ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್ ಜೋಡೋ ಯಾತ್ರೆಗೆ ಚಿಂತಕರು, ಪ್ರಗತಿಪರರ ಷರತ್ತುಬದ್ಧ ಬೆಂಬಲ

ಪೂರ್ವಭಾವಿ ಸಭೆಯಲ್ಲಿ ಸಮ್ಮತಿ
Last Updated 20 ಸೆಪ್ಟೆಂಬರ್ 2022, 15:27 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ ಹಮ್ಮಿಕೊಂಡಿರುವ ಭಾರತ್ ಜೋಡೋ (ಭಾರತ ಒಗ್ಗೂಡಿಸಿ) ಯಾತ್ರೆಗೆ ಹಲವು ಚಿಂತಕರು, ಸಂಘಟನೆಗಳ ಮುಖಂಡರು ಷರತ್ತುಬದ್ಧ ಬೆಂಬಲ ಸೂಚಿಸಿದರು.

ಸಮಾಜವಾದಿ ವೇದಿಕೆ ಮಂಗಳವಾರ ಹಮ್ಮಿಕೊಂಡಿದ್ದ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಪ್ರಕಟಿಸಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್‌ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಸುಮಾರು 3,500 ಕಿ.ಮೀ. ಭಾರತ್ ಜೋಡೋ ಯಾತ್ರೆ ಈಗಾಗಲೇ ಆರಂಭವಾಗಿದೆ. ಈ ಯಾತ್ರೆ ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ದೇಶದ ಆಗುಹೋಗುಗಳ ಬಗ್ಗೆ ಕಾಳಜಿ ಇರುವ, ಸಂವಿಧಾನ ಮತ್ತು ಪ್ರಜಾತಂತ್ರದಲ್ಲಿ ನಂಬಿಕೆ ಇಟ್ಟಿರುವ ವ್ಯಕ್ತಿ ಮತ್ತು ಸಂಘಟನೆಗಳ ಯಾತ್ರೆಯಾಗಿದೆ. ಹಾಗಾಗಿ, ಎಲ್ಲರೂ ಪಕ್ಷ, ಸಿದ್ಧಾಂತ, ವಿಚಾರಗಳ ಭೇದವಿಲ್ಲದೆ ಬೆಂಬಲಿಸುವೆವು. ಆದರೆ, ಕಾಂಗ್ರೆಸ್ ತನ್ನ ಹಿಂದಿನ ತಪ್ಪುಗಳಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಂತಹ ತಪ್ಪುಗಳಿಂದಾಗಿಯೇ ನರೇಂದ್ರ ಮೋದಿ ಮತ್ತು ಸಂಘ ಪರಿವಾರ ದೇಶದ ಮೇಲೆ ಪ್ರಭುತ್ವ ಸಾಧಿಸಲು ಸಾಧ್ಯವಾಗಿದೆ. ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕು ಎನ್ನುವುದೇ ಎಲ್ಲರ ಒಕ್ಕೊರಲ ಷರತ್ತು ಎಂದು ವಿವಿಧ ಚಿಂತಕರು ಹೇಳಿದರು.

‘ಕ್ವಿಂಟ್‌ ಇಂಡಿಯಾ ಚಳವಳಿ ಕೇವಲ ಸ್ವಾತಂತ್ರ್ಯದ ಹೋರಾಟವಷ್ಟೇ ಅಲ್ಲ, ಅದು ಪ್ಯಾಸಿಸಂ ವಿರುದ್ಧದ ಹೋರಾಟವೂ ಹೌದು’ ಎಂಬ ಗಾಂಧೀಜಿ ಮಾತನ್ನು ಇಂದು ಕಾಂಗ್ರೆಸ್ ಪುನರ್‌ ಮನನ ಮಾಡಿಕೊಂಡು ಭವಿಷ್ಯದ ಹೆಜ್ಜೆಗಳನ್ನು ಇಡಬೇಕು ಎಂದು ಚಿಂತಕರಾದ ಗಣೇಶ್‌ ದೇವಿ, ರಾಜಕೀಯ ಚಿಂತಕ ಸುಧೀಂದ್ರ ಕುಲಕರ್ಣಿ, ರಾಜಕೀಯ ವಿಶ್ಲೇಷಕ ಎ.ನಾರಾಯಣ ಸಲಹೆ ನೀಡಿದರು.

ರಾಹುಲ್‌ ಗಾಂಧಿ ಹೃದಯವಂತ ಮನುಷ್ಯ, ರಾಜಕಾರಣ ಬದಲಿಸಲು, ಪರಿವರ್ತಿಸಲು ನಿಂತಿದ್ದಾರೆ. ಇಲ್ಲಿಯವರೆಗೂ ಅವರಿಗೆ ಯಶಸ್ಸು ಸಿಗದೇ ಇರಬಹುದು, ಆದರೆ, ಭಾರತ್ ಜೋಡೋ ಯಾತ್ರೆಯಂತಹ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿರುವುದು ಅವರ ಕಠಿಣ ಬದ್ಧತೆಗೆ ಸಾಕ್ಷಿ. ಅವರ ಪ್ರಯತ್ನಗಳಿಗೆ ಭವಿಷ್ಯದಲ್ಲಿ ದೇವರು ಫಲ ಕೊಡುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಯ ಉತ್ಪಾದಿಸುವ ಸಂಸ್ಥೆ ಇ.ಡಿ

ರಾಜಕೀಯ ವಿರೋಧಿಗಳಲ್ಲಿ ಭಯ ಹುಟ್ಟಿಸಲು ಜಾರಿ ನಿರ್ದೇಶನಾಲಯ ಬಳಸಿಕೊಳ್ಳಲಾಗುತ್ತಿದೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಶಾಸಕರನ್ನೇ ಖರೀದಿ ಮಾಡಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಧ್ವನಿಗಳನ್ನು ಹತ್ತಿಕ್ಕಲಾಗುತ್ತಿದೆ. ಧರ್ಮ, ಜಾತಿ, ಪ್ರದೇಶ ವಿಭಜಿಸಿ ರಾಜಕೀಯ ಮಾಡುತ್ತಿದ್ದಾರೆ. ಇಂತಹ ಕುತಂತ್ರಗಳ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ ಎಂದು ಲೇಖಕಿ ಕೆ.ಶರೀಫ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT