ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಸೇವನೆ, ಹೆಣ್ಣಿನ ವಿಚಾರ ಸಾವಿಗೆ ಕಾರಣ ಇರಬಹುದು!

ಶಿರೂರು ಶ್ರೀಗಳ ಸಾವಿನ ಕುರಿತು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿಕೆ
Last Updated 20 ಜುಲೈ 2018, 18:50 IST
ಅಕ್ಷರ ಗಾತ್ರ

ಉಡುಪಿ:ಶಿರೂರು ಮಠದ ಲಕ್ಷ್ಮೀವರ ಸ್ವಾಮೀಜಿ ಅತಿಯಾದ ಮದ್ಯ ಸೇವಿಸಿ ಮೃತಪಟ್ಟಿರಬಹುದು ಅಥವಾ ಅವರ ಜತೆಗಿದ್ದ ಇಬ್ಬರು ಮಹಿಳೆಯರ ನಡುವಿನ ಜಗಳದಿಂದಲೂ ಸಾವನ್ನಪ್ಪಿರಬಹುದು ಎಂಬ ಊಹಾಪೋಹಗಳಿವೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

‘ಶಿರೂರು ಶ್ರೀಗಳ ಸಾವಿನಲ್ಲಿ ಸಂಶಯ ಪಡಲು ಅವಕಾಶವಿದೆ; ಆದರೆ, ಅಷ್ಠಮಠಗಳ ಕಡೆಯಿಂದ ತಪ್ಪು ನಡೆದಿದೆ ಎನ್ನುವುದು ಸರಿಯಲ್ಲ. ಮಠಾಧೀಶರ ಕಡೆಯಿಂದ ತಪ್ಪು ನಡೆದಿಲ್ಲ. ಶಿರೂರು ಮಠಕ್ಕೆ ಆಹಾರ ಪೂರೈಸುವ ಪದ್ಧತಿಯೂ ಇಲ್ಲ. ನಮಗೆ ಅವರ ಮೇಲೆ ಯಾವ ದ್ವೇಷ ಇರಲಿಲ್ಲ’ ಎಂದು ಶುಕ್ರವಾರ ಪೇಜಾವರ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಸ್ಪಷ್ಟಪಡಿಸಿದರು.

‘ಶಿರೂರು ಶ್ರೀಗಳು ಅತಿಯಾದ ಮದ್ಯ ಸೇವಿಸುತ್ತಿದ್ದರು. ಜತೆಗೆ, ಕಿಡ್ನಿ ಹಾಗೂ ಲಿವರ್‌ ಸಮಸ್ಯೆ ಇದೆ ಎಂದು ಕೆಲವರು ಹೇಳಿದ್ದನ್ನು ಕೇಳಿದ್ದೇನೆ. ಸಾವಿಗೆ ಅತಿಯಾದ ಮದ್ಯಪಾನವೊ, ವಿಷಪ್ರಾಶನವೊ, ಮಹಿಳೆಯರ ನಡುವಿನ ಜಗಳವೊ ಕಾರಣವಿರಬಹುದು. ಈ ವಿಚಾರ ತನಿಖೆಯಿಂದಷ್ಟೆ ಬೆಳಕಿಗೆ ಬರಬೇಕು’ ಎಂದರು.

ಶಿರೂರು ಶ್ರೀಗಳು ಆನಾರೋಗ್ಯಕ್ಕೀಡಾದ ಅವರ ಸಹೋದರ ಲಾತವ್ಯ ಆಚಾರ್ಯ ಅವರಿಗೆ ಕರೆ ಮಾಡಿದ್ದೆ. ‘ಕಲಾಯಿ ಹಾಕದ ಪಾತ್ರೆಯಲ್ಲಿ ಫಲಾಹಾರ ಸೇವಿಸಿದ್ದರಿಂದ ಅನಾರೋಗ್ಯ ಸಮಸ್ಯೆಯಾಗಿದೆ. ನಾಳೆಯೊಳಗೆ ಚೇತರಿಸಿಕೊಳ್ಳಲಿದ್ದಾರೆ ಎಂದಿದ್ದರು. ಅಷ್ಟರೊಳಗೆ ವಿಷಪ್ರಾಷನದಿಂದ ಸ್ವಾಮೀಜಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಬಂತು. ಅವರ ಸಾವಿಗೆ ಆಹಾರ ದೋಷ ಕಾರಣವೊ ಅಥವಾ ಬೇಕಂತಲೇ ವಿಷ ಹಾಕಿದರೊ ಎಂಬ ಸತ್ಯ ಬಹಿರಂಗವಾಗಬೇಕು ಎಂದರು.

‘ಶಿರೂರು ಶ್ರೀಗಳ ಮೇಲೆ ಹಿಂದೆ ವಿಶೇಷವಾದ ಪ್ರೀತಿ ಇತ್ತು. ಅವರಿಗೆ ಕಷ್ಟಬಂದಾಗ ಹಲವು ಬಾರಿ ಸಹಾಯಕ್ಕೆ ನಿಂತಿದ್ದೇನೆ. ಆದರೆ, ಅವರು ಸನ್ಯಾಸತ್ವವನ್ನು ಉಲ್ಲಂಘಿಸಿದ ಕಾರಣಕ್ಕೆ ಪರ್ಯಾಯದ ಅವಧಿಯಲ್ಲಿ ಕೃಷ್ಣನ ಪೂಜೆ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಈ ಕಾರಣಕ್ಕೆ ನನ್ನ ಮೇಲೆ ಮುನಿಸಿಕೊಂಡಿದ್ದರು’ ಎಂದರು.‌

‘ಸನ್ಯಾಸ ಮುರಿದಿದ್ದ ಶಿರೂರು ಶ್ರೀ’

‘ಹಿಂದೆ, ವಿಶ್ವವಿಜಯ ಶ್ರೀಗಳ ಜತೆಗಿನ ದೂರವಾಣಿ ಸಂಭಾಷಣೆಯಲ್ಲಿ ಮಕ್ಕಳಿರುವುದಾಗಿ ಸ್ವತಃ ಶಿರೂರು ಶ್ರೀಗಳೇ ಒಪ್ಪಿಕೊಂಡಿದ್ದರು. ಈ ಬೆಳವಣಿಗೆಯ ನಂತರ ಕೃಷ್ಣಮಠದ ಮಠಾಧೀಶರ ಗೌರವಕ್ಕೆ ಕುಂದುಂಟಾಗಿತ್ತು. ಹಾಗಾಗಿ, ಮಠಾಧೀಶರೆಲ್ಲ ಸಭೆ ಸೇರಿ ಶಿರೂರು ಶ್ರೀಗಳಿಗೆ ದೇವರ ಪೂಜೆಗೆ ಅವಕಾಶ ನೀಡಬಾರದು, ಪಟ್ಟದ ದೇವರನ್ನು ಮರಳಿಸಬಾರದು ಎಂದು ನಿರ್ಧರಿಸಿದರು. ಮಠಾಧೀಶರ ನಿರ್ಧಾರಕ್ಕೆ ನಾನೂ ಸಮ್ಮತಿ ಸೂಚಿಸಿದೆ’ ಎಂದು ಪೇಜಾವರ ಶ್ರೀ ತಿಳಿಸಿದರು.

ಶೃಂಗೇರಿ ಮಠದಲ್ಲಿ ಹಿಂದೆ ನಡೆದ ಸಭೆಯಲ್ಲಿ ಸನ್ಯಾಸತ್ವ ಉಲ್ಲಂಘಿಸಿದರೆ, ಸ್ವಾಮೀಜಿಯಾಗಲು ಅರ್ಹರಲ್ಲ ಎಂಬ ನಿರ್ಧಾರ ಮಾಡಲಾಗಿತ್ತು. ಅದರಂತೆ, ಸನ್ಯಾಸತ್ವ ಮುರಿದ ಶಿರೂರು ಶ್ರೀಗಳ ವಿರುದ್ಧ ಗಟ್ಟಿನಿಲವು ತೆಗೆದುಕೊಳ್ಳಬೇಕಾಯಿತು. ಪಟ್ಟದ ದೇವರು ಇರುವ ಪೆಟ್ಟಿಗೆಯನ್ನು ಮುಂದಿನ ಶಿರೂರು ಮಠದ ಉತ್ತರಾಧಿಕಾರಿಗೆ ಮಾತ್ರ ನೀಡಲು ತೀರ್ಮಾನಿಸಲಾಗಿತ್ತು ಎಂದು ಪಟ್ಟದ ದೇವರ ಹಸ್ತಾಂತರ ವಿವಾದದ ಬಗ್ಗೆ ಶ್ರೀಗಳು ಸ್ಪಷ್ಟನೆ ನೀಡಿದರು.

ಮಠಾಧೀಶರು ಚಿಕ್ಕಪುಟ್ಟ ತಪ್ಪುಗಳು ಮಾಡಿದರೆ ಸಹಿಸಬಹುದು. ಆದರೆ, ಪ್ರಧಾನ ತಪ್ಪುಗಳನ್ನು ಮಾಡಬಾರದು. ಸನ್ಯಾಸತ್ವಕ್ಕೆ ವಿರುದ್ಧವಾಗಿ ಕುಟುಂಬ ಇಟ್ಟುಕೊಂಡರೆ, ಮದ್ಯಪಾನ ಮಾಡಿ ದೇವರ ಪೂಜೆ ಮಾಡಿದರೆ ಅಂಥವರನ್ನು ಸ್ವಾಮೀಜಿ ಎಂದು ಒಪ್ಪಿಕೊಳ್ಳುವುದು ಹೇಗೆ ಎಂದು ಪೇಜಾವರ ಶ್ರೀಗಳು ಪ್ರಶ್ನಿಸಿದರು.

**
‘ಅಷ್ಟಮಠದ ಸ್ವಾಮೀಜಿಯೇ ಅಲ್ಲ’
ಶಿರೂರು ಶ್ರೀಗಳು ಬದುಕಿದ್ದಾಗಲೇ ಅವರನ್ನು ಅಷ್ಠಮಠಗಳ ಸ್ವಾಮೀಜಿ ಅಲ್ಲ ಎಂದು ನಿರ್ಧರಿಸಲಾಗಿತ್ತು. ಸ್ವಾಮೀಜಿಗಳಲ್ಲದವರು ಮೃತಪಟ್ಟಾಗ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬಾರದು ಎಂಬ ನಿಯಮ ಇರುವುದರಿಂದ, ಇತರ ಮಠಾಧೀಶರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಂಕೋಚಪಟ್ಟರು. ಆದರೂ ಸಂಪ್ರದಾಯಕ್ಕೆ ಭಂಗ ಬರಬಾರದು ಎಂಬ ಕಾರಣಕ್ಕೆ ಪಾರ್ಥಿವ ಶರೀರ ಮಠದ ಆವರಣವನ್ನು ಪ್ರವೇಶಿಸಿದಾಗ ಪಲಿಮಾರು ಶ್ರೀಗಳು ಆರತಿ ಮಾಡಿದರು. ಅದಮಾರು, ಸೋದೆ, ಕಾಣಿಯೂರು ಸ್ವಾಮೀಜಿಗಳು ಹೂಳುವ ಜಾಗಕ್ಕೆ ಹೋದರು ಎಂದು ಪೇಜಾವರ ಶ್ರೀಗಳು ಹೇಳಿದರು. ‘ಹುಬ್ಬಳ್ಳಿಯಿಂದ ಉಡುಪಿಗೆ ಬರುವುದು ತಡವಾಗುತ್ತದೆ ಎಂಬ ಕಾರಣಕ್ಕೆ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಈ ವಿಚಾರದಲ್ಲಿ ಮಾಧ್ಯಮಗಳು ಮೂಗಿನ ನೇರಕ್ಕೆ ವರದಿ ಮಾಡಿವೆ’ ಎಂದು ಆರೋಪಿಸಿದರು.
**
ಶೀಘ್ರವೇ ಉತ್ತರಾಧಿಕಾರಿ ನೇಮಕ
ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಸುಲಭವಲ್ಲ. ಸ್ವಾಮೀಜಿ ಆಯ್ಕೆ ಮಾಡಲು ಸರಿಯಾದ ವ್ಯಕ್ತಿ ಸಿಗಬೇಕು. ಅವರ ತಂದೆ ತಾಯಿಗಳು ಒಪ್ಪಬೇಕು. ಸ್ವಾಮೀಜಿಯಾಗಲು ಹುಡುಗ ಒಪ್ಪಬೇಕು. ಮುಖ್ಯವಾಗಿ ಮಠಾಧಿಪತಿ ಆಗಬೇಕಾದಾರೆ ಸಂಸ್ಕೃತ ಜ್ಞಾನ ಇರಬೇಕು. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಶೀಘ್ರವೇ ಶಿರೂರು ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ಪೇಜಾವರ ಶ್ರೀಗಳು ತಿಳಿಸಿದರು.

****
ಶಿರೂರು ಶ್ರೀಗಳ ಆಡಿಯೊ ವೈರಲ್‌
ಉಡುಪಿ:ಶಿರೂರು ಲಕ್ಷ್ಮೀವರ ತೀರ್ಥರು ಆಪ್ತರ ಜತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸ್ವಾಮೀಜಿಗಳು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಶಿರೂರು ಶ್ರೀಗಳು ಆಡಿಯೊದಲ್ಲಿ ಹೇಳಿದ್ದಾರೆ.

‘ಅಜ್ಜರು ಒಂದು ಕೋಟಿ ಕೊಡುವಂತೆ ಡಿಮಾಂಡ್ ಇಟ್ಟಿದ್ದಾರೆ. ₹ 50 ಲಕ್ಷಪಲಿಮಾರು ಶ್ರೀಗಳಿಗೆ ಕೊಡಬೇಕಂತೆ, ₹ 50 ಲಕ್ಷ ಸೋದೆ ಮಠದ ಶ್ರೀಗಳಿಗೆ ಕೊಡಬೇಕಂತೆ’ ಎಂದು ತುಳುವಿನಲ್ಲಿ ವ್ಯಕ್ತಿಯೊಬ್ಬರ ಜತೆ ಶಿರೂರು ಶ್ರೀಗಳು ಸಂಭಾಷಣೆ ನಡೆಸಿರುವುದು ಆಡಿಯೊದಲ್ಲಿದೆ.

ಆಡಿಯೊದ ಸತ್ಯಾಸತ್ಯತೆ ಬಹಿರಂಗವಾಗಿಲ್ಲ. ಆದರೆ, ಸಾಮಾಜಿಕ ಜಾಲತಾಣದಲ್ಲಿಹರಿಬಿಡಲಾಗಿದ್ದು, ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT