ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಶವೃಕ್ಷ, ಸಂಸ್ಕಾರ ಮೇರು ಕೃತಿಗಳು: ಸಾಹಿತಿ ಚಂದ್ರಶೇಖರ ಕಂಬಾರ ಬಣ್ಣನೆ

‘ಎಸ್.ಎಲ್‌. ಭೈರಪ್ಪ ಸಾಹಿತ್ಯೋತ್ಸವ’
Last Updated 19 ಜನವರಿ 2019, 20:00 IST
ಅಕ್ಷರ ಗಾತ್ರ

ಮೈಸೂರು: ಸಂಸ್ಕಾರ, ವಂಶವೃಕ್ಷ ಕಾದಂಬರಿಗಳು ಸಾಹಿತ್ಯ ಲೋಕದ ಮೇರು ಕೃತಿಗಳಾಗಿವೆ. ಆ ಎರಡು ರಚನೆಗಳು ಕನ್ನಡದ ಸಾಹಿತ್ಯಕ್ಕೆ ಹೊಸ ದಿಶೆಯನ್ನೇ ತೋರಿಸಿದವು ಎಂದು ಸಾಹಿತಿ ಡಾ.ಚಂದ್ರಶೇಖರ ಕಂಬಾರ ಬಣ್ಣಿಸಿದರು.

ಎಸ್‌.ಎಲ್‌.ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ವತಿಯಿಂದ ಮೈಸೂರಿನಲ್ಲಿ ಎರಡು ದಿನ ಆಯೋಜಿಸಿರುವ ‘ಎಸ್.ಎಲ್‌.ಭೈರಪ್ಪ ಸಾಹಿತ್ಯೋತ್ಸವ’ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಇಂಗ್ಲಿಷ್‌ ಶಿಕ್ಷಣ ನೀಡುವ ಬ್ರಿಟಿಷರ ತೀರ್ಮಾನವನ್ನು ನಾವು ಒಪ್ಪಿಕೊಂಡೆವು. ಆಗ ನಮ್ಮ ಬರಹಗಾರರಲ್ಲಿ ಕೀಳರಿಮೆ ಮೂಡಿತು. ಪಶ್ಚಿಮಕ್ಕೆ ಎಷ್ಟರಮಟ್ಟಿಗೆ ಶರಣಾಗಿದ್ದೆವು ಎಂದರೆ ನಮ್ಮ ಅಸ್ಮಿತೆಯನ್ನೇ ಕಳೆದುಕೊಂಡಿದ್ದೆವು. ಆ ಸಂದರ್ಭದಲ್ಲಿ ಭೈರಪ್ಪ ಅವರಿಂದ ವಂಶವೃಕ್ಷ ಕಾದಂಬರಿ ಮೂಡಿಬಂದಿತು ಎಂದು ನೆನಪಿಸಿಕೊಂಡರು.

‘ವಂಶವೃಕ್ಷ ಕಾದಂಬರಿಯನ್ನು ಉಪನಿಷತ್ತಿಗೆ ಹೋಲಿಸಬಹುದು. ಅದನ್ನು ಬಹಳ ಗಟ್ಟಿಯಾಗಿ ಬರೆದಿದ್ದಾರೆ. ಆ ಕಾದಂಬರಿ ಆಧಾರಿತ ಚಲನಚಿತ್ರಕ್ಕೆ ಟೈಟಲ್‌ ಸಾಂಗ್‌ ಬರೆಯುವ ಅವಕಾಶ ದೊರೆತದ್ದು ನನ್ನ ಸುದೈವ’ ಎಂದರು.

ಭಾಷೆಯ ಬಗ್ಗೆ ಭೈರಪ್ಪ ತೀವ್ರವಾದ ಕಾಳಜಿ ಹೊಂದಿದ್ದಾರೆ. ನಮ್ಮಂತಹ ತಜ್ಞರು ಯಾರೂ ಇಲ್ಲ ಎಂಬ ಭಾವನೆ ಕೆಲವು ರಾಜಕಾರಣಿಗಳಿಗೆ ಬಂದುಬಿಟ್ಟಿದೆ. ಆದ್ದರಿಂದ ರಾಜಕಾರಣಿಗಳ ಮುಂದೆ ಭೈರಪ್ಪ ಅವರಂಥವರು ಮರೆಯಾಗುವರು. ಆದರೆ ಬಲುದೊಡ್ಡ ಓದುವ ವರ್ಗ ಹೊಂದಿರುವ ಅವರಿಗೆ ಒಂದಲ್ಲ ಒಂದು ದಿನ ತಜ್ಞತೆ ತೋರಿಸಲು ಅವಕಾಶ ಲಭಿಸಲಿದೆ ಎಂದು ಹೇಳಿದರು.

ಸಾಹಿತ್ಯಾಸಕ್ತರ ಕಲರವ: ಕಲಾಮಂದಿರದಲ್ಲಿ ಶನಿವಾರ ದಿನವಿಡೀ ಭೈರಪ್ಪ ಅವರ ಸಾಹಿತ್ಯದ ಕುರಿತು ಭಾಷಣ, ಸಂವಾದ, ಸಂದರ್ಶನ, ನಾಟಕ ಕಾರ್ಯಕ್ರಮಗಳು ನಡೆದವು. ಅವರ ನಿಲುವು, ಸಿದ್ಧಾಂತ, ಕಾದಂಬರಿಗಳ ವಸ್ತುವಿನ ಬಗ್ಗೆ ನಡೆದ ಚರ್ಚೆಗಳು ನೆರೆದಿದ್ದ ಸಾಹಿತ್ಯಾಸಕ್ತರ ಮನತಣಿಸಿತು.

ಭೈರಪ್ಪ ಅವರ ಜತೆಗಿನ ಸಂದರ್ಶನಗಳ ಸಂಕಲನ ‘ಚಿಂತನ ಮಂಥನ’ ಪುಸ್ತಕವನ್ನು ಲೇಖಕ ಪ್ರಧಾನ ಗುರುದತ್ತ ಬಿಡುಗಡೆ ಮಾಡಿದರು. ಪುಣೆಯ ಲೇಖಕಿ ಶೆಫಾಲಿ ವೈದ್ಯ, ಚಲನಚಿತ್ರ ನಿರ್ದೇಶಕ ಪಿ.ಶೇಷಾದ್ರಿ, ಲೇಖಕ ಕೃಷ್ಣೇಗೌಡ, ಸಾಹಿತಿ ಶತಾವಧಾನಿ ಆರ್‌.ಗಣೇಶ್, ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ.ಜಿ.ಎಲ್‌.ಶೇಖರ್‌ ಪಾಲ್ಗೊಂಡಿದ್ದರು.

‘ಇಡೀ ಜನಾಂಗದ ಕಣ್ತೆರೆಸಿದ ಸಾಹಿತಿ’

ಲೇಖಕ ಡಾ. ಪ್ರಧಾನ ಗುರುದತ್ತ ಮಾತನಾಡಿ, ‘ನಾನು ಮತ್ತು ಭೈರಪ್ಪ ಇತ್ತೀಚೆಗೆ ಕೇರಳ ಪ್ರವಾಸಕ್ಕೆ ತೆರಳಿದ್ದೆವು. ಭಾರತದ ಬಹುತೇಕ ಎಲ್ಲ ಭಾಷೆಗಳಿಗೂ ಭೈರಪ್ಪ ಕೃತಿಗಳು ಭಾಷಾಂತರ ಆಗಿವೆ. ಆದರೆ ಮಲಯಾಳಂ ಭಾಷೆಗೆ ತಡವಾಗಿ ಏಕೆ ಆಯಿತು ಎಂಬುದನ್ನು ಅಲ್ಲಿಯ ಲೇಖಕರಲ್ಲಿ ಕೇಳಿದೆವು.

‘ಅದಕ್ಕೆ ಅವರು, ಇಲ್ಲಿಗೆ ಬಂದಿದ್ದ ಕರ್ನಾಟಕದ ಕೆಲವು ಬುದ್ಧಿಜೀವಿಗಳು ಭೈರಪ್ಪ ಅವರು ಬಲಪಂಥೀಯ ಲೇಖಕ, ಹಿಂದುತ್ವದ ಪ್ರತಿಪಾದಕರು, ಅವರ ಕೃತಿಗಳನ್ನು ಮಲಯಾಳಂಗೆ ಭಾಷಾಂತರಿಸುವುದು ಬೇಡ ಎಂದಿದ್ದರು. ಆದರೆ ಪರ್ವ ಮತ್ತು ಆವರಣ ಕಾದಂಬರಿಗಳು ಭಾಷಾಂತರಗೊಂಡ ಬಳಿಕ ಇಲ್ಲಿನ ಸಮಾಜದಲ್ಲಿ ಬದಲಾವಣೆ ಉಂಟಾಗಿದೆ ಎಂದು ಉತ್ತರಿಸಿದರು. ಆದ್ದರಿಂದ ಭೈರಪ್ಪ ಅವರನ್ನು ಒಂದು ಜನಾಂಗದ ಕಣ್ತೆರಿಸಿದ ಸಾಹಿತಿ ಎನ್ನಬಹುದು’ ಎಂದರು.

* ವ್ಯಾಸ, ವಾಲ್ಮೀಕಿ ಅವರು ಅನುಭವಿಸಿದಂತಹ ಜನಪ್ರಿಯತೆಯನ್ನು ಭೈರಪ್ಪ ಅನುಭವಿಸಿದ್ದಾರೆ

-ಚಂದ್ರಶೇಖರ ಕಂಬಾರ, ಸಾಹಿತಿ

*ಭೈರಪ್ಪ ಅವರ ಸಾಹಿತ್ಯದ ಶರೀರ ಕನ್ನಡದ್ದು. ಆದರೆ ಆತ್ಮ ಮಾತಿಗೆ ಮೀರಿದ ರಸಭಾವಗಳದು.

-ಶತಾವಧಾನಿ ಆರ್‌.ಗಣೇಶ್, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT