ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದುವರಿದ ಭೀಮಾ ನದಿ ಅಬ್ಬರ: ರಸ್ತೆ– ಸೇತುವೆ ಜಲಾವೃತ, ಸಂಪರ್ಕ ಕಡಿತ

ಅಪಾರ ಪ್ರಮಾಣದ ಬೆಳೆ ನಾಶ l ಗೋಡೆ ಕುಸಿದು ಯುವಕ ಸಾವು
Last Updated 12 ಸೆಪ್ಟೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಬೆಳಗಾವಿ, ಬಾಗಲ ಕೋಟೆ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು ಜಿಲ್ಲೆಯಲ್ಲಿ ಸೋಮವಾರವೂ ಭಾರಿ ಮಳೆಯಾಗಿದೆ. ಹಲವೆಡೆ ರಸ್ತೆ, ಸೇತುವೆಗಳು ಮುಳು ಗಡೆಯಾಗಿ, ಸಂಪರ್ಕ ಕಡಿತಗೊಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕ್ಯಾದಗಿಯಲ್ಲಿ ತಡರಾತ್ರಿ ಮನೆಯ ಗೋಡೆ ಕುಸಿದು ಚಂದ್ರಶೇಖರ ಹರಿಜನ (24) ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನಾಗರಮುನ್ನೋಳಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಎರಡು ಕೊಠಡಿಗಳ ಚಾವಣಿ ಭಾನುವಾರ ರಾತ್ರಿ ಕುಸಿದು ಬಿದ್ದಿದೆ.

ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಉಜನಿ ಜಲಾಶಯದಿಂದ ನೀರನ್ನು ಭೀಮಾ ನದಿಗೆ ಬಿಡಲಾಗುತ್ತಿದೆ. ಅಫಜಲಪುರ ತಾಲ್ಲೂಕಿನ ಹಲವೆಡೆ ಭೀಮಾ ನದಿ, ಇತರೆ ಹಳ್ಳಗಳು ಉಕ್ಕಿ ಹರಿದವು.

ಅಮರ್ಜಾ ನದಿಯ ಉಪನದಿಯಾದ ಬೋರಿಹಳ್ಳ ಸೇರಿ ಸಣ್ಣಪುಟ್ಟ ಹಳ್ಳಗಳು ಭರ್ತಿಯಾಗಿ ಹರಿಯುತ್ತಿರುವುದರಿಂದ ಅಫಜಲಪುರ ತಾಲ್ಲೂಕಿನ ಗೌರ್ (ಬಿ), ದಿಕ್ಸಂಗಿ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ತೆಲ್ಲೂರು ಗ್ರಾಮದಿಂದ ಕೆರಕನಹಳ್ಳಿ ಮೂಲಕ ಘತ್ತರಗಾ ಗ್ರಾಮಕ್ಕೆ ತೆರಳುವ ರಸ್ತೆ ಸಂಪರ್ಕ ಪ್ರವಾಹದಿಂದಾಗಿ ಸ್ಥಗಿತಗೊಂಡಿದೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಸೋಮವಾರವೂ ಸೊನ್ನ ಭೀಮಾ ಬ್ಯಾರೇಜಿನ 11 ಗೇಟ್‌ಗಳ ಮೂಲಕ 1 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.ಬೆಳಗಾವಿ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ವಿಪರೀತ ಮಳೆಯಾಗಿದೆ. ಘಟಪ್ರಭಾ, ಮಾರ್ಕಂಡೇಯ ಹಾಗೂ ಹಿರಣ್ಯಕೇಶಿ ನದಿಗಳ ನೀರು ಉಕ್ಕೇರಿದ ಪರಿಣಾಮ, ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಕೆಲವು ರಸ್ತೆಗಳಿಗೆ ನೀರು ನುಗ್ಗಿದೆ. 200ಕ್ಕೂ ಹೆಚ್ಚು ಮನೆಗಳ ಮುಂದೆ 2 ಅಡಿಯಷ್ಟು ನೀರು ಸಂಗ್ರಹಗೊಂಡಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ.

ಘಟಪ್ರಭಾ ನದಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ರಾಜಾ ಲಖಮಗೌಡ ಜಲಾಶಯದಿಂದ (ಹಿಡಕಲ್‌) ಘಟಪ್ರಭಾ ನದಿಗೆ 28 ಸಾವಿರ ಕ್ಯುಸೆಕ್‌ ನೀರು ಬಿಡಲಾಗುತ್ತಿದೆ. ಈ ನೀರು ಹರಿದು ಬಂದು ಹಳೆಯ ಗೋಕಾಕ ನಗರ ಸೇರಿಕೊಂಡಿದೆ. ಹೊರ ಹರಿವು ಹೆಚ್ಚಿಸಿದರೆ ಜತ್ತ– ಜಾಂಬೋಟಿ ಅಂತರರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆ ಯಾವುದೇ ಕ್ಷಣದಲ್ಲಿ ಮುಳುಗುವ ಭೀತಿ ಎದುರಾಗಿದೆ.

ಚಿಕ್ಕೋಡಿ, ರಾಮದುರ್ಗ, ನಿಪ್ಪಾಣಿ ಹಾಗೂ ಖಾನಾಪುರ ತಾಲ್ಲೂಕುಗಳ ಗ್ರಾಮಾಂತರ ಪ್ರದೇಶಗಳಲ್ಲಿರುವ 20ಕ್ಕೂ ಹೆಚ್ಚು ಸೇತುವೆಗಳ ಮೇಲೆ ನದಿ ನೀರು ಹರಿಯುತ್ತಿದ್ದು, ಸಂಚಾರ ಬಂದ್‌ ಆಗಿದೆ. ಮುನವಳ್ಳಿ ಪಟ್ಟಣದೊಳಗಿನ ಹಳೆ ಸೇತುವೆ ಮುಳುಗಡೆಯಾಗಿದೆ.

ಘಟಪ್ರಭಾ ನದಿ ನೀರಿನ ಹರಿವು ಹೆಚ್ಚಿದ್ದು, ಬಾಗಲಕೋಟೆ ಜಿಲ್ಲೆಯ ಎರಡು ಸೇತುವೆ ಮುಳುಗಡೆಯಾಗಿವೆ. ಮುಧೋಳ ತಾಲ್ಲೂಕಿನ ಢವಳೇಶ್ವರ ಸೇತುವೆ, ರಬಕವಿ–ಜಾಂಬೋಟಿ ಸಂಪರ್ಕಿಸುವ ಮಿರ್ಜಿ ಸೇತುವೆಗಳು ಮುಳುಗಡೆಯಾಗಿವೆ.

ಗದಗ ಜಿಲ್ಲೆಯ ನರೇಗಲ್ ಸಮೀಪದ ಜಕ್ಕಲಿ ಗ್ರಾಮದಲ್ಲಿ ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ 20ಕ್ಕೂ ಹೆಚ್ಚು ಮನೆಗಳು ಕುಸಿತಗೊಂಡಿವೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ತಡರಾತ್ರಿ ಶುರುವಾದ ಮಳೆ ಸೋಮವಾರ ಮಧ್ಯಾಹ್ನದ ತನಕವೂ ಮುಂದುವರಿಯಿತು.ಹೊನ್ನಾವರ ತಾಲ್ಲೂಕಿನ ಮಾವಿನಕುರ್ವದ ಹೊಸಾಡದಲ್ಲಿ ಗುಡ್ಡದ ಮಣ್ಣು ರಸ್ತೆ ಮೇಲೆ ಕುಸಿದಿತ್ತು.

ಹೊಸಪೇಟೆ, ಹಾವೇರಿ, ಧಾರವಾಡ– ಹುಬ್ಬಳ್ಳಿಯಲ್ಲೂ ಮಳೆಯಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆಯ ಕದನೂರು ಕೆರೆ ಮತ್ತೊಮ್ಮೆ ತುಂಬಿ ಹರಿಯುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್‌ನಲ್ಲಿಬಿದಿರುತಳ ಸಮೀಪ ಹೆದ್ದಾರಿಯ ಬದಿ ಭೂಮಿ ಕುಸಿದಿದೆ. ಕೊಟ್ಟಿಗೆಹಾರದಿಂದ ಮಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ಚಾರ್ಮಾಡಿ ಘಾಟ್‌ನಲ್ಲಿ ವಿಪರೀತ ಮಳೆಯಾಗುತ್ತಿದೆ. ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ.

8 ಬಾಂದಾರ ಮುಳುಗಡೆ

ಮಹಾರಾಷ್ಟ್ರದ ಉಜನಿ ಜಲಾಶಯದಿಂದ 50 ಸಾವಿರ ಕ್ಯುಸೆಕ್ ಮತ್ತು ವೀರ ಭಟಕರ ಜಲಾಶಯದಿಂದ 5 ಸಾವಿರ ಕ್ಯುಸೆಕ್ ನೀರನ್ನುಭೀಮಾ ನದಿಗೆ ಬಿಡಲಾ ಗಿದ್ದು, ವಿಜಯ‍ಪುರ ಜಿಲ್ಲೆಯ ಇಂಡಿ ಮತ್ತು ಚಡಚಣ ತಾಲ್ಲೂಕು ವ್ಯಾಪ್ತಿಯಲ್ಲಿರುವ ಎಂಟು ಬಾಂದಾರ ಕಂ ಬ್ರಿಡ್ಜ್‌ಗಳು ಮುಳುಗಿದ್ದು, ಸಂಚಾರ ಸ್ಥಗಿತವಾಗಿದೆ.

ಭೀಮಾ ನದಿಯಲ್ಲಿ ನೀರಿನ ಮಟ್ಟ ಕ್ಷಣಕ್ಷಣಕ್ಕೆ ಏರಿಕೆ ಆಗುತ್ತಿರುವುದರಿಂದ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ರೈತರು ಮತ್ತು ತೀರದಲ್ಲಿರುವ ಗ್ರಾಮಗಳ ನಾಗರಿಕರು ಮುನ್ನಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT