ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಮಹಿಳೆ ಬೆತ್ತಲೆಗೊಳಿಸಿ ಮೆರವಣಿಗೆ: ರಕ್ಷಣೆಗೆ ಯತ್ನಿಸಿದವರಿಗೆ ಸನ್ಮಾನ

Published 30 ಡಿಸೆಂಬರ್ 2023, 5:18 IST
Last Updated 30 ಡಿಸೆಂಬರ್ 2023, 5:18 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಹೊಸ ವಂಟಮೂರಿಯಲ್ಲಿ ಮಹಿಳೆ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ, ಥಳಿಸಿದ ಘಟನೆ ತಡೆಯಲು ಯತ್ನಿಸಿದ ಮೂವರನ್ನು ಇಲ್ಲಿನ ಪೊಲೀಸ್‌ ಕವಾಯತು ಮೈದಾನದಲ್ಲಿ ಶನಿವಾರ ಬೆಳಿಗ್ಗೆ ಸನ್ಮಾನಿಸಲಾಯಿತು.

ಹೊಸ ವಂಟಮೂರಿ ನಿವಾಸಿಗಳಾದ ಜಹಾಂಗೀರ್ ತಹಶೀಲ್ದಾರ್‌, ವಾಸೀಮ್ ಮಕಾನದಾರ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ಹೊಳ್ಳಿಕಾರ ಅವರಿಗೆ ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌. ಸಿದ್ರಾಮಪ್ಪ ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಅಲ್ಲದೆ, ತಲಾ ₹5 ಸಾವಿರ ನಗದು ಬಹುಮಾನ ನೀಡಿದರು.

ಇದೇವೇಳೆ, ಪ್ರಕರಣ ಭೇದಿಸಿದ ಕಾಕತಿ ಠಾಣೆಯ ಪಿಎಸ್ಐ ಮಂಜುನಾಥ್ ಹುಲಕುಂದ, ಪೊಲೀಸ್‌ ಕಾನ್‌ಸ್ಟೆಬಲ್‌ಗಳಾದ ಸುಭಾಷ ಬಿಲ್, ವಿಠ್ಠಲ ಪಟ್ಟೇದ, ನಾರಾಯಣ ಚಿಪ್ಪಲಕಟ್ಟಿ, ಮುತ್ತಪ್ಪ ಕ್ವಾಣಿ ಮತ್ತು ಮಂಜುನಾಥ ಠಕ್ಕೇಕರ್ ಅವರನ್ನು ಸತ್ಕರಿಸಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಸಿದ್ರಾಮಪ್ಪ, ‘ಹೊಸ ವಂಟಮೂರಿಯಲ್ಲಿ ನಡೆದಿದ್ದ ಅಮಾನವೀಯ ಘಟನೆ ತಡೆಯಲು ಯತ್ನಿಸಿದ ಮೂವರನ್ನು ಸನ್ಮಾನಿಸಿದ್ದೇವೆ. ಮುಂದೆ ಅವರಿಗೆ ಯಾವ ತೊಂದರೆಯಾಗದಂತೆ ರಕ್ಷಣೆ ನೀಡುತ್ತೇವೆ‌. ಇಂಥ ಘಟನೆ ನಡೆದಾಗ ಜನರು ಭಯಪಡದೆ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

‘ಈ ಪ್ರಕರಣ ಭೇದಿಸಿದ ಕಾಕತಿ ಪಿಎಸ್‌ಐಗೆ ₹5 ಸಾವಿರ ಹಾಗೂ ಉಳಿದ ಐವರು ಸಿಬ್ಬಂದಿಗೆ ತಲಾ ₹4 ಸಾವಿರ ನಗದು ಬಹುಮಾನ ನೀಡಿದ್ದೇವೆ’ ಎಂದರು. ನಗರ ಪೊಲೀಸ್‌ ಉಪ ಆಯುಕ್ತೆ (ಅಪರಾಧ ಮತ್ತು ಸಂಚಾರ ವಿಭಾಗ) ಪಿ.ವಿ.ಸ್ನೇಹಾ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT