ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಸ್‌ವೈ ವಿರುದ್ಧವೂ ನಡೆದಿತ್ತು ತನಿಖೆ

ಲಂಚ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿದ್ದ ಅಂದಿನ ರಾಜ್ಯಪಾಲ
Published : 18 ಆಗಸ್ಟ್ 2024, 0:00 IST
Last Updated : 18 ಆಗಸ್ಟ್ 2024, 0:00 IST
ಫಾಲೋ ಮಾಡಿ
Comments

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಂದಿನ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಅನುಮತಿ ನೀಡಿದ್ದರು.

2011ರಲ್ಲಿ ನಡೆದ ಈ ಪ್ರಕರಣ ಬಿಟ್ಟರೆ, ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಿರುವುದು ರಾಜ್ಯದಲ್ಲಿ ಎರಡನೇ ಪ್ರಕರಣವಾಗಿದೆ. ರಾಜ್ಯಪಾಲರ ನಡೆಯನ್ನು ಸ್ವಾಗತಿಸಿದ್ದ ಅಂದಿನ ವಿರೋಧ ಪಕ್ಷ ಕಾಂಗ್ರೆಸ್‌, ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿತ್ತು. ರಾಜ್ಯಪಾಲರ ನಡೆ ಸಂವಿಧಾನ ಬಾಹಿರ ಎಂದು ಖಂಡಿಸಿದ್ದ ಆಡಳಿತಾರೂಢ ಬಿಜೆಪಿ ನಾಯಕರು ರಾಜ್ಯ ಬಂದ್‌ಗೆ ಕರೆ ಕೊಟ್ಟಿದ್ದರು. ಬಂದ್ ನೇತೃತ್ವವನ್ನು ಅಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಕೆ.ಎಸ್. ಈಶ್ವರಪ್ಪ ಅವರೇ ವಹಿಸಿಕೊಂಡಿದ್ದರು. 

ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು, ಎರಡು ಪ್ರಕರಣಗಳಲ್ಲಿ ಅಕ್ರಮವಾಗಿ ಭೂಮಿ ಡಿನೋಟಿಫೈ ಮಾಡಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ವಕೀಲರಾದ ಸಿರಾಜಿನ್‌ ಬಾಷಾ ಹಾಗೂ ಬಾಲರಾಜ್‌ ಅವರು ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ತಮ್ಮ ಕುಟುಂಬದ ಹೆಸರಿನಲ್ಲಿರುವ ಪ್ರೇರಣಾ ಟ್ರಸ್ಟ್‌ಗೆ ₹20 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪ ಯಡಿಯೂರಪ್ಪ ಮೇಲಿತ್ತು. 

ಈ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿರಲಿಲ್ಲ. ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು 2011ರ ಜುಲೈನಲ್ಲಿ ವರದಿ ನೀಡಿದ್ದರು. ವರದಿಯಲ್ಲಿ, ಯಡಿಯೂರಪ್ಪ ಅವರು ಅಕ್ರಮ ನಡೆಸಿರುವುದಕ್ಕೆ ಪುರಾವೆಯನ್ನು ಕೊಟ್ಟಿದ್ದರು. ಆ ಬೆನ್ನಲ್ಲೇ, ಅಂದಿನ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರ ರಾಜೀನಾಮೆ ಪಡೆದಿದ್ದರು. ವಿಚಾರಣೆ ಕೈಗೊಂಡಿದ್ದ ಲೋಕಾಯುಕ್ತ ಪೊಲೀಸರು, ಲೋಕಾಯುಕ್ತ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಪೊಲೀಸರ ಅರ್ಜಿ ಆಧರಿಸಿ, ಲೋಕಾಯುಕ್ತ ನ್ಯಾಯಾಲಯ ಬಂಧನದ ವಾರಂಟ್ ಹೊರಡಿಸಿತ್ತು. 2011ರ ಅಕ್ಟೋಬರ್ 11ರಂದು ಅವರನ್ನು ಬಂಧಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT