ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿಗಿರಿಯೋ ನಿಗಮವೋ: ಶಾಸಕರ ವಿವೇಚನೆಗೆ

Published 28 ಅಕ್ಟೋಬರ್ 2023, 16:46 IST
Last Updated 28 ಅಕ್ಟೋಬರ್ 2023, 16:46 IST
ಅಕ್ಷರ ಗಾತ್ರ

ಬೆಂಗಳೂರು: ನಿಗಮ–ಮಂಡಳಿಗೆ ನೇಮಕ ಮಾಡಲು ಒಪ್ಪಿಗೆ ಸೂಚಿಸಿರುವ ಕಾಂಗ್ರೆಸ್‌ ವರಿಷ್ಠರು, ನಿಗಮವೋ ಅಥವಾ ಎರಡೂವರೆ ವರ್ಷಗಳ ಬಳಿಕ ಸಚಿವ ಸ್ಥಾನವೋ ಎಂಬ ಆಯ್ಕೆಯನ್ನು ಶಾಸಕರ ಮುಂದಿಡುವಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.

ನಿಗಮ–ಮಂಡಳಿಗಳ ನೇಮಕಕ್ಕೆ ಒಪ್ಪಿಗೆ ನೀಡಿದ ಬಳಿಕ, ಹೊಸಸೂತ್ರವೊಂದನ್ನು ವರಿಷ್ಠರು ಸಿದ್ಧಪಡಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲಾ ಅವರು ನಡೆಸಿದ ಸಭೆಯಲ್ಲಿ ಈ ಸೂತ್ರ ಸಿದ್ಧವಾಗಿದೆ ಎಂದು ಮೂಲಗಳು ಹೇಳಿವೆ.

ಎರಡೂ ವರ್ಷಗಳ ಬಳಿಕ ಸಚಿವ ಸಂಪುಟ ಪುನರ್‌ರಚನೆಯಾಗಲಿದೆ. ಆಗ ಸಚಿವರಾಗ ಬಯಸುವವರು ಮೊದಲಾರ್ಧದಲ್ಲಿ ನಿಗಮ–ಮಂಡಳಿಯ ಅಧ್ಯಕ್ಷ ಸ್ಥಾನ ಪಡೆಯುವಂತಿಲ್ಲ. ಸಚಿವ ಸ್ಥಾನ ಬೇಡವೆಂದಾದರೆ ಮಾತ್ರ, ನಿಗಮದ ಅಧಿಕಾರ ನೀಡಲಾಗುವುದು. ಆಕಾಂಕ್ಷಿ ಶಾಸಕರಿಂದ ಇದನ್ನು ಖಚಿತ ಪಡಿಸಿಕೊಂಡು ನೇಮಕ ಮಾಡಬೇಕು. ಈಗ ನಿಗಮ–ಮಂಡಳಿಗೆ ನೇಮಕ ಮಾಡಿ, ಎರಡೂವರೆ ವರ್ಷಗಳ ಬಳಿಕ ಸಚಿವ ಸ್ಥಾನವನ್ನೂ ನೀಡಿದರೆ, ಕೆಲವರಿಗಷ್ಟೇ ಅಧಿಕಾರ ಸಿಕ್ಕಂತಾಗುತ್ತದೆ. ಮೊದಲ ಬಾರಿಗೆ ಆಯ್ಕೆಯಾದವರಿಗೂ ಅವಕಾಶ ಸಿಗಬೇಕಾದರೆ ಈ ಸೂತ್ರ ಅನ್ವಯಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗೆ ಈ ಸೂಚನೆ ಬಂದಿದೆ ಎಂದು ಮೂಲಗಳು ಖಚಿತಪಡಿಸಿವೆ.

ಈ ಮಧ್ಯೆ, ಎರಡೂವರೆ ವರ್ಷಗಳ ಬಳಿಕ ಅಧಿಕಾರ ಸೂತ್ರ ಹಂಚಿಕೆ ಆಗಲಿದ್ದು, ಆಗ ಸಚಿವ ಸ್ಥಾನ ಬಯಸುವವರನ್ನು ಈಗ ನಿಗಮ– ಮಂಡಳಿಗೆ ಪರಿಗಣಿಸದಿರಲು ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ. ಸಚಿವ ಸ್ಥಾನ ಆಕಾಂಕ್ಷಿಗಳ ಅಭಿಪ್ರಾಯ ಆಲಿಸಿದ ಬಳಿಕ ನಿಗಮ– ಮಂಡಳಿಗಳಿಗೆ ಆಯ್ಕೆ ಅಂತಿಮಗೊಳಿಸಲು ಉದ್ದೇಶಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT