ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ಜೆಡಿಎಸ್ ಜತೆ ಮೈತ್ರಿ ಖಚಿತ, ಈಗಾಗಲೇ 4 ಕ್ಷೇತ್ರ ಅಂತಿಮ: BSY

Published 8 ಸೆಪ್ಟೆಂಬರ್ 2023, 10:45 IST
Last Updated 8 ಸೆಪ್ಟೆಂಬರ್ 2023, 10:45 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭಾ ಚುನಾವಣೆಗೆ ಬಿಜೆಪಿ– ಜೆಡಿಎಸ್‌ ಮೈತ್ರಿ ಬಗ್ಗೆ ನನಗೆ ಒಪ್ಪಿಗೆ ಇದೆ. ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಶಕ್ತಿ ಬರಲಿದೆ. ಸೀಟು ಹಂಚಿಕೆಯ ವಿಚಾರದಲ್ಲಿ ಪಕ್ಷದ ವರಿಷ್ಠರ ನಿರ್ಧಾರವೇ ಅಂತಿಮ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಮಾತುಕತೆ ಪೂರ್ಣ ಆದ ಮೇಲೆ ದೇವೇಗೌಡರನ್ನು ಭೇಟಿ ಮಾಡುತ್ತೇನೆ. ಅವರು ಈಗಾಗಲೇ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಜತೆ ಮಾತುಕತೆ ನಡೆಸಿದ್ದಾರೆ. ಮೈತ್ರಿಯಿಂದ ಒಟ್ಟು 26 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ’ ಎಂದರು.

ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಜೊತೆ ಎಚ್‌.ಡಿ. ದೇವೇಗೌಡ ಅವರು ಮಾತುಕತೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಏತನ್ಮಧ್ಯೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಎಂಎಲ್‌ಸಿ ಜಗದೀಶ್ ಶೆಟ್ಟರ್, ಎರಡು ಅಸಹಾಯಕ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ ಎಂದು ವ್ಯಂಗ್ಯವಾಡಿದ್ದಾರೆ.

‘ಈ ಮೈತ್ರಿ ಮಹತ್ವದ್ದು’

‘ಈ ಮೈತ್ರಿ ಮಾತುಕತೆ ಬಹಳ ಅವಶ್ಯಕ ಮತ್ತು ಮಹತ್ವಾದ್ದಾಗಿದೆ. ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಡಲು ವಿರೋಧಪಕ್ಷಗಳು ಒಂದಾಗುವುದು ಅತಿ ಮುಖ್ಯ. ಆದ್ದರಿಂದ ನಾವು ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಹೋರಾಡುತ್ತೇವೆ. ಮೈತ್ರಿ ಸ್ಥಾನಗಳ ಬಗ್ಗೆ ನಮ್ಮ ಹೈಕಮಾಂಡ್‌ ಮುಂದೆ ತೀರ್ಮಾನ ಮಾಡುತ್ತದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಜೆಡಿಎಸ್ –ಬಿಜೆಪಿ ಮೈತ್ರಿಗೆ ಸಹಮತ: ಪ್ರತಾಪ ಸಿಂಹ

‘ಜೆಡಿಎಸ್‌–ಬಿಜೆಪಿ ಮೈತ್ರಿಗೆ ನಮ್ಮ ಸಹಮತವಿದೆ’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಮೈಸೂರಿನಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಬಿ.ಎಸ್. ಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕರು. ಏಕಾಂಗಿಯಾಗಿ ರಾಜ್ಯ ಸುತ್ತಿ ಪಕ್ಷ ಕಟ್ಟಿದ್ದಾರೆ. ಮೈತ್ರಿ ಬಗ್ಗೆ ಅವರೇ ಹೇಳಿಕೆ ನೀಡಿದ್ದಾರೆಂದರೆ ಅದಕ್ಕೆ ನಮ್ಮ ಸಹಮತವಿದೆ’ ಎಂದಿದ್ದಾರೆ.

‘ರಾಜ್ಯದಲ್ಲಿ ಎರಡು ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ಕೇಂದ್ರದ ನಾಯಕರೊಂದಿಗೆ ಸಮಾಲೋಚಿಸಿ ಈ ನಿರ್ಧಾರಕ್ಕೆ ಬಂದಿರುತ್ತಾರೆ. ಪಕ್ಷದ ಹಿತದೃಷ್ಟಿಯಿಂದಲೇ ತೀರ್ಮಾನ ಕೈಗೊಂಡಿರುತ್ತಾರೆ’ ಎಂದು ಹೇಳಿದ್ದಾರೆ.

ಇವನ್ನೂ ಓದಿ...

ಸಂಘರ್ಷವೇ ಆಗಲಿ, ಮಹಿಷ ದಸರೆಗೆ ಅವಕಾಶ ಕೊಡುವುದಿಲ್ಲ: ಸಂಸದ ಪ್ರತಾಪ ಸಿಂಹ

Lok Sabha Election 2024 | ಜೆಡಿಎಸ್‌ – ಬಿಜೆಪಿ ಮೈತ್ರಿಗೆ ಸಹಮತ: ಪ್ರತಾಪ ಸಿಂಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT