ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾವಲಿಗಳ ರಕ್ಷಣೆಗೆ ಕಾನೂನು ಜಾರಿಯಾಗಲಿ: ವಿಜ್ಞಾನಿಗಳ ಅಭಿಮತ

ಆರು ದೇಶಗಳ 64 ವಿಜ್ಞಾನಿಗಳ ಮನವಿ
Last Updated 27 ಏಪ್ರಿಲ್ 2020, 14:20 IST
ಅಕ್ಷರ ಗಾತ್ರ

ಬೆಂಗಳೂರು: ಬಾವಲಿಗಳು ಅಪಾಯಕಾರಿಯಲ್ಲ ಮತ್ತು ಕೊರೊನಾ ಸೋಂಕು ಹರಡಿಸುವುದಿಲ್ಲ. ಬಾವಲಿಗಳ ರಕ್ಷಣೆಗೆ ಸರ್ಕಾರ ಕಾನೂನು ರೂಪಿಸಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳೂ ಸೇರಿ ದಕ್ಷಿಣ ಏಷ್ಯಾದ 64 ಬಾವಲಿ ಸಂಶೋಧಕರು ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಕೊರೊನಾ ವೈರಸ್‌ ಬಾವಲಿಗಳಿಂದ ಹರಡುತ್ತವೆ ಎಂಬುದಾಗಿ ವದಂತಿ ಹರಡಿರುವುದರಿಂದ ಬಾವಲಿಗಳನ್ನು ಕೊಲ್ಲಲಾಗುತ್ತಿದೆ. ಇದು ತಪ್ಪು ಮತ್ತು ಇಂತಹ ಕೃತ್ಯಕ್ಕೆ ಕೈ ಹಾಕಬಾರದು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ಅಧ್ಯಯನ ಕೇಂದ್ರದ ಶೇಷಾದ್ರಿ ಮತ್ತು ಬ್ಯಾಟ್‌ ಕನ್ಸರ್ವೇಷನ್‌ ಇಂಡಿಯಾ ಟ್ರಸ್ಟ್‌ನ ಸ್ಥಾಪಕ ರಾಜೇಶ್‌ ಪುಟ್ಟಸ್ವಾಮಯ್ಯ ತಿಳಿಸಿದ್ದಾರೆ.

ಕೊರೊನಾ ವೈರಸ್‌ ಯಾವ ಮೂಲದಿಂದ ಹರಡಿದೆ ಎಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ. ಹೀಗಿರುವಾಗ ಬಾವಲಿಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದು ದಕ್ಷಿಣ ಏಷ್ಯಾದ 6 ದೇಶಗಳ 64 ತಜ್ಞರು ಒಮ್ಮತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವೈರಸ್‌ ಬಾವಲಿಗಳಲ್ಲಿ ಸಹಜವಾಗಿ ವಾಸಿಸುವ ಆರ್‌ಎಟಿಸಿ13 ಎಂಬ ವೈರಸ್‌ ನಿಂದ ಸುಮಾರು 40 ರಿಂದ 70 ವರ್ಷಗಳ ಹಿಂದೆ ವಿಕಾಸಗೊಂಡಿದೆ. ಆದರೆ, ಬಾವಲಿಗಳು ಮನುಷ್ಯರಲ್ಲಿ ನೇರವಾಗಿ ರೋಗ ಹರಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವಾಸ್ತವದಲ್ಲಿ ಬಾವಲಿಗಳು ಮನುಷ್ಯರಿಗೆ ಉಪಕಾರಿಯಾಗಿವೆ. ಕೀಟಗಳು, ಸೊಳ್ಳೆ, ನೊಣ, ಮತ್ತು ಬೆಳೆ ನಾಶ ಮಾಡುವ ಕೀಟಗಳನ್ನು ಭಕ್ಷಣೆ ಮಾಡುತ್ತವೆ. ಭಾರತದಲ್ಲಿ 128 ಪ್ರಬೇಧದ ಬಾವಲಿಗಳಿವೆ. ವಿನಾಶದಂಚಿನಲ್ಲಿರುವ ಕೋಲಾರ್‌ ಎಲೆ ಮೂಗಿನ ಬಾವಲಿ ಕೂಡ ಸೇರಿದೆ. ಬಾವಲಿಗಳನ್ನು ರಕ್ಷಿಸಲು ಸರ್ಕಾರ ಕಾನೂನು ರೂಪಿಸಬೇಕು ಎಂದು ರಾಜೇಶ್‌ ಪುಟ್ಟಸ್ವಾಮಯ್ಯ ಒತ್ತಾಯಿಸಿದ್ದಾರೆ.

‘ಮನುಷ್ಯರು ಕಾಡನ್ನು ಅತಿಕ್ರಮಣ ಮಾಡಿದಾಗ ಹೊಸ ರೋಗಗಳು ಹರಡುವ ಸಾಧ್ಯತೆ ಹೆಚ್ಚು. ಈ ರೀತಿ ರೋಗ ಹರಡುವ ವೈರಸ್‌ ಯಾವುದೇ ಕಾಡು ಪ್ರಾಣಿಗಳಿಂದ ಬರಬಹುದು. ಕೇವಲ ಬಾವಲಿಗಳಿಂದ ಮಾತ್ರ ಅಲ್ಲ. ಇದನ್ನು ತಡೆಯಲು ಜೀವ ವೈವಿಧ್ಯತೆ ಕಾಪಾಡಿಕೊಳ್ಳಬೇಕು’ ಕೆನಡಾದ ಮ್ಯಾಕ್‌ ಮಾಸ್ಟರ್‌ ವಿಶ್ವವಿದ್ಯಾಲಯದ ಡಾ.ಅರಿಂಜಯ್‌ ಬ್ಯಾನರ್ಜಿ ಹೇಳಿದ್ದಾರೆ.

ವನ್ಯಜೀವಿಗಳ ಜತೆ ಒಡನಾಟ, ವನ್ಯಜೀವಿಗಳನ್ನು ಮಾರಾಟ ಮಾಡುವುದರಿಂದ, ವಾಣಿಜ್ಯ ಉದ್ದೇಶದಿಂದ ವನ್ಯಜೀವಿಗಳನ್ನು ಜಾನುವಾರುಗಳಂತೆ ಸಾಕುವುದರಿಂದ ಕೊರೊನಾ ವೈರಸ್‌ನಂತಹ ಝೊನೊಟಿಕ್‌ ಕಾಯಿಲೆಗಳು ಹರಡಲು ಕಾರಣವಾಗುತ್ತವೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT