ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕವಚ: ಒಪ್ಪಂದ ಮುಂದುವರಿಕೆಗೆ ಮತ್ತೆ ಜಿವಿಕೆಗೆ ಮೊರೆ

Last Updated 4 ಅಕ್ಟೋಬರ್ 2018, 17:37 IST
ಅಕ್ಷರ ಗಾತ್ರ

ಬೆಂಗಳೂರು: 108 ಆರೋಗ್ಯ ಕವಚ ಆಂಬ್ಯುಲೆನ್ಸ್‌ ಸೇವೆಗಾಗಿ ಜಿವಿಕೆ–ಇಎಂಆರ್‌ಐ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಮತ್ತೆ ಒಂದು ವರ್ಷ ವಿಸ್ತರಿಸಲು ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ನಿರ್ಧರಿಸಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ವರ್ಷದ ಬಳಿಕ ಹೊಸ ಸಂಸ್ಥೆಗೆ ಗುತ್ತಿಗೆ ನೀಡಲೂ ನಿರ್ಧರಿಸಲಾಯಿತು. ಒಪ್ಪಂದವನ್ನು ಆರು ತಿಂಗಳು ವಿಸ್ತರಿಸುವಂತೆ ಆರೋಗ್ಯ ಇಲಾಖೆ ಕೋರಿತ್ತು.

2008ರಲ್ಲಿ ಸಂಸ್ಥೆಯ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಒಪ್ಪಂದದ ಅವಧಿ 10 ವರ್ಷಗಳು. ಈಗ ಹೊಸದಾಗಿ ಟೆಂಡರ್‌ ಕರೆಯಬೇಕಿದೆ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಬೇಕಿದೆ. ಹಳೆಯ ಸೇವಾ ನಿಯಮಗಳ ಪ್ರಕಾರವೇ ಜಿವಿಕೆ ಸಂಸ್ಥೆ ಜತೆಗಿನ ಒಪ್ಪಂದ ಮುಂದುವರಿಸಲಾಗುತ್ತದೆ’ ಎಂದು ಕಾನೂನು ಹಾಗೂ ಸಂಸದೀಯ ಸಚಿವ ಕೃಷ್ಣ ಬೈರೇಗೌಡ ಸುದ್ದಿಗಾರರಿಗೆ ತಿಳಿಸಿದರು.

ಕೆಎಟಿಗೆ ಉಮೇಶ್‌ ನೇಮಕ ಇಲ್ಲ: ರಾಜ್ಯ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಸದಸ್ಯ ಸ್ಥಾನಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ವಿ.ಉಮೇಶ್‌ ಅವರನ್ನು ನೇಮಕ ಮಾಡುವ ಪ್ರಸ್ತಾವ ವಾಪಸ್‌ ಪಡೆಯಲು ಸಂಪುಟ ನಿರ್ಧರಿಸಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ 2016ರಲ್ಲಿ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಉಮೇಶ್‌ ವಿರುದ್ಧ ಪ್ರಕರಣವೊಂದರ ವಿಚಾರಣೆ ನಡೆಯುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಹೀಗಾಗಿ, ಪ್ರಸ್ತಾವ ವಾಪಸ್‌ ‍ಪಡೆಯಲಾಗಿದೆ. ಹೊಸ ಸದಸ್ಯರೊಬ್ಬರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಸಂಪುಟದ ಇತರ ನಿರ್ಧಾರಗಳು:

*ಹೈದರಾಬಾದ್‌–ಕರ್ನಾಟಕ ಪ್ರದೇಶದ ಯಾದಗಿರಿ, ಹುಮನಾಬಾದ್‌, ಲಿಂಗಸಗೂರು ಹಾಗೂ ಹೊಸಪೇಟೆ ಜಿಟಿಟಿಸಿ ಕೇಂದ್ರಗಳಲ್ಲಿ ಶ್ರೇಷ್ಠತಾ ಕೇಂದ್ರಗಳನ್ನು ಡೆಸಾಲ್ಟ್‌ ಸಿಸ್ಟಮ್‌ ಇಂಡಿಯಾ ಸಂಸ್ಥೆ ವತಿಯಿಂದ ಸ್ಥಾಪಿಸುವ ₹224 ಕೋಟಿ ವೆಚ್ಚದ
ಯೋಜನೆಗೆ ಅನುಮೋದನೆ. ಇದಕ್ಕೆ ರಾಜ್ಯ ಸರ್ಕಾರ ₹21 ಕೋಟಿ ಭರಿಸಲಿದೆ. ಉಳಿದ ಮೊತ್ತವನ್ನು ಡೆಸಾಲ್ಟ್‌ ಸಂಸ್ಥೆ ನೀಡಲಿದೆ.

*ಬೀದರ್‌ ಮತ್ತು ಶಿವಮೊಗ್ಗದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕ್ಯಾತ್‌ಲ್ಯಾಬ್‌ ಸೌಲಭ್ಯದೊಂದಿಗೆ ಹೃದ್ರೋಗ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲು ಅನುಮೋದನೆ. ಹಾಸನದಲ್ಲಿ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹50 ಕೋಟಿ.

ವನ್ಯಜೀವಿ ದಾಳಿ: ₹ 2 ಸಾವಿರ ಮಾಸಾಶನ

ವನ್ಯಜೀವಿ ದಾಳಿಯಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ₹2 ಸಾವಿರ ಮಾಸಾಶನ ನೀಡಲು ಸಂಪುಟ ಒಪ್ಪಿಗೆ ನೀಡಿದೆ.

ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಅದರ ಜತೆಗೆ, ಕುಟುಂಬದ ಸದಸ್ಯರೊಬ್ಬರಿಗೆ ಮಾಸಾಶನ ನೀಡಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ರೈತರ ಮೇಲಿನ ಕ್ರಿಮಿನಲ್‌ ಪ್ರಕರಣ ವಾಪಸ್‌

ರಾಜ್ಯದ ವಿವಿಧ ಠಾಣೆಗಳಲ್ಲಿ ರೈತರು ಹಾಗೂ ಕನ್ನಡ ಪರ ಹೋರಾಟಗಾರರ ಮೇಲೆ ದಾಖಲಾಗಿದ್ದ 14 ಕ್ರಿಮಿನಲ್‌ ಪ್ರಕರಣಗಳನ್ನು ವಾಪಸ್‌ ಪಡೆಯಲು ಸಂಪುಟ ನಿರ್ಧರಿಸಿದೆ.

ತುಮಕೂರಿನಲ್ಲಿ ಕಸ ವಿಲೇವಾರಿ ಘಟಕದ ವಿರುದ್ಧ ಹೋರಾಟ, ಬೆಳಗಾವಿಯಲ್ಲಿ ಜಯಂತಿ ಕಾರ್ಯಕ್ರಮವೊಂದರ ವಿರುದ್ಧ ನಡೆದಿದ್ದ ಪ್ರತಿಭಟನೆಗಳು ಇದರಲ್ಲಿ ಸೇರಿವೆ. ಮಹದಾಯಿ ಹೋರಾಟಗಾರರ ಮೇಲಿನ ಪ್ರಕರಣಗಳು ಇದರಲ್ಲಿ ಸೇರಿಲ್ಲ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT