ಬೆಂಗಳೂರು: ಅಂಗನವಾಡಿ ವ್ಯವಸ್ಥೆಗೆ ಪರ್ಯಾಯವಾಗಿ ಶಿಶುಪಾಲನಾ ಕೇಂದ್ರಗಳನ್ನು ತೆರೆಯುವುದು ಬೇಡ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಆಗ್ರಹಿಸಿದೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರಿಗೆ ಗುರುವಾರ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ವತಿಯಿಂದ ವಿಜಯನಗರ ಜಿಲ್ಲೆಯಲ್ಲಿ 131 ಶಿಶುಪಾಲನಾ ಕೇಂದ್ರ ತೆರೆಯಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಳಗಳನ್ನೂ ಗುರುತಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಈ ಕಟ್ಟಡಗಳನ್ನು ಗುರುತಿಸಿಕೊಡಲಾಗಿದೆ. ಆದರೆ, ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಇವುಗಳಂತೆಯೇ ಕಾರ್ಯನಿರ್ವಹಿಸುವ ಶಿಶುಪಾಲನಾ ಕೇಂದ್ರಗಳನ್ನು ತೆರೆಯುವುದರಿಂದ ಉಪಯೋಗವಾಗುವುದಿಲ್ಲ ಎಂದು ಫೆಡರೇಷನ್ ಪದಾಧಿಕಾರಿಗಳು ಹೇಳಿದ್ದಾರೆ.
ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುವ ಅವಧಿಯಲ್ಲೇ ಶಿಶುಪಾಲನಾ ಕೇಂದ್ರಗಳು ತೆರೆದಿರುತ್ತವೆ. ಇದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಕಡಿಮೆಯಾಗಿ, ಶಿಶುಪಾಲನಾ ಕೇಂದ್ರಕ್ಕೆ ಹೋಗುತ್ತಾರೆ. ಪೋಷಕರ ಅನುಕೂಲಕ್ಕೆ ತಕ್ಕಂತೆ ಎರಡೂ ಕೇಂದ್ರಗಳಿಗೂ ಮಕ್ಕಳು ಹೋಗುತ್ತಾರೆ. ಅಂಗನವಾಡಿಗೆ ಪರ್ಯಾಯವಾಗಿ ಬೇರೆ ಇಲಾಖೆಗಳು ಶಿಶುಪಾಲನಾ ಕೇಂದ್ರಗಳನ್ನು ತೆರೆದರೆ ಅನುದಾನ ವ್ಯರ್ಥವಾಗುತ್ತದೆ. ಅದರ ಬದಲು, ಅಂಗನವಾಡಿಗಳ ಬಲವರ್ಧನೆಗೆ ಅನುದಾನ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
‘ಇತರೆ ಇಲಾಖೆಗಳು ಶಿಶುಪಾಲನಾ ಕೇಂದ್ರಗಳನ್ನು ಹೊಸದಾಗಿ ತೆರೆಯುವ ಬದಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಆಟಿಕೆ, ಪುಸ್ತಕ, ಸೌಲಭ್ಯಗಳನ್ನು ನೀಡಬಹುದು. 6 ವರ್ಷದೊಳಗಿನ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಬಹುದು. ಈ ಬಗ್ಗೆ ಸರ್ಕಾರ ಮರುಚಿಂತನೆ ನಡೆಸಬೇಕು. ಕಾರ್ಯಕರ್ತೆಯರೊಂದಿಗೆ ಚರ್ಚೆ ನಡೆಸಿದರೆ ವಾಸ್ತವದ ಅರಿವಾಗುತ್ತದೆ’ ಎಂದು ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.