ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಟ್ ಕಾಯಿನ್ ಪ್ರಕರಣ: ಶ್ರೀಧರ್‌ ಪೂಜಾರ್‌ ಬಂಧಿಸದಂತೆ ಹೈಕೋರ್ಟ್‌ ಆದೇಶ

Published 7 ಜೂನ್ 2024, 0:43 IST
Last Updated 7 ಜೂನ್ 2024, 0:43 IST
ಅಕ್ಷರ ಗಾತ್ರ

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡು ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ ವರ್ಡ್‌ ಬದಲಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಶ್ರೀಧರ್ ಕೆ.ಪೂಜಾರ್‌ ಅವರನ್ನು ಮುಂದಿನ ವಿಚಾರಣೆವರೆಗೆ ಬಂಧಿಸದಂತೆ ಹೈಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಶ್ರೀಧರ್‌ ಕೆ.ಪೂಜಾರ್‌ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಟರ್‌–2 ಬಿ.ಎನ್‌.ಜಗದೀಶ್‌, ‘ಪೂಜಾರ್‌ಗೆ ಕಳೆದ ತಿಂಗಳ ಮೇ 2ರಂದು ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ರಾಜ್ಯ ಸರ್ಕಾರ ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

‘ಪೂಜಾರ್‌ ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಿ, ಇಡೀ ತನಿಖೆಯ ದಾರಿ ತಪ್ಪಿಸಿದ್ದಾರೆ. ಈ ಪ್ರಕರಣದಲ್ಲಿ ಕೆಲವು ಪರಿಕರಗಳನ್ನು ಜಪ್ತಿ ಮಾಡಬೇಕಿದೆ. ವಾಟ್ಸ್‌ ಆ್ಯಪ್‌ ಸಂವಹನ ಪತ್ತೆಯಾದ ಮೇಲೆ ಶ್ರೀಧರ್ ಪೂಜಾರ್‌ ಮತ್ತು ಇತರೆ ಅಧಿಕಾರಿಗಳು ಎಸಗಿರುವ ಅಪರಾಧ ಬಹಿರಂಗವಾಗಿದೆ. ಹಾಗಾಗಿ, ಮಧ್ಯಂತರ ರಕ್ಷಣೆ ನೀಡುವುದು ಸೂಕ್ತವಲ್ಲ’ ಎಂದು ಪ್ರತಿಪಾದಿಸಿದರು.

ಇದನ್ನು ಅಲ್ಲಗಳೆದ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌, ‘ಹೈಕೋರ್ಟ್‌ ಆದೇಶದಲ್ಲಿ; ಪೂಜಾರ್‌ ಸಲ್ಲಿಸುವ ಜಾಮೀನು ಅರ್ಜಿಗೆ ಪ್ರಾಸಿಕ್ಯೂಷನ್‌ ವಿರೋಧಿಸಬಾರದು ಎಂಬ ಷರತ್ತು ವಿಧಿಸಲಾಗಿತ್ತು. ಇದಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಪೂಜಾರ್‌ ಹೊಸದಾಗಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬಹುದು ಎಂದಿತ್ತು. ಅದರಂತೆ ಹೊಸದಾಗಿ ನಿರೀಕ್ಷಣಾ ಜಾಮೀನು ಕೋರಲಾಗಿದೆ. ಒಂದೊಮ್ಮೆ ಪೂಜಾರ್‌ ಬಂಧನವಾದರೆ ಅವರ ಇಡೀ ವೃತ್ತಿ ಬದುಕು ನಾಶವಾಗಲಿದೆ’ ಎಂದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರನ್ನು ಬಂಧಿಸದಂತೆ ಆದೇಶಿಸಿತು. ಆಕ್ಷೇಪಣೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್‌ಗೆ ಸೂಚಿಸಿ ವಿಚಾರಣೆಯನ್ನು ಇದೇ 12ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT