ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಐಆರ್ ರದ್ದುಕೋರಿ ಅಶ್ವತ್ಥ ನಾರಾಯಣ ಹೈಕೋರ್ಟ್‌ಗೆ ಅರ್ಜಿ

Published 29 ಮೇ 2023, 16:21 IST
Last Updated 29 ಮೇ 2023, 16:21 IST
ಅಕ್ಷರ ಗಾತ್ರ

ಬೆಂಗಳೂರು: ‘ಉರಿಗೌಡ-ನಂಜೇಗೌಡರು ಟಿಪ್ಪುವನ್ನು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನೂ ಮುಗಿಸಬೇಕು‘ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಬಿಜೆಪಿ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಅಶ್ವತ್ಥನಾರಾಯಣ ಪರ ಸೋಮವಾರ ಹಾಜರಾಗಿದ್ದ ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ್‌, ’ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು‘ ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇದೇ 30ರಂದು (ಮಂಗಳವಾರ) ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಿದೆ.

’ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಮೈಸೂರಿನ ದೇವರಾಜ ಠಾಣೆಯ ಪೊಲೀಸರು ಮೇ 24ರಂದು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು‘ ಎಂದು ಕೋರಲಾಗಿರುವ ಈ ರಿಟ್‌ ಅರ್ಜಿಯಲ್ಲಿ ದೇವರಾಜ ಠಾಣಾ ಪೊಲೀಸ್‌ ಮತ್ತು ದೂರುದಾರರೂ ಆದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿ ಇತ್ಯರ್ಥವಾಗುವರೆಗೆ ಎಫ್‌ಐಆರ್‌ಗೆ ತಡೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ. 

ಪ್ರಕರಣವೇನು?

ಮಂಡ್ಯದ ಸಾತನೂರಿನಲ್ಲಿ 2022ರ ಫೆಬ್ರುವರಿ 15ರಂದು ನಡೆದಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅಂದು ಸಚಿವರಾಗಿದ್ದ ಅಶ್ವತ್ಥನಾರಾಯಣ ಅವರು, ’ಟಿಪ್ಪುವನ್ನು ಉರಿಗೌಡ-ನಂಜೇಗೌಡರು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನೂ ಮುಗಿಸಬೇಕು‘ ಎಂಬ ಹೇಳಿಕೆ ನೀಡಿದ್ದರೆಂದು ದೂರಲಾಗಿತ್ತು. ಈ ಸಂಬಂಧ ಲಕ್ಷ್ಮಣ್ 2022ರ ಫೆಬ್ರುವರಿ 17ರಂದು ದೂರು ನೀಡಿದ್ದರು. ಈ ದೂರು ಆಧರಿಸಿ ಮೇ 24ರಂದು ಮೈಸೂರಿನ ದೇವರಾಜ ಠಾಣಾ ಪೊಲೀಸರು, ಕ್ರಿಮಿನಲ್ ಬೆದರಿಕೆ ಹಾಗೂ ಗಲಭೆಗೆ ಪ್ರಚೋದನೆ ನೀಡಿದ ಅಪರಾಧಗಳಡಿ ಎಫ್‌ಐಆರ್ ದಾಖಲಿಸಿ, ನಂತರ ಪ್ರಕರಣವನ್ನು ಮಂಡ್ಯ ಠಾಣೆಗೆ ವರ್ಗಾಯಿಸಿದ್ದಾರೆ.

ಅರ್ಜಿಯಲ್ಲಿ ಏನಿದೆ?

‘ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಸೋಲಿಸುವ ಉದ್ದೇಶದಿಂದ ನಾನು ಭಾಷಣ ಮಾಡಿದ್ದೆ. ಪ್ರಕರಣ ಈಗಾಗಲೇ ಮುಗಿದ ಅಧ್ಯಾಯ. ಈ ಕುರಿತು ನಾನು ಈಗಾಗಲೇ ಸದನದಲ್ಲಿ ಮತ್ತು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿದ್ದೇನೆ. ಸಿದ್ದರಾಮಯ್ಯ ಅವರಿಗೆ ಅಗೌರವ ತೋರಿಸುವ ಯಾವುದೇ ಉದ್ದೇಶ ನನಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇನೆ. ಘಟನೆ ನಡೆದು ಹಲವು ತಿಂಗಳಾಗಿದೆ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಪೊಲೀಸರು ಒತ್ತಡಕ್ಕೆ ಒಳಗಾಗಿ ಈ ಎಫ್‌ಐಆರ್ ದಾಖಲಿಸಿದ್ದಾರೆ. ಹಾಗಾಗಿ, ಎಫ್‌ಐಆರ್‌ ರದ್ದುಪಡಿಸಬೇಕು‘ ಎಂದು ಅಶ್ವತ್ಥನಾರಾಯಣ ಅರ್ಜಿಯಲ್ಲಿ ಕೋರಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT