ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟಿಪಿಪಿ ಸೇರಿ 3 ಮಸೂದೆಗಳಿಗೆ ಅಂಗೀಕಾರ

Published 15 ಡಿಸೆಂಬರ್ 2023, 14:25 IST
Last Updated 15 ಡಿಸೆಂಬರ್ 2023, 14:25 IST
ಅಕ್ಷರ ಗಾತ್ರ

ವಿಧಾನ ಪರಿಷತ್‌: ಸರ್ಕಾರದ ವಿವಿಧ ಇಲಾಖೆಗಳಲ್ಲಿ ₹1 ಕೋಟಿವರೆಗಿನ ವೆಚ್ಚದ ಕಾಮಗಾರಿಗಳಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ 1 ಪಟ್ಟಿಯಲ್ಲಿರುವ ಜಾತಿಗೆ ಸೇರಿದ ಗುತ್ತಿಗೆದಾರರಿಗೆ ಶೇ 4 ಮತ್ತು ಪ್ರವರ್ಗ 2–ಎ ಪಟ್ಟಿಯಲ್ಲಿರುವ ಜಾತಿಗೆ ಸೇರಿದ ಗುತ್ತಿಗೆದಾರರಿಗೆ ಶೇ 15 ಮೀಸಲಾತಿ ಕಲ್ಪಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯೂ ಸೇರಿ ಒಟ್ಟು ಮೂರು ಮಸೂದೆಗಳಿಗೆ ಪರಿಷತ್‌ ಅಂಗೀಕಾರ ನೀಡಿತು.

ಕೆಟಿಪಿಪಿ ಕಾಯ್ದೆ–1999ಕ್ಕೆ ತಿದ್ದುಪಡಿ ತರುವ ಮಸೂದೆಯನ್ನು ಮುಖ್ಯಮಂತ್ರಿ ಪರವಾಗಿ ಕಾನೂನು ಸಚಿವ ಎಚ್‌.ಕೆ. ಪಾಟೀಲ ಮಂಡಿಸಿದರು. ಚರ್ಚೆಯ ವೇಳೆ ಮಾತನಾಡಿದ ಬಿಜೆಪಿಯ ಪಿ.ಎಚ್. ಪೂಜಾರ, ಎನ್.ರವಿಕುಮಾರ್, ಪ್ರತಾಪ್ ಸಿಂಹ ನಾಯಕ್, ಕೇಶವಪ್ರಸಾದ್, ಎಚ್.ವಿಶ್ವನಾಥ್, ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ, ಕಾಂಗ್ರೆಸ್‌ನ ನಾಗರಾಜ್ ಯಾದವ್, ಉಮಾಶ್ರೀ, ‘ಇದೊಂದು ಕ್ರಾಂತಿಕಾರಕ ಮಸೂದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು. ಮೀಸಲಾತಿ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

ಶಾಸಕರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್.ಕೆ. ಪಾಟೀಲ ಭರವಸೆ ನೀಡಿದರು.

ವಕೀಲರು ಯಾವುದೇ ಭಯ, ಬಾಹ್ಯ ಪ್ರಭಾವಕ್ಕೆ ಒಳಗಾಗದೆ ವೃತ್ತಿಪರ ಸೇವೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲು ಮತ್ತು ಅವರ ಮೇಲಿನ ಹಿಂಸೆಯನ್ನು ನಿಷೇಧಿಸಲು ಹಾಗೂ ರಕ್ಷಣೆ ಒದಗಿಸಲು ಅವಕಾಶ ಕಲ್ಪಿಸುವ  2023ನೇ ಸಾಲಿನ ‘ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ’ ಮಸೂದೆಗೂ ಅಂಗೀಕಾರ ನೀಡಲಾಯಿತು. 

ಚರ್ಚೆಯ ವೇಳೆ ಕಾಂಗ್ರೆಸ್‌ನ ನಾಗರಾಜ್ ಯಾದವ್, ‘ಹಿಂದಿನ ಸರ್ಕಾರಕ್ಕೆ ಬದ್ದತೆ ಇರಲಿಲ್ಲ. ನಮ್ಮ ಸರ್ಕಾರ ವಕೀಲರ ಮೇಲಿನ ಹಲ್ಲೆ ತಡೆಗಟ್ಟುವ ಉದ್ದೇಶದಿಂದ ಈ ಕಾಯ್ದೆ ತರುತ್ತಿದೆ’ ಎಂದಾಗ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಕಾಯ್ದೆಯ ಮೇಲೆ ಯಾವುದೇ ಚರ್ಚೆ ಇಲ್ಲದೆ ಪರಿಷತ್ ಅಂಗೀಕಾರ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT