ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ‘ಗ್ಯಾರಂಟಿ’, ‘ಅನ್ನ ಭಾಗ್ಯ’ ಯೋಜನೆಯಡಿ ಹೆಚ್ಚುವರಿಯಾಗಿ ತಲಾ 5 ಕೆ.ಜಿ ಅಕ್ಕಿ ವಿತರಿಸುವ ಯೋಜನೆಗೆ ಅಕ್ಕಿ ಸಿಗದ ಕಾರಣ, ಕೆ.ಜಿಗೆ ₹34ರಂತೆ ₹170 ಅನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಗೆ (ಡಿಬಿಟಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಚಾಲನೆ ನೀಡಿದರು.
ಆಹಾರ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮೈಸೂರು ಮತ್ತು ಕೋಲಾರ ಜಿಲ್ಲೆಗಳ ಫಲಾನುಭವಿಗಳಿಗೆ ಮೊದಲಿಗೆ ಹಣ ವರ್ಗಾವಣೆ ಮಾಡಲಾಯಿತು. ಮಂಗಳವಾರದಿಂದ ಪ್ರತಿದಿನ ಹಂತ ಹಂತವಾಗಿ ಎಲ್ಲ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗಲಿದೆ.
ಈ ಯೋಜನೆಯಡಿ 44.80 ಲಕ್ಷ ಅಂತ್ಯೋದಯ (ಎಎವೈ) ಮತ್ತು 3.97 ಕೋಟಿ ಆದ್ಯತಾ (ಬಿಪಿಎಲ್) ಪಡಿತರಚೀಟಿದಾರರಿಗೆ ಪ್ರಯೋಜನ ಆಗಲಿದೆ. ಡಿಬಿಟಿ ಮೂಲಕ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನಗದು ವರ್ಗಾವಣೆ ಆಗಲಿದೆ. ಯೋಜನೆಯ ಅನುಷ್ಠಾನಕ್ಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ₹10 ಸಾವಿರ ಕೋಟಿ ನಿಗದಿಪಡಿಸಲಾಗಿದೆ. ಜುಲೈ ತಿಂಗಳ ನಗದು ಮೊತ್ತ ಇದೇ ತಿಂಗಳ ಒಳಗೆ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿ ಮುಖ್ಯಮಂತ್ರಿ, ‘ಅನ್ನಭಾಗ್ಯ ಯೋಜನೆ ಘೋಷಣೆಯಾದ ತಕ್ಷಣ ರಾಜ್ಯದ ಜನರಿಗೆ ಅಕ್ಕಿ ಕೊಡುವುದನ್ನು ಸ್ಥಗಿತ ಮಾಡಿದ ಕೇಂದ್ರ ಸರ್ಕಾರ, ಬಳಿಕ ಆ ಅಕ್ಕಿಯನ್ನು ಇ-ಹರಾಜು ಮೂಲಕ ಹರಾಜು ಹಾಕಲು ಮುಂದಾಯಿತು. ಆದರೆ, ಇ-ಹರಾಜು ಮೂಲಕ ಅಕ್ಕಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲವೆಂಬ ಮಾಹಿತಿಯಿದೆ. ಇದನ್ನು ನಾವು ಡರ್ಟಿ ಪಾಲಿಟಿಕ್ಸ್ ಎಂದು ಕರೆಯಬೇಕೋ ಬೇಡವೋ? ಇದು ದ್ವೇಷದ ರಾಜಕಾರಣ ಅಲ್ಲವೇ. ಬಡವರು- ಮಧ್ಯಮ ವರ್ಗದವರು ಎರಡು ಹೊತ್ತು ತಿಂದರೆ ಬಿಜೆಪಿಗೆ ಏನು ಹೊಟ್ಟೆಯುರಿ’ ಎಂದು ಪ್ರಶ್ನಿಸಿದರು.
ಯೋಜನೆಯ ಪ್ರಚಾರದ ವಿಡಿಯೊವನ್ನು ಮುಖ್ಯಮಂತ್ರಿ, ಲಾಂಛನವನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಹಿತಿ ಪತ್ರವನ್ನು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಬಿಡುಗಡೆ ಮಾಡಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಎಚ್.ಕೆ. ಪಾಟೀಲ ಇದ್ದರು.
ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಡದೆ ಬಡವರ ವಿರೋಧಿಯಾದ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ಅವರೇನು ಪುಕ್ಕಟ್ಟೆ ಕೊಡುತ್ತಿರಲಿಲ್ಲ. ನಮ್ಮಿಂದ ಕೆ.ಜಿಗೆ ₹ 34 ತೆಗೆದುಕೊಳ್ಳುತ್ತಿದ್ದರು.-ಸಿದ್ದರಾಮಯ್ಯ ಮುಖ್ಯಮಂತ್ರಿ
ಕೊಟ್ಟ ಮಾತಿನಂತೆ ಅನ್ನಭಾಗ್ಯ ಜಾರಿ ಮಾಡಿದ್ದೇವೆ. 10 ಕೆ.ಜಿ ಅಕ್ಕಿ ನೀಡುವವರೆಗೂ ಹೆಚ್ಚುವರಿ ಐದು ಕೆ.ಜಿ ಅಕ್ಕಿಯ ಹಣ ನೀಡಲು ತೀರ್ಮಾನಿಸಿದ್ದು ಪ್ರತಿನಿತ್ಯ ನಾಲ್ಕೈದು ಜಿಲ್ಲೆಯ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಲಿದೆ.- ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.