ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮೀಜಿಗಳ ಜೊತೆ ನಡ್ಡಾ ‘ಸಂತ ಮಂಥನ’

Last Updated 20 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೋಮವಾರ ಪೇಜಾವರ ಮಠದಲ್ಲಿ ಹಲವು ಮಠಾಧೀಶರೊಂದಿಗೆ ‘ಸಂತ ಮಂಥನ’ ಸೌಹಾರ್ದ ಸಮಾಲೋಚನೆ ನಡೆಸಿದರು. ಈ ಸಂದರ್ಭ ಸ್ವಾಮೀಜಿಗಳ ನಿಯೋಗ ನಡ್ಡಾ ಅವರಿಗೆ 10 ಅಪೇಕ್ಷೆಗಳ ಮನವಿ ಸಲ್ಲಿಸಿತು.

‘ದೇಶದ್ರೋಹಿ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಮಟ್ಟಹಾಕಲು ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಿಗೆ ಅನ್ವಯಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಘಟಕ ಆರಂಭಿಸಬೇಕು. ಸನಾತನ ಧರ್ಮ‌, ಸಂಸ್ಕೃತಿ ಸದ್ವಿಚಾರಗಳಿಗೆ ಸದಾ ಮನ್ನಣೆ ನೀಡಬೇಕು, ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕ್ರಮ ಕೈಗೊಳ್ಳಬೇಕು, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಆದ್ಯತೆ ನೀಡಬೇಕು, ಕರಾವಳಿಯ ಪ್ರಾಕೃತಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪನ್ಮೂಲಗಳಿಗೆ ಹಾನಿಯಾಗದಂತೆ ಔದ್ಯಮಿಕ, ಔದ್ಯೋಗಿಕ ಪ್ರಗತಿಗೆ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು.

ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆ ಸ್ಥಾನಮಾನ ನೀಡಬೇಕು, ಗೋ ಹತ್ಯಾ ನಿಷೇಧ ಕಾನೂನು ಕಟ್ಟುನಿಟ್ಟಿನ ಜಾರಿಯ ಜೊತೆಗೆ ಗೋ ಸಂರಕ್ಷಣೆಗೆ ಪೂರಕ ಯೋಜನೆಗಳಿಗೆ ನೆರವು ನೀಡಬೇಕು, ಭ್ರಷ್ಟಾಚಾರ ಮುಕ್ತ, ಸ್ವಚ್ಛ, ಪಾರದರ್ಶಕ ಆಡಳಿತ ನೀಡಬೇಕು ಮತ್ತು ದೇವಸ್ಥಾನಗಳ ಭೂಮಿ ಅತಿಕ್ರಮಣ ತಡೆಗೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ನಡ್ಡಾ, ‘ಸಂತರೊಂದಿಗಿನ ಸಮಾಲೋಚನೆ ಸಂತಸ ತಂದಿದೆ’ ಎಂದರು. ಪೇಜಾವರ ಮಠದ
ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನಡ್ಡಾ ಅವರಿಗೆ ಶಾಲು, ಗೋಪಾಲಕೃಷ್ಣನ ಕಂಚಿನ ವಿಗ್ರಹ ನೀಡಿ ಗೌರವಿಸಿದರು.

ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಮಂಗಳೂರು ಚಿತ್ರಾಪುರ ಮಠ ವಿದ್ಯೇಂದ್ರ ಸ್ವಾಮೀಜಿ, ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮಂಗಳೂರಿನ ಶ್ರೀ ಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ, ಆನೆಗೊಂದಿ ಸರಸ್ವತಿ ಪೀಠಂನ ಕಾಳ ಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಮಂಗಳೂರು ಗುರುಪುರ ಕ್ಷೇತ್ರದ ರಾಜಶೇಖರಾನಂದ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT