ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಜಾರ ಸಮುದಾಯದ ಪ್ರತಿಭಟನೆ: ಯಡಿಯೂರಪ್ಪ ಮನೆ ಮೇಲೆ ದಾಳಿ

ಶಿಕಾರಿಪುರ: ಹಿಂಸೆಗೆ ತಿರುಗಿದ ಬಂಜಾರ ಸಮುದಾಯದ ಪ್ರತಿಭಟನೆ
Published : 27 ಮಾರ್ಚ್ 2023, 19:37 IST
ಫಾಲೋ ಮಾಡಿ
Comments

ಶಿಕಾರಿಪುರ (ಶಿವಮೊಗ್ಗ): ನ್ಯಾಯ ಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಸೋಮವಾರ ಬಂಜಾರ ಸಮುದಾಯದವರು
ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು.

ಈ ವೇಳೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ನಿವಾಸದ ಮೇಲೆ ಉದ್ರಿಕ್ತರು ಕಲ್ಲು ತೂರಿದ್ದು, ಕಿಟಕಿಯ ಗಾಜುಗಳು ಒಡೆದಿವೆ. ಉದ್ರಿಕ್ತರ ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಉದ್ರಿಕ್ತರು ತೂರಿದ ಕಲ್ಲೇಟಿನಿಂದ ಇನ್‌ಸ್ಪೆಕ್ಟರ್‌ ಸೇರಿದಂತೆ ಐವರು ಪೊಲೀಸರು ಗಾಯಗೊಂಡಿದ್ದಾರೆ.

ತಾಲ್ಲೂಕು ಬಂಜಾರ ಸಮಾಜದ ನೇತೃತ್ವದಲ್ಲಿ ಮುಂಜಾನೆ ಶಿಕಾರಿಪುರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ್ದ ಸಾವಿರಾರು ಜನ ಪ್ರತಿಭಟನಕಾರರು, ‘ಸದಾಶಿವ ಆಯೋಗದ ವರದಿ ಆಧಾರದಲ್ಲಿ ಒಳಮೀಸಲಾತಿಯ ವರ್ಗೀಕರಣಕ್ಕೆ ಶಿಫಾರಸು ಮಾಡುವ ಮೂಲಕ ನಮ್ಮ ಬದುಕು ಕಿತ್ತುಕೊಳ್ಳಲಾಗಿದೆ’ ಎಂದು ಆರೋಪಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರ ಭಾವಚಿತ್ರವಿರುವ ಫ್ಲೆಕ್ಸ್‌ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲಿಂದ ಪಟ್ಟಣದ ಮಾಳೇರ ಕೇರಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸದತ್ತ ಗುಂಪುಗುಂಪಾಗಿ ತೆರಳಿದ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಮೂರು ಕಡೆ ಬ್ಯಾರಿಕೇಡ್ ಅಳವಡಿಸಿದ್ದರು. ಎರಡು ಬ್ಯಾರಿಕೇಡ್‌ಗಳನ್ನು ಕಿತ್ತೆಸೆದು ಮುಂದೆ ನುಗ್ಗಿದ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಕಾರರು, ಕಲ್ಲು ಹಾಗೂ ಚಪ್ಪಲಿ ತೂರಾಟ ನಡೆಸಿದರು.

ಈ ಸಂದರ್ಭದಲ್ಲಿ ಶಿಕಾರಿಪುರ ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಲಕ್ಷ್ಮಣ್, ನಗರ ಠಾಣೆಯ ಪಿಎಸ್‌ಐ ಮಂಜುನಾಥ ಕೊಪ್ಪಲೂರು, ಕಾನ್‌ಸ್ಟೆಬಲ್‌ಗಳಾದ ಶಂಕರಗೌಡ, ಕಾಂತರಾಜು ಹಾಗೂ ರತ್ನಾಕರ ಅವರ ತಲೆಗೆ ಪೆಟ್ಟು ಬಿದ್ದಿದೆ.

ಸೀರೆ ಸುಟ್ಟರು: ಶಿಕಾರಿಪುರ ಪಟ್ಟಣದಲ್ಲಿ ಅಳವಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿ.ಎಸ್‌. ಯಡಿಯೂರಪ್ಪ ಅವರ ಫ್ಲೆಕ್ಸ್‌ಗಳನ್ನು ಪ್ರತಿಭಟನಕಾರರು ಕಿತ್ತು ಹಾಕಿದರು. ಯಡಿಯೂರಪ್ಪ ಅವರ ಜನ್ಮದಿನದ ಅಂಗವಾಗಿ ವಿತರಿಸಿದ್ದ ಸೀರೆಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ಯುವಕರು ಬಿಜೆಪಿ ಕಚೇರಿ ಮೇಲೆ ಇದ್ದ ಬಿಜೆಪಿ ಬಾವುಟ ಕಿತ್ತು ಹಾಕಿ ಬಂಜಾರ ಸಮುದಾಯದ ಭಾವುಟ ಹಾರಿಸಿದರು.

ಪ್ರತಿಭಟನೆ, ಕಲ್ಲು ತೂರಾಟ, ಚಪ್ಪಲಿ ಎಸೆತ, ಫ್ಲೆಕ್ಸ್‌ಗಳನ್ನು ಸುಟ್ಟು, ಟೈರ್‌ಗೆ ಬೆಂಕಿ ಹಚ್ಚಲಾಯಿತು. ಪೊಲೀಸ ರೊಂದಿಗೆ ವಾಗ್ವಾದ, ತಳ್ಳಾಟದ ಕಾರಣ ಶಿಕಾರಿಪುರ ಪಟ್ಟಣ ಮಧ್ಯಾಹ್ನ ದವರೆಗೂ ಬಿಗುವಿನಿಂದ ಕೂಡಿತ್ತು. ಯಡಿಯೂರಪ್ಪ ಅವರ ಮನೆ ಇರುವ ರಸ್ತೆಯಲ್ಲಿ ಚಪ್ಪಲಿ ಹಾಗೂ ಕಲ್ಲುಗಳ ರಾಶಿಯೇ ಬಿದ್ದಿತ್ತು.

ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ಕುಮಾರ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಯಾರನ್ನೂ ಬಂಧಿಸಿಲ್ಲ: ‘ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರಿಯವರೆಗೆ ಯಾರನ್ನೂ ಬಂಧಿಸಿಲ್ಲ. ಘಟನೆಯ ವಿಡಿಯೊ ಪರಿಶೀಲನೆ ನಡೆಸುತ್ತಿದ್ದೇವೆ. ಅದನ್ನು ಆಧರಿಸಿ ಆರೋಪಿ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಎಫ್‌ಐಆರ್ ದಾಖಲಿಸಲಾಗುವುದು’ ಎಂದು ಮಿಥುನ್‌ಕುಮಾರ್‌ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದರು.

***

ಬೊಮ್ಮಾಯಿ ಜೇನು ಎಬ್ಬಿಸಿ ಎಲ್ಲರಿಗೂ ಕಡಿಯಲು ಹಚ್ಚಿದ್ದಾರೆ. ಇದು ನಿನ್ನೆಯದಲ್ಲ; ಅರವಿಂದ ಬೆಲ್ಲದ ಅವರು 5– 6 ತಿಂಗಳ ಹಿಂದೆಯೇ ಹೇಳಿದ್ದರು.ಇದು ಪೂರ್ವಯೋಜಿತ.

-ವಿನಯ ಕುಲಕರ್ಣಿ, ಕಾಂಗ್ರೆಸ್‌ ಮಾಜಿ ಶಾಸಕ

***

ಮುಸ್ಲಿಮರ ತುಷ್ಟೀಕರಣ ಕ್ಕಾಗಿ ಕಾಂಗ್ರೆಸ್ ಅಸಾಂವಿಧಾನಿಕ ವಾಗಿ ಧರ್ಮದ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಮಾಡಿತ್ತು. ಬಿಜೆಪಿ ಅದನ್ನು ರದ್ದು ಪಡಿಸಿ ಅಗತ್ಯವಿರುವ ಸಮಾಜಕ್ಕೆ ಹಂಚಿಕೆ ಮಾಡಿದೆ’

-ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT