ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Assembly | ಕೇಂದ್ರದ ವಿರುದ್ಧ ನಿರ್ಣಯ: ವಾಪಸ್‌ಗೆ ಬಿಜೆಪಿ ಪಟ್ಟು

ವಿಧಾನಸಭೆಯಲ್ಲಿ ಧರಣಿ: ಕಲಾಪ ಸೋಮವಾರಕ್ಕೆ ಮುದೂಡಿಕೆ
Published 23 ಫೆಬ್ರುವರಿ 2024, 15:34 IST
Last Updated 23 ಫೆಬ್ರುವರಿ 2024, 15:34 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಗುರುವಾರ ಕೈಗೊಂಡಿರುವ ನಿರ್ಣಯವನ್ನು ವಾಪಸ್‌ ಪಡೆಯುವಂತೆ ಪಟ್ಟುಹಿಡಿದು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಶುಕ್ರವಾರ ಧರಣಿ ನಡೆಸಿದ್ದರಿಂದ ಕಲಾಪ ಕೆಲ ಕಾಲವಷ್ಟೇ ನಡೆಯಿತು. ಗದ್ದಲ ಹೆಚ್ಚಾದ ಕಾರಣ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ತೆರಿಗೆ ಪಾಲಿನ ಸಮಾನ ಹಂಚಿಕೆ ಮತ್ತು ರೈತರ ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವಂತೆ ಆಗ್ರಹಿಸಿ ಗುರುವಾರ ನಿರ್ಣಯ ಅಂಗೀಕರಿಸಲಾಗಿತ್ತು. ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಆಗ ಆರಂಭಿಸಿದ್ದ ಧರಣಿಯನ್ನು , ಶುಕ್ರವಾರವೂ ಕಲಾಪ ಆರಂಭವಾಗುತ್ತಿದ್ದಂತೆ ಮುಂದುವರಿಸಿದರು.

‘ಕಲಾಪ ಸಲಹಾ ಸಮಿತಿಯಲ್ಲಿ ಮಾಹಿತಿಯನ್ನೇ ಕೊಡದೆ ಕದ್ದು ಮುಚ್ಚಿ ನಿರ್ಣಯ ಮಂಡಿಸುವ ಅಗತ್ಯವೇನಿತ್ತು? ಸರ್ಕಾರದ ನಡವಳಿಕೆಯಿಂದ ಸದನಕ್ಕೆ ಅಗೌರವವಾಗಿದೆ. ನಿರ್ಣಯಗಳನ್ನು ವಾಪಸ್‌ ಪಡೆಯಿರಿ’ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆಗ್ರಹಿಸಿದರು.

‘ರಾಜ್ಯದ ಜನರ ಹಿತ ರಕ್ಷಣೆಗಾಗಿ ನಿರ್ಣಯ ಅಂಗೀಕರಿಸಿದ್ದೇವೆ. ಎಲ್ಲವೂ ಕಾನೂನು, ನಿಯಮಗಳ ಪ್ರಕಾರವೇ ನಡೆದಿದೆ. ನಿರ್ಣಯ ಅಂಗೀಕರಿಸಲು ನಿಮ್ಮ ಅಪ್ಪಣೆ ಬೇಕಿಲ್ಲ’ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ ತಿರುಗೇಟು ನೀಡಿದರು.

ಧರಣಿ ಕೈಬಿಟ್ಟು ಸ್ವಸ್ಥಾನಕ್ಕೆ ಮರಳುವಂತೆ ಸಭಾಧ್ಯಕ್ಷ ಯು.ಟಿ. ಖಾದರ್‌ ವಿರೋಧ ಪಕ್ಷಗಳ ಸದಸ್ಯರಲ್ಲಿ ಮನವಿ ಮಾಡಿದರು. ಆದರೆ, ಅವರು ಮನವೊಲಿಕೆಗೆ ಮಣಿಯಲಿಲ್ಲ. ಗದ್ದಲ ಹೆಚ್ಚಾಗುತ್ತಿದ್ದಂತೆಯೇ ಹತ್ತು ನಿಮಿಷಗಳ ಕಾಲ ಕಲಾಪ ಮುಂದೂಡಿದ ಸ್ಪೀಕರ್‌, ತಮ್ಮ ಕಚೇರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪ್ರಮುಖರ ಜತೆ ಸಂಧಾನ ಸಭೆ ನಡೆಸಿದರು. ಸಂಧಾನ ಸಭೆಯೂ ವಿಫಲವಾಯಿತು. ಪುನಃ ಕಲಾಪ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಧರಣಿ ಮುಂದುವರಿಸಿದರು.

‘ತೆರಿಗೆ ಪಾಲಿನ ಹಂಚಿಕೆ ವಿಚಾರದಲ್ಲಿ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಮಧ್ಯೆ ಸಂಘರ್ಷ ಹೊಸದಲ್ಲ. ಹಿಂದೆಯೂ ಇತ್ತು. 25 ವರ್ಷಗಳ ಕಾಲ ಶೇಕಡ 20ರಷ್ಟು ಪಾಲು ಮಾತ್ರ ರಾಜ್ಯಗಳಿಗೆ ಸಿಗುತ್ತಿತ್ತು. ಶೇ 30ರಿಂದ ಶೇ 40ಕ್ಕೆ ಹೆಚ್ಚಳ ಮಾಡುವ ಪ್ರಸ್ತಾವಕ್ಕೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಒಪ್ಪಿರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾದ ಕೆಲವೇ ತಿಂಗಳಲ್ಲಿ ಒಪ್ಪಿಗೆ ದೊರಕಿದೆ’ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಹೇಳಿದರು.

ಕೇಂದ್ರ ಸರ್ಕಾರವನ್ನು ಬೆಂಬಲಿಸಿ ನಿರ್ಣಯ ಮಂಡಿಸಲು ಅವಕಾಶ ನೀಡುವಂತೆ ಅಶೋಕ ಮನವಿ ಮಾಡಿದರು. ಸ್ಪೀಕರ್‌ ಒಪ್ಪಲಿಲ್ಲ. ಗದ್ದಲದ ಮಧ್ಯೆಯೇ ‘ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ಮಸೂದೆ’ ಮತ್ತು ‘ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆಗಳಿಗೆ ಅಂಗೀಕಾರ ನೀಡಲಾಯಿತು. ಎರಡು ವರದಿಗಳ ಮಂಡನೆಯೂ ಆಯಿತು.

ಕಾನೂನು ಸಚಿವರು ಅನರ್ಹತಾ ನಿವಾರಣಾ ಮಸೂದೆ ಕುರಿತು ವಿವರಿಸುತ್ತಿರುವಾಗಲೇ ಅಶೋಕ ಅವರು ಕೇಂದ್ರದ ಪರವಾಗಿ ತಾವು ಸಿದ್ಧಪಡಿಸಿಕೊಂಡು ಬಂದಿದ್ದ ನಿರ್ಣಯದ ಕರಡನ್ನು ಓದಿದರು. ಬೆಂಬಲಿಸಿ ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಗದ್ದಲ ಜೋರಾಗುತ್ತಿದ್ದಂತೆಯೇ ಸಭಾಧ್ಯಕ್ಷರು ಕಲಾಪವನ್ನು ಸೋಮವಾರ ಬೆಳಿಗ್ಗೆ 9.30ಕ್ಕೆ ಮುಂದೂಡಿದರು.

ಅಧಿವೇಶನ ಒಂದು ದಿನ ವಿಸ್ತರಣೆ

ವಿಧಾನಸಭೆಯ ಅಧಿವೇಶನವನ್ನು ಒಂದು ದಿನ ವಿಸ್ತರಿಸಲಾಗಿದೆ. ಬಜೆಟ್‌ ಅಧಿವೇಶನ ಸೋಮವಾರ ಮುಕ್ತಾಯವಾಗಲಿದೆ. ಬಜೆಟ್‌ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಉತ್ತರ ನೀಡಬೇಕಿತ್ತು. ಬಳಿಕ 2024–25ರ ಪೂರ್ಣ ಬಜೆಟ್‌ ಮತ್ತು 2023–24ರ ಕೊನೆಯ ಕಂತಿನ ಪೂರಕ ಅಂದಾಜುಗಳಿಗೆ ಸದನದ ಒಪ್ಪಿಗೆ ಪಡೆಯಬೇಕಿತ್ತು. ಎರಡೂ ಬಾಕಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT