ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಜನೆಯ ಸತ್ಯ ಮರೆ ಮಾಚಿದ ಕಾಂಗ್ರೆಸ್‌: ಬೊಮ್ಮಾಯಿ

Published 14 ಆಗಸ್ಟ್ 2023, 16:40 IST
Last Updated 14 ಆಗಸ್ಟ್ 2023, 16:40 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದಾರೆ. ಆದರೆ, ಕಾಂಗ್ರೆಸ್‌ನವರು ವಿದೇಶಗಳಿಗೆ ಹೋಗಿ ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತ ಅಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ದೇಶ ವಿಭಜನೆ ಒಂದು ದುರಂತ ಕಥೆ ಸ್ಮೃತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಅಧಿಕಾರದ ಆಸೆಗಾಗಿ ಕಾಂಗ್ರೆಸ್‌ನವರು ತುಷ್ಟೀಕರಣ ರಾಜಕಾರಣ ಮುಂದುವರೆಸಿದ್ದಾರೆ ಎಂದು ಹರಿಹಾಯ್ದರು.

‘ಜಗತ್ತಿನ ಇತಿಹಾಸದಲ್ಲಿ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಭಾರತದಂತಹ ಕೆಟ್ಟ ಸಂದರ್ಭ ಯಾವ ದೇಶಕ್ಕೂ ಬಂದಿಲ್ಲ. ಪರಕೀಯರ ಆಡಳಿತದಿಂದ ಸ್ವಾತಂತ್ರ್ಯ ಬಂದಾಗ ದೇಶ ಅಲ್ಲೋಲ–ಕಲ್ಲೋಲ ಆಗಿರುವ ಇತಿಹಾಸ ಭಾರತಕ್ಕೆ ಮಾತ್ರ ಇದೆ. ಇಷ್ಟೆಲ್ಲಾ ಆದರೂ ಸತ್ಯ ಹೇಳುವ ವ್ಯವಸ್ಥೆ ಬರಲಿಲ್ಲ. ಈ ದೇಶವನ್ನು ಬಹುಕಾಲ ಆಳ್ವಿಕೆ ಮಾಡಿದ ಕಾಂಗ್ರೆಸ್‌ ಸತ್ಯವನ್ನು ಮರೆಮಾಚಿತು’ ಎಂದರು.

‘ದೆಹಲಿಯಲ್ಲಿ ನಿರಾಶ್ರಿತರ ಕ್ಯಾಂಪ್‌ಗಳು ಈಗಲೂ ಇವೆ. ಅವರು ಅನುಭವಿಸಿರುವ ಯಾತನೆ ಕೇಳಲು ಆಗುವುದಿಲ್ಲ. ಹೃದಯ ಕಿವುಚುತ್ತದೆ. ಇಂತಹ ಹೇಯ ಕೃತ್ಯ ನಮ್ಮ ದೇಶದಲ್ಲಿ ಆಗಿದೆಯಾ ಅಂತ ನೋಡಿದರೆ ನಮಗೆ ನಾಚಿಕೆ ಆಗುತ್ತದೆ’ ಎಂದು ಹೇಳಿದರು.

‘ಈ ದೇಶದಲ್ಲಿ ಕಾಂಗ್ರೆಸ್‌ ಹುಟ್ಟುವುದಕ್ಕೆ ಮೊದಲೇ ಸ್ವಾತಂತ್ರ್ಯ ಹೋರಾಟ ಆರಂಭವಾಗಿತ್ತು. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ, ನರಗುಂದದ ಬಾಳಾ ಸಾಹೇಬ ಇವರ ಬಗ್ಗೆ ಇತಿಹಾಸದಲ್ಲಿ ವಿವರಗಳಿಲ್ಲ. ಕೇವಲ ಗಾಂಧಿ–ನೆಹರೂ ಅವರ ಹಿಂಬಾಲಕರ ವಿವರಗಳಿವೆ’ ಎಂದರು.

‘ದೇಶ ವಿಭಜನೆಗೆ ಒಪ್ಪಿದರೆ ಮಾತ್ರ ಸ್ವಾತಂತ್ರ್ಯ ನೀಡುತ್ತೇವೆ ಎಂದು ಬ್ರಿಟಿಷರು ಹೇಳಿದರು. ಆಗ ಗಾಂಧೀಜಿ ಮತ್ತು ನೆಹರು ಬ್ರಿಟಿಷರ ಮಾತಿಗೆ ಬೆಲೆ ಕೊಟ್ಟು ವಿಭಜನೆಗೆ ಒಪ್ಪಿದರು. ಇದರಿಂದ ಭೌಗೋಳಿಕ ಮಾತ್ರವಲ್ಲ, ಭಾರತೀಯರ ಜೀವನದ ವಿಭಜನೆ ಆಯಿತು. ರಕ್ತದ ಕೋಡಿ ಹರಿಯಿತು. ಅತ್ಯಾಚಾರ, ಕೊಲೆ, ಅನಾಚಾರಗಳು ನಡೆದವು. ಪ್ರತಿ ಊರಿನಲ್ಲೂ ಮನಸುಗಳು ಒಡೆದವು’ ಎಂದು ಬೊಮ್ಮಾಯಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT