ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆ ಹಾದಿಯಲ್ಲಿ ಬಮುಲ್; ಉತ್ಪಾದಕರಿಗೆ ದರ ಹೆಚ್ಚಳ ಶೀಘ್ರ

ಹಾಲು ಸಂಗ್ರಹ, ಮಾರಾಟವೂ ಏರಿಕೆ
Last Updated 28 ನವೆಂಬರ್ 2020, 20:21 IST
ಅಕ್ಷರ ಗಾತ್ರ

ರಾಮನಗರ: ಕೋವಿಡ್‌ ಲಾಕ್‌ಡೌನ್‌ ಹೊಡೆತದಿಂದ ಬೆಂಗಳೂರು ಹಾಲು ಒಕ್ಕೂಟವು ಚೇತರಿಸಿಕೊಳ್ಳುತ್ತಿದ್ದು, ಹೊಸ ವರ್ಷದಿಂದಲೇ ಹಾಲು ಉತ್ಪಾದಕರಿಗೆ ನೀಡುವ ದರವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ.

ಕೋವಿಡ್‌ ಕಾರಣಕ್ಕೆ ಇದೇ ವರ್ಷ ಮಾರ್ಚ್‌ನಲ್ಲಿ‌‌‌‌‌‌‌‌‌‌‌‌‌ ‌‌‌‌ದೇಶದಾದ್ಯಂತ ಲಾಕ್‌ಡೌನ್‌ ಜಾರಿಗೊಂಡಿದ್ದು, ಹೊರ ರಾಜ್ಯಗಳಿಗೆ ಹಾಲು ಪೂರೈಕೆ ಸ್ಥಗಿತಗೊಂಡಿತ್ತು. ಇದರಿಂದ ಹಾಲಿಗೆ ಬೇಡಿಕೆ ಕುಸಿದಿದ್ದು, ನಷ್ಟದ ಪ್ರಮಾಣ ಸರಿದೂಗಿಸಲು ಬಮುಲ್‌ ಹಾಲು ಉತ್ಪಾದಕರಿಗೆ ನೀಡುತ್ತಿದ್ದ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಕಡಿಮೆ ಮಾಡಿತ್ತು. ಪ್ರಸ್ತುತ 3.5 ಕೊಬ್ಬಿನಾಂಶ ಹೊಂದಿರುವ ಹಾಲಿಗೆ 24 ರೂಪಾಯಿ ಹಾಗೂ 4.2 ರಷ್ಟು ಕೊಬ್ಬಿನಾಂಶ ಇರುವ ಹಾಲಿಗೆ ಗರಿಷ್ಠ 25.5 ರೂಪಾಯಿ ನೀಡಲಾಗುತ್ತಿದೆ. ಇದನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಿಸುವ ಸಾಧ್ಯತೆ ಇದೆ. ಮುಂದಿನ ಪರಿಸ್ಥಿತಿ ನೋಡಿಕೊಂಡು ಜನವರಿ ಅಥವಾ ಫೆಬ್ರುವರಿಯಿಂದ ದರ ಹೆಚ್ಚಿಸಲಾಗುವುದು ಎಂದು ಬಮುಲ್‌ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.

ಹಾಲು ಸಂಗ್ರಹ–ಮಾರಾಟ ಹೆಚ್ಚಳ
ಪ್ರಸ್ತುತ ಬಮುಲ್‌ಗೆ ನಿತ್ಯ ಸಂಗ್ರಹ ಆಗುತ್ತಿರುವ ಹಾಲಿನ ಪ್ರಮಾಣವೂ ಹೆಚ್ಚುತ್ತಿದೆ. ಜೊತೆಗೆ ಗ್ರಾಹಕರಿಂದ ಹಾಲಿಗೆ ಬೇಡಿಕೆಯೂ ಬರುತ್ತಿದೆ. ನಿತ್ಯ ಸುಮಾರು 17 ಲಕ್ಷ ಲೀಟರ್‌ನಷ್ಟು ಹಾಲು ಸಂಗ್ರಹ ಆಗುತ್ತಿದ್ದು, ರಾಮನಗರ ಜಿಲ್ಲೆ ಒಂದರಲ್ಲಿಯೇ ನಿತ್ಯ 8ರಿಂದ 8.5 ಲಕ್ಷ ಲೀಟರ್‌ನಷ್ಟು ಹಾಲು ಸಿಗುತ್ತಿದೆ. ಇದರಲ್ಲಿ 10 ಲಕ್ಷ ಲೀಟರ್‌ನಷ್ಟು ಹಾಲು ಗ್ರಾಹಕರಿಗೆ ನೇರ ಮಾರಾಟ ಆಗುತ್ತಿದೆ. ಉಳಿದ 7 ಲಕ್ಷ ಲೀಟರ್‌ನಲ್ಲಿ 2 ಲಕ್ಷ ಲೀ. ಬೆಣ್ಣೆ, 1 ಲಕ್ಷ ಲೀ ಫ್ಲೆಕ್ಸಿ ಪ್ಯಾಕ್‌ ಹಾಗೂ ಉಳಿದ 4 ಲಕ್ಷ ಲೀಟರ್‌ ಅನ್ನು ಪೌಡರ್‌ ಉತ್ಪಾದನೆ ಮಾಡಲಾಗುತ್ತಿದೆ.

ಗ್ರಾಹಕರಿಗೂ ಹೊರೆ ಸಾಧ್ಯತೆ
ಹಾಲು ಉತ್ಪಾದಕರಿಗೆ ನೀಡುವ ದರ ಹೆಚ್ಚಳದ ಜೊತೆಗೆ ಹಾಲಿನ ಮಾರಾಟ ದರವನ್ನೂ ಹೆಚ್ಚು ಮಾಡಲು ಬಮುಲ್‌ ಚಿಂತನೆ ನಡೆಸಿದೆ. ಕೋವಿಡ್‌ ಪರಿಸ್ಥಿತಿ ನೋಡಿಕೊಂಡು ಸರ್ಕಾರಕ್ಕೆ ಈ ಬಗ್ಗೆ ಸದ್ಯದಲ್ಲೇ ಪ್ರಸ್ತಾವಸಲ್ಲಿಕೆ ಆಗಲಿದೆ. ಪ್ರತಿ ಲೀಟರ್‌ಗೆ 2–3 ರೂಪಾಯಿ ಏರಿಕೆ ಆಗುವ ಸಾಧ್ಯತೆ ಇದೆ. ಪ್ರಸ್ತುತ ಗ್ರಾಹಕರಿಗೆ ಪ್ರತಿ ಲೀಟರ್‌ಗೆ 34ರಿಂದ 38 ರೂಪಾಯಿ ದರದಲ್ಲಿ ಪ್ಯಾಕೆಟ್‌ ಹಾಲು ಸಿಗುತ್ತಿದೆ.

**

ಬಮುಲ್‌ಗೆ ನಷ್ಟದ ಪ್ರಮಾಣ ತಗ್ಗಿದೆ. ಹೀಗಾಗಿ ಜನವರಿ ಇಲ್ಲವೇ ಫೆಬ್ರುವರಿಯಿಂದ ಉತ್ಪಾದಕರಿಗೆ ಹೆಚ್ಚಿನ ದರ ನೀಡಲಾಗುವುದು.
-ನರಸಿಂಹಮೂರ್ತಿ, ಅಧ್ಯಕ್ಷರು, ಬಮುಲ್‌

**

ಪಶು ಆಹಾರ ದರ ಏರುತ್ತಲೇ ಇದ್ದು, ರೈತರು ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ ಹಾಲಿನ ದರವನ್ನು ಲೀಟರ್‌ಗೆ 3–4 ಏರಿಸಬೇಕು.
-ಎ.ಆರ್‌. ತ್ರಿಮೂರ್ತಿ, ಅಧ್ಯಕ್ಷರು ಅರೇಹಳ್ಳಿ ಹಾಲು ಉತ್ಪಾದಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT