ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Fact Check ಹೆಸರಿನಲ್ಲಿ ಮಾಧ್ಯಮಗಳಿಗೆ ಮೂಗುದಾರ: ಭಾಸ್ಕರ್‌ ರಾವ್‌

Published 15 ಸೆಪ್ಟೆಂಬರ್ 2023, 10:40 IST
Last Updated 15 ಸೆಪ್ಟೆಂಬರ್ 2023, 10:40 IST
ಅಕ್ಷರ ಗಾತ್ರ

ಬೆಂಗಳೂರು: ಫ್ಯಾಕ್ಟ್‌ ಚೆಕ್‌ ಹೆಸರಿನಲ್ಲಿ ಮಾಧ್ಯಮಗಳಿಗೆ ಮೂಗು ದಾರ ಹಾಕಲು ಹೊರಟಿರುವ ಪ್ರಿಯಾಂಕ್‌ ಖರ್ಗೆ ಗೃಹ ಸಚಿವರ ಸ್ಥಾನವನ್ನು ಹೈಜಾಕ್‌ ಮಾಡಿದ್ದಾರೆ. ಹೀಗಾಗಿ ಗೃಹ ಸಚಿವರು ಯಾರು ಎಂಬ ಗೊಂದಲ ಸೃಷ್ಟಿಯಾಗಿದೆ ಎಂದು ಮಾಜಿ ಪೊಲೀಸ್‌ ಅಧಿಕಾರಿ, ಬಿಜೆಪಿ ನಾಯಕ ಭಾಸ್ಕರ ರಾವ್‌ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫ್ಯಾಕ್ಟ್‌ಚೆಕ್‌ ಯೂನಿಟ್‌ ಮಾಡುವ ಮೂಲಕ ಅವರು ಪೊಲೀಸ್‌ ಇಲಾಖೆಯನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದರು.

ಒಂದು ಕಡೆ ಸುದ್ದಿವಾಹಿನಿಗಳ ನಿರೂಪಕರ ಜೊತೆ ಮಾತನಾಡುವುದಿಲ್ಲ. ಅವರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿಷ್ಕಾರ ಹಾಕಿದ್ದಾರೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಅಲ್ಲವೇ? ಮೊಹಬ್ಬತ್‌ ಕಿ ದುಖಾನ್‌ ಒಳಗೆ ಇವರನ್ನೇಕೆ ಸೇರಿಸುತ್ತಿಲ್ಲ? ತುರ್ತುಪರಿಸ್ಥಿಯಲ್ಲಿ ಪತ್ರಕರ್ತರ ಮೇಲೆ ನಿಯಂತ್ರಣ ಹೇರಿದಂತೆ ಎಂದೂ ಟೀಕಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ ಮತ್ತು ಅದರ ಕಾರ್ಯಕ್ರಮಗಳನ್ನು ಟೀಕಿಸುವವರು ಮತ್ತು ಪತ್ರಕರ್ತರ ಮೇಲೆ ಕೇಸು ದಾಖಲಿಸಲಾಗುತ್ತಿದೆ. ಇದು ಸ್ವಾತಂತ್ರ್ಯದ ಹರಣ. ಸರ್ಕಾರವು ಎಫ್‌ಐಆರ್‌ ಮೂಲಕ ಬೊಗಳುವ ನಾಯಿಯ ರೀತಿಯಲ್ಲಿ ಹೆದರಿಸಲು ಮುಂದಾಗಿದೆ. ಇದರ ವಿಚಾರದಲ್ಲಿ ತನಿಖೆ ಮಾಡಿ, ಸಾಕ್ಷ್ಯ ಕೊಟ್ಟು ಆರೋಪ ಪಟ್ಟಿ ದಾಖಲಿಸಲು ನಿಮಗೆ ಸಾಧ್ಯವಿಲ್ಲ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಸನಾತನ ಧರ್ಮದ ಅವಹೇಳನವನ್ನು ಬೆಂಬಲಿಸಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಹೇಳಿಕೆ ನೀಡಿರುವುದು ಸಂವಿಧಾನದ ಮೂಲತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ಹೇಳಿದ್ದಾರೆ.

ಉದಯನಿಧಿ ಸ್ಟಾಲಿನ್‌ ಅವರ ಸನಾತನ ಧರ್ಮದ ಅವಹೇಳನದ ಹೇಳಿಕೆಗೆ ಬೆಂಬಲ ಇದೆ ಎಂದು ಪ್ರಿಯಾಂಕ್‌ ಹೇಳಿದ್ದಾರೆ. ನಿತ್ಯ ಜೀವನದಲ್ಲಿ ಅನ್ನ, ಶಿಕ್ಷಣ, ಸಂಸ್ಕಾರ ಮತ್ತು ಅಧ್ಯಾತ್ಮ ಜ್ಞಾನವನ್ನು ನೀಡುವ ಎಷ್ಟೋ ಮಠಗಳಿವೆ, ಇವರ ಹೇಳಿಕೆ ಅವುಗಳಿಗೆ ಅವಹೇಳನ ಮಾಡುವಂತಹದ್ದು. ಹಿಂದೂ ಶ್ರದ್ಧಾಳುಗಳನ್ನು ಅವಮಾನ ಮಾಡುವಂತೆ ಹೇಳಿಕೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದರು.

ಸಂವಿಧಾನದ ಮುನ್ನಡಿಯು ಭ್ರಾತೃತ್ವ ಮತ್ತು ಸಮಗ್ರತೆಗೆ ಒತ್ತು ನೀಡುತ್ತದೆ. ವಿಧಿ 19(2) ಸಭ್ಯತೆ, ನೈತಿಕತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಹಿಂಸಾಚಾರವನ್ನು ತಪ್ಪಿಸುವ ನಿಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹಾಕುತ್ತದೆ. ಆದರೆ, ಪ್ರಿಯಾಂಕ್‌ ಸನಾತನ ಧರ್ಮದ ಬಗ್ಗೆ ಯಾವುದೇ ಹಿಡಿತ ಇಲ್ಲದೆ ಮಾತನಾಡುತ್ತಿದ್ದಾರೆ ಎಂದು ರವಿಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT