ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Tech Summit | ಜೈವಿಕ ತಂತ್ರಜ್ಞಾನದ ಆರ್ಥಿಕತೆ ವಿಸ್ತರಣೆಗೆ ಗುರಿ

ಎವಿಜಿಸಿ ಕ್ಷೇತ್ರದಲ್ಲಿ ಉದ್ಯೋಗ ಸೃಜನೆಗೆ ಒತ್ತು
Published 29 ನವೆಂಬರ್ 2023, 20:48 IST
Last Updated 29 ನವೆಂಬರ್ 2023, 20:48 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣ ಪ್ರದೇಶವೂ ಸೇರಿದಂತೆ ರಾಜ್ಯದಾದ್ಯಂತ ಜೈವಿಕ ತಂತ್ರಜ್ಞಾನದ ಆರ್ಥಿಕತೆಯನ್ನು ವಿಸ್ತರಿಸುವ ಗುರಿ ಹೊಂದಿರುವ ‘ಜೈವಿಕ ತಂತ್ರಜ್ಞಾನ ನೀತಿ’ಯ ಕರಡನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.

ಇಲ್ಲಿನ ಅರಮನೆ ಆವರಣದಲ್ಲಿ ನಡೆದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–2023ರ ಉದ್ಘಾಟನಾ ವೇದಿಕೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಇತರ ಗಣ್ಯರು ಕರಡನ್ನು ಬಿಡುಗಡೆ ಮಾಡಿದರು.

ಅನಿಮೇಷನ್‌, ವಿಷ್ಯುಯಲ್‌ ಎಫೆಕ್ಟ್ಸ್‌, ಗೇಮಿಂಗ್‌, ಕಾಮಿಕ್ಸ್‌ ಮತ್ತು ಎಕ್ಸ್‌ಟೆಂಡೆಡ್‌ ರಿಯಾಲಿಟಿ ಕ್ಷೇತ್ರದ ಬೆಳವಣಿಗೆ ಪ್ರೋತ್ಸಾಹ ನೀಡುವ ‘ಎವಿಜಿಸಿ–ಎಕ್ಸ್‌ಆರ್‌ ನೀತಿ 3.0’ ಅನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

‘ಪರಿಣಾಮಕಾರಿ ಅನುಷ್ಠಾನದೊಂದಿಗೆ ಬದಲಾವಣೆ’ ಎಂಬುದು ನೂತನ ಜೈವಿಕ ತಂತ್ರಜ್ಞಾನ ನೀತಿಯ ಘೋಷವಾಕ್ಯ. ಕರ್ನಾಟಕವನ್ನು ವೈದ್ಯಕೀಯ ಪ್ರಯೋಗ (ಕ್ಲಿನಿಕಲ್‌ ಟ್ರಯಲ್‌) ಮತ್ತು ವಂಶವಾಹಿ ಅಧ್ಯಯನ ಕ್ಷೇತ್ರದ ಪ್ರಮುಖ ಕೇಂದ್ರವನ್ನಾಗಿಸುವ ಗುರಿ ನೀತಿಯಲ್ಲಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಜೈವಿಕ ತಂತ್ರಜ್ಞಾನದ ಆವಿಷ್ಕಾರ ಕೇಂದ್ರಗಳು ಮತ್ತು ಅನುಷ್ಠಾನ ಘಟಕಗಳ ಸ್ಥಾಪನೆ, ಅತ್ಯಾಧುನಿಕ ಬಿ.ಟಿ ಕ್ಲಸ್ಟರ್‌ಗಳ ನಿರ್ಮಾಣಕ್ಕೆ ಅಭಿವೃದ್ಧಿ ಹೊಂದಿದ ಕೈಗಾರಿಕಾ ಪ್ರದೇಶಗಳಲ್ಲಿ 5 ಎಕರೆಯಿಂದ 10 ಎಕರೆಗಳವರೆಗೆ ಜಮೀನು ಒದಗಿಸುವ ಪ್ರಸ್ತಾವ ನೀತಿಯಲ್ಲಿದೆ.

30 ಸಾವಿರ ಉದ್ಯೋಗ ಸೃಷ್ಟಿ: ಎವಿಜಿಸಿ–ಎಕ್ಸ್‌ಆರ್‌ ಕ್ಷೇತ್ರದಲ್ಲಿ 2028ರ ವೇಳೆಗೆ 30,000 ಅತ್ಯುನ್ನತ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ‘ಎವಿಜಿಸಿ–ಎಕ್ಸ್‌ಆರ್‌ ನೀತಿ 3.0’ರಲ್ಲಿದೆ.

ಈ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ಕೌಶಲ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ, ತರಬೇತಿ ಕಾರ್ಯಕ್ರಮಗಳ ಅನುಷ್ಠಾನ, ವಿಶೇಷ ಆರ್ಥಿಕ ವಲಯಗಳ ನಿರ್ಮಾಣ, ಗೇಮಿಂಗ್‌ ಕ್ಷೇತ್ರದ ಉನ್ನತ ಅಧ್ಯಯನ ಕೇಂದ್ರ ಸ್ಥಾಪನೆಯ ಪ್ರಸ್ತಾವಗಳು ಕರಡು ನೀತಿಯಲ್ಲಿವೆ.

ಐ.ಟಿ ನೀತಿಯಲ್ಲಿನ ಉತ್ತೇಜನಗಳು

* ಕೌಶಲಯುತ ಮಾನವ ಸಂಪನ್ಮೂಲ ಅಭಿವೃದ್ಧಿಗೆ ನೆರವು

* ಬಿ.ಟಿ ಕ್ಷೇತ್ರದಲ್ಲಿ ಉದ್ಯಮಶೀಲತೆ ಅಧ್ಯಯನಕ್ಕೆ ತಿಂಗಳಿಗೆ ₹ 50,000 ಶಿಷ್ಯವೇತನವುಳ್ಳ ಒಂದು ವರ್ಷದ ಅವಧಿಯ ಫೆಲೋಶಿಪ್‌

* ಬಿ.ಟಿ ಕ್ಷೇತ್ರದ ಉತ್ಪಾದನಾ ಘಟಕಗಳ ನಿರ್ಮಾಣಕ್ಕೆ ₹ 10 ಕೋಟಿಗಳವರೆಗೆ ಸಹಾಯಧನ

* ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಬಯೋ ಫೌಂಡ್ರಿಗಳ ನಿರ್ಮಾಣಕ್ಕೆ ನೆರವು

ಎವಿಜಿಸಿ–ಎಕ್ಸ್‌ಆರ್‌ 3.0 ನೀತಿಯಲ್ಲಿನ ಉತ್ತೇಜನಗಳು

* ಕಿಟ್‌ವೆನ್‌ ನಿಧಿ–4ರ ಮೂಲಕ ಆರ್ಥಿಕ ನೆರವು

* ಉದ್ಯೋಗ ಸೃಷ್ಟಿ ಮತ್ತು ತರಬೇತಿ ಕಾರ್ಯಕ್ರಮದ ವೆಚ್ಚ ಮರುಭರಿಸುವುದು

* ನವೋದ್ಯಮಗಳ ಆರಂಭಕ್ಕೆ ನೆರವು ನೀಡುವುದು

* ಅನಿಮೇಷನ್‌ ಸಿನಿಮಾ, ಕಿರುಚಿತ್ರಗಳ ನಿರ್ಮಾಣಕ್ಕೆ ಸಹಾಯಧನ

* ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ನೆರವು ಒದಗಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT