ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗ ಸಂಘದ ಭೂ ಕಬಳಿಕೆಗೆ ಡಿಕೆಶಿ, ಎಚ್‌ಡಿಕೆ ಕುಮ್ಮಕ್ಕು: ಅಪ್ಪಾಜಿಗೌಡ ಆರೋಪ

Last Updated 25 ಮಾರ್ಚ್ 2021, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ಒಕ್ಕಲಿಗ ಸಂಘದ 44 ಎಕರೆ 36 ಗುಂಟೆ ಜಮೀನು ಕಬಳಿಸಲು ಕೆಲ ವ್ಯಕ್ತಿಗಳು ಪ್ರಯತ್ನಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಭೂಗಳ್ಳರಿಗೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ರಾಜ್ಯ ಒಕ್ಕಲಿಗ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿ ಗೌಡ
ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘದ ಅಧ್ಯಕ್ಷನಾಗಿದ್ದ ನನ್ನನ್ನು ಮೂರು ಬಾರಿ ಮನೆಗೆ ಕರೆಸಿಕೊಂಡಿದ್ದಕುಮಾರಸ್ವಾಮಿ ಆ ಜಮೀನು ಬಿಟ್ಟುಕೊಡಿ ಎಂದು ಸೂಚಿಸಿದ್ದರು. ಅದಕ್ಕೆ ನಾನು ಒಪ್ಪಲಿಲ್ಲ. ಇದು ಹಳ್ಳಿಯ ಬಡಮಕ್ಕಳಿಗಾಗಿ ಮೀಸಲಿಟ್ಟಿರುವ ಜಮೀನು, ಇದನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದೆ. ನಮ್ಮ ಆಡಳಿತ ಮಂಡಳಿಯವರೂ ಇದಕ್ಕೆ ಒಪ್ಪುವುದಿಲ್ಲ ಎಂದಿದ್ದೆ. ಹಾಗೇನಾದರೂ ಮಾಡಿದರೆ ಸಮುದಾಯಕ್ಕೆ ದ್ರೋಹ ಬಗೆದಂತೆ ಎಂದು ಹೇಳಿದ್ದೆ’ ಎಂದರು.

‘ತಮ್ಮ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಕುಮಾರಸ್ವಾಮಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದರು. ಸಜ್ಜೆಪಾಳ್ಯದ ಜಮೀನು ಕಬಳಿಸಲು ಹುನ್ನಾರ ಮಾಡುತ್ತಿರುವವರ ಪೈಕಿ ಮರಿಯಪ್ಪನಪಾಳ್ಯದ ಶಿವಕುಮಾರ್‌ ಮುಂಚೂಣಿಯಲ್ಲಿದ್ದಾನೆ. ಆತ ನನ್ನ ವಿರುದ್ಧ ನಕಲಿ ವಿಡಿಯೊ ಮಾಡಿ ಮಾಧ್ಯಮದವರಿಗೆ ಬಿಡುಗಡೆ ಮಾಡಿದ್ದ. ಅದಾದ ನಂತರ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಯಿತು. ಅದಕ್ಕೆಲ್ಲ ಡಿ.ಕೆ.ಶಿವಕುಮಾರ್‌ ಹಾಗೂ ಕುಮಾರಸ್ವಾಮಿ ಕುಮ್ಮಕ್ಕು ನೀಡಿದ್ದರು’ ಎಂದು
ದೂರಿದರು.

‘ನನ್ನ ನಂತರ ಅಧ್ಯಕ್ಷರಾದ ಬೆಟ್ಟೇಗೌಡರು ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‌ಗೆ ಬಹಳ ಆಪ್ತರಾಗಿದ್ದವರು. ಹೀಗಿದ್ದರೂ ಕುಮಾರಸ್ವಾಮಿ ತಾವು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೇ ಸಂಘದ ಆಡಳಿತ ಮಂಡಳಿಯನ್ನು ವಿಸರ್ಜಿಸಿದ್ದರು. ಒಕ್ಕಲಿಗ ಸಮುದಾಯದ ನಾಯಕರಾಗಿದ್ದುಕೊಂಡು ಅವರು ಅಂತಹ ನಿರ್ಧಾರ ಕೈಗೊಂಡಿದ್ದು ಏಕೆ. ಅವರ ತೀರ್ಮಾನ ಎಷ್ಟು ಸಮಂಜಸ’ ಎಂದು ಪ್ರಶ್ನಿಸಿದರು.

‘ಭೂಗಳ್ಳರಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ಕುಮಾರಸ್ವಾಮಿ ಆ ನಿರ್ಧಾರ ಕೈಗೊಂಡಿದ್ದರು. ಬೆಟ್ಟೇಗೌಡರನ್ನು ಅಧ್ಯಕ್ಷರನ್ನಾಗಿ ಮಾಡಲು ಅವರು ನನ್ನ ಪರವಾಗಿದ್ದ ಎಂಟು ಸದಸ್ಯರಿಗೆ ತಲಾ ₹60 ಲಕ್ಷ ಹಣ ನೀಡಿದ್ದರು. ಇದರಲ್ಲಿ ₹30 ಲಕ್ಷ ಆರ್‌ಟಿಜಿಎಸ್‌ ಮಾಡಿದ್ದರೆ ಉಳಿದ ₹30 ಲಕ್ಷ ನಗದು ರೂಪದಲ್ಲಿ ನೀಡಿದ್ದರು. ಬೆಟ್ಟೇಗೌಡ ತಮ್ಮ ಅಧಿಕಾರಾವಧಿಯಲ್ಲಿ 1,300 ನೌಕರರನ್ನು ನೇಮಿಸಿದ್ದರು. ಪ್ರತಿಯೊಬ್ಬರಿಂದ ತಲಾ ₹5 ಲಕ್ಷ, ₹10 ಲಕ್ಷ ಲಂಚ ಪಡೆದಿದ್ದರು’ ಎಂದು
ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT