನಲ್ಲಿಯೇ ಪ್ರದರ್ಶನ ಹಮ್ಮಿಕೊಂಡಿತು. ಅಲ್ಲಿಂದ ಇಲ್ಲಿಯವರೆಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಏರ್ ಷೋ ಹಮ್ಮಿಕೊಳ್ಳಲಾಗುತ್ತಿದೆ. ಈ ಪ್ರದರ್ಶನ – ದುಬೈ, ಫರ್ನ್‌ಬಾರೋ ಹಾಗೂ ಪ್ಯಾರೀಸ್‌ನ ಏರ್ ಷೋಗಳಿಗಿಂತ ಹೆಚ್ಚು ಪ್ರಸಿದ್ಧಿ ಪಡೆದಿದೆ.

1996ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತಿರುವ ಈ ಏರ್ ಷೋ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಬೆಂಗಳೂರಿನ ವಿಶೇಷಗಳಲ್ಲಿ ವೈಮಾನಿಕ ಪ್ರದರ್ಶನವೂ ಒಂದಾಗಿದೆ. ಹೀಗಾಗಿಯೇ, ಏರ್ ಷೋ ಸ್ಥಳಾಂತರವಾಗುತ್ತದೆ ಎಂಬ ವದಂತಿ ಕೇಳಿದ್ದಕ್ಕೆ ಕನ್ನಡಿಗರು ಗರಂ ಆಗಿದ್ದು.

1911ರಲ್ಲೇ ನಡೆದಿತ್ತು ಏರ್ ಷೋ!

ಬಹುತೇಕರಿಗೆ, 1996ರಲ್ಲಿ ಬೆಂಗಳೂರಿನಲ್ಲಿ ಶುರುವಾದ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವು ಎರಡು ವರ್ಷಕ್ಕೊಮ್ಮೆ ಮಾತ್ರ ನಡೆಯುತ್ತದೆ ಎಂಬುದಷ್ಟೇ ತಿಳಿದಿದೆ. ಆದರೆ, ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ 108 ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ವೈಮಾನಿಕ ಪ್ರದರ್ಶನ ಶುರುವಾಗಿತ್ತು ಎನ್ನುವುದು ತಿಳಿಯುತ್ತದೆ.

ಇತಿಹಾಸದ ಪ್ರಕಾರ ಬೆಂಗಳೂರಿನ ಮಟ್ಟಿಗೆ ವೈಮಾನಿಕ ಪ್ರದರ್ಶನ ತೀರಾ ಹೊಸತೇನೂ ಅಲ್ಲ. 1911ರಲ್ಲೇ ನಗರವು ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾಗಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಈಗಿನ ಚಿನ್ನಸ್ವಾಮಿ ಕ್ರೀಡಾಂಗಣವಿರುವ ಜಾಗದಲ್ಲೇ 1911ರ ಫೆ.3 ರಂದು (ಬೆಂಗಳೂರಿಗೆ ವಿಮಾನ ಮೊದಲ ಬಾರಿಗೆ ಬಂದದ್ದು ಆಗಲೇ) ವಿಮಾನ ಹಾರಾಟ ಪ್ರದರ್ಶನ ಆಯೋಜಿಸಲಾಗಿತ್ತು!

ಬ್ರಿಟಿಷ್ ಸೇನೆಯ ಅಧೀನದಲ್ಲಿದ್ದ ಆಗಿನ ಬೀಡು ಪ್ರದೇಶದಲ್ಲಿ (ಇಂದಿನ ಚಿನ್ನಸ್ವಾಮಿ ಕ್ರೀಡಾಂಗಣ) ಜೂಲ್‌ ವಿಕ್‌ ಮತ್ತು ಬ್ಯಾರೋನ್‌ ಪೀರ್ರೆ ಡಿ ಕೇಟರ್ಸ್‌ ಎಂಬ ವಿದೇಶಿ ಪೈಲಟ್‌ಗಳಿಬ್ಬರು ಮೊದಲ ಬಾರಿಗೆ ಬೆಂಗಳೂರಿಗೆ ವಿಮಾನ ತಂದು ವೈಮಾನಿಕ ಪ್ರದರ್ಶನ ನಡೆಸಿದ್ದರು. ಆ ಸುದ್ದಿ ಆಗಿನ ಕಾಲಕ್ಕೇ ಕಾಳ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿ ಬೆಂಗಳೂರು ಸೇರಿದಂತೆ ಅದರ ಆಸುಪಾಸಿನ ಪ್ರದೇಶದ ಜನರು ವಿಮಾನ ನೋಡಲು ಬಂದಿದ್ದರಂತೆ.

ಬೆಂಗಳೂರಿಗಿಂತ ಮುಂಚೆಯೇ ಬ್ರಿಟಿಷರು ಕೋಲ್ಕತ್ತದಲ್ಲಿ ಏರ್ ಷೋ ನಡೆಸಿದ್ದರು. ಲಕ್ಷಾಂತರ ಮಂದಿ ಜನ ಸೇರಿದ್ದರಿಂದ ಅವರನ್ನು ನಿಭಾಯಿಸಲು ಸಾಧ್ಯವಾಗದೇ ಪ್ರದರ್ಶನಕ್ಕೆ ತೊಂದರೆಯಾಗಿತ್ತು. ಕೋಲ್ಕತ್ತದಲ್ಲಿ ಎದುರಾದ ತೊಂದರೆಗಳು ಬೆಂಗಳೂರಿನಲ್ಲಿಯೂ ಮರುಕಳಿಸಬಹುದೆಂಬ ಮುಂದಾಲೋಚನೆಯಿಂದ ಪ್ರದರ್ಶನಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರದರ್ಶನ ಏರ್ಪಡಿಸಿದ್ದ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಸೌತ್ ಪರೇಡ್ ರಸ್ತೆ (ಈಗಿನ ಎಂ.ಜಿ.ರಸ್ತೆ), ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಹಾಗೂ ದಂಡು ಪ್ರದೇಶದೆಲ್ಲೆಡೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹೀಗಾಗಿ, ಇಲ್ಲಿ ಆಯೋಜಿಸಿದ್ದ ವೈಮಾನಿಕ ಪ್ರದರ್ಶನವು ಸುಗಮವಾಗಿ ಸಾಗಿತು ಎಂಬುದು ಇತಿಹಾಸಕಾರರ ಮಾತು.

ಬೈದವಾಡಿಯ (ಈಗಿನ ಶಿವಾಜಿನಗರ) ಹಾಗೂ ನಗರದ ಇತರ ಪ್ರದೇಶಗಳ ಕೆಲ ವ್ಯಾಪಾರಿಗಳು ವಿಮಾನ ಪ್ರದರ್ಶನ ಕುರಿತು ಪ್ರಕಟಣೆಯನ್ನು ಉರ್ದು ಭಾಷೆಯಲ್ಲಿ ಹೊರಡಿಸಿದ್ದರು. ‘ಮಧ್ಯಾಹ್ನ 3.30ರಿಂದ 4.30ರವರೆಗೆ 30 ಮೀಟರ್‌ ಎತ್ತರದಲ್ಲಿ ವಿಮಾನ ಹಾರಾಡಲಿದೆ. 4.30ರ ಬಳಿಕ ಕೆಲವೇ ನಿಮಿಷ ಸ್ವಲ್ಪ ಎತ್ತರದಲ್ಲಿ ಹಾರಾಡಲಿದೆ’ ಎಂಬ ಮಾಹಿತಿಗಳ ಉಲ್ಲೇಖವಿದೆ. ಪೋಸ್ಟರ್‌ನಲ್ಲಿ ಹಲವು ವ್ಯಾಪಾರಿಗಳ ಸಹಿಯೂ ಇದೆ.

25 ಪೈಸೆ ಪ್ರವೇಶ ಶುಲ್ಕ!

ವೈಮಾನಿಕ ಪ್ರದರ್ಶನವನ್ನು ದುಡ್ಡು ಕೊಟ್ಟು ಏಕೆ ನೋಡಬೇಕು? ಪ್ರದರ್ಶನ ನಡೆಯುವ ಆಜುಬಾಜಿನ ಪ್ರದೇಶದ ಕಟ್ಟಡಗಳ ಮೇಲೆ, ರಸ್ತೆ ಬದಿ ಹಾಗೂ ಖಾಲಿ ಜಾಗದಲ್ಲಿ ನಿಂತು ಕತ್ತು ಎತ್ತಿದರೆ ವಿಮಾನಗಳು ಕಾಣಿಸುತ್ತವೆ; ಅದಕ್ಕೆ ಏಕೆ ದುಡ್ಡು ಕೊಡಬೇಕು ಎನ್ನುವವರೂ ಇದ್ದಾರೆ. ಆದರೆ, 1911ರಲ್ಲಿ ವೈಮಾನಿಕ ಪ್ರದರ್ಶನ ನಡೆಯುವ ಜಾಗದ ಆಸುಪಾಸು ಟಿಕೆಟ್ ರಹಿತವಾಗಿ ಜನರು ಸುಳಿಯಲು ಅವಕಾಶವೇ ಇರಲಿಲ್ಲ. ಅಷ್ಟೊಂದು ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಪ್ರದರ್ಶನ ನೋಡಲು ಬರುವವರಿಗೆ ತಲಾ 25 ಪೈಸೆ ನಿಗದಿ ಪಡಿಸಿ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತಂತೆ ! ಈಗ, ನಡೆಯುವ ವೈಮಾನಿಕ ಪ್ರದರ್ಶನದ ಟಿಕೆಟ್ ದರ
₹ 1,800 ಗಡಿ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT