ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ–ಜೆಡಿಎಸ್‌ ಅಡ್ಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಅರ್ಧಕ್ಕೆ ಮೊಟಕು

Published 21 ಫೆಬ್ರುವರಿ 2024, 23:30 IST
Last Updated 21 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ವಿರೋಧ ಪಕ್ಷಗಳ ನಿರಂತರ ಅಡಚಣೆಯಿಂದ ಅಸಮಾಧಾನಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ನೀಡಬೇಕಿದ್ದ ಉತ್ತರವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.

‘ತಾವು ಆಡಿದ ಕೆಲ ಮಾತುಗಳಿಗೆ ಸ್ಪಷ್ಟೀಕರಣ ನೀಡಬೇಕು. ತಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ವಿಧಾನ ಪರಿಷತ್‌ನಲ್ಲಿ ಬುಧವಾರ ಬಿಜೆಪಿ–ಕಾಂಗ್ರೆಸ್‌ ಸದಸ್ಯರು ಪಟ್ಟುಹಿಡಿದರು. ಅವರ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದ ಸಿದ್ದರಾಮಯ್ಯ ಮೌನಕ್ಕೆ ಶರಣರಾದರು. ಇದರಿಂದ ಕೆರಳಿದ ವಿರೋಧ ಪಕ್ಷಗಳ ಸದಸ್ಯರು ಕಾಂಗ್ರೆಸ್‌ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಸದಸ್ಯರು ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ‘ನಮ್ಮ ತೆರಿಗೆ ನಮ್ಮ ಹಕ್ಕು’ ಎಂದು ಘೋಷಣೆ ಮೊಳಗಿಸಿದರು. ಗದ್ದಲದ ಮಧ್ಯೆಯೇ ವಂದನಾ ನಿರ್ಣಯವನ್ನು ಸಭಾಪತಿ ಬಸವರಾಜ ಹೊರಟ್ಟಿ ಮತಕ್ಕೆ ಹಾಕಿದರು. ಇದರಿಂದ ಆಕ್ರೋಶಗೊಂಡ ಜೆಡಿಎಸ್‌–ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

ಬೆಳಿಗ್ಗೆ ಕಲಾಪ ಆರಂಭವಾಗುತ್ತಿದಂತೆ ಮಾತು ಆರಂಭಿಸಿದ ಸಿದ್ದರಾಮಯ್ಯ, ಬಿಜೆಪಿಯೇತರ ರಾಜ್ಯಗಳ ರಾಜ್ಯಪಾಲರ ಕಾರ್ಯ ವೈಖರಿಯನ್ನು ಖಂಡಿಸುತ್ತಾ, ಕರ್ನಾಟಕದ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರ ನಡೆಯನ್ನು ಶ್ಲಾಘಿಸಿದರು. ರಾಜ್ಯದ ಮುಖ್ಯಸ್ಥರಾಗಿ ಗೆಹಲೋತ್‌ ಅವರು ಸಂವಿಧಾನಿಕ ಸ್ಥಾನಮಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದಾರೆ. ಇತಿಹಾಸದಲ್ಲಿ ಅವರ ನಡವಳಿಕೆ ಮಾದರಿಯಾಗಿ ಉಳಿಯಲಿದೆ ಎಂದರು.

‘ಜೆಡಿಎಸ್‌ನ ಭೋಜೇಗೌಡ ಜಾತ್ಯತೀತ ಮನೋಭಾವದವರು. ಬಿಜೆಪಿ ಜತೆ ಸೇರಿ ಕೋಮುವಾದಿಯಾಗುತ್ತಿದ್ದಾರೆ. ಜೆಡಿಎಸ್‌ ಈಗ ಜೆಡಿಸಿ (ಕಮ್ಯುನಲ್‌) ಆಗಿದೆ. ಸುಮ್ಮನೆ ಇತ್ತ ಬನ್ನಿ ನಿಮಗೆ ಆ ಜಾಗ (ವಿರೋಧ ಪಕ್ಷದ ಆಸನಗಳು) ಸರಿಹೋಗುವುದಿಲ್ಲ’ ಎಂದು ಆಹ್ವಾನಿಸಿದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್‌. ರವಿಕುಮಾರ್, ಬಿಜೆಪಿಗರು ಕೋಮುವಾದಿಗಳಲ್ಲ, ರಾಷ್ಟ್ರಪ್ರೇಮಿಗಳು ಎಂದರು. ‘ನಾವೇನು ರಾಷ್ಟ್ರಪ್ರೇಮಿಗಳಲ್ಲವಾ? ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ ಮಾಡಿಲ್ಲವಾ? ನಿಮ್ಮ  ಆರ್‌ಎಸ್‌ಎಸ್‌, ವಾಜಪೇಯಿ, ಅಡ್ವಾಣಿ, ಮೋದಿ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರಾ? ಮಹಾತ್ಮ ಗಾಂಧಿ ಸೇರಿದಂತೆ ಸಾವಿರಾರು ತ್ಯಾಗಿಗಳ ನೇತೃತ್ವದಲ್ಲಿ ಕಾಂಗ್ರೆಸ್‌ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ. ನಾವೇ ನಿಜವಾದ ರಾಷ್ಟ್ರ‍ಪ್ರೇಮಿಗಳು’ ಎಂದು ಸಿದ್ದರಾಮಯ್ಯ ಹೇಳಿದರು.

‘ಬಿಜೆಪಿಯ ಶಾಸಕರು, ಸಂಸದರು ರಾಜ್ಯದ ಪಾಲಿಗಾಗಿ ಧ್ವನಿ ಎತ್ತಬೇಕು. ರಾಜ್ಯದ ಪಾಲು ಕೊಡಿಸಲು ಸಹಕರಿಸಬೇಕು. ಕನ್ನಡಿಗರ ಪರ ನಿಂತರೆ ಅಂಥವರಿಗೆ 100 ಕೋಟಿ ನಮಸ್ಕಾರ ಮಾಡುವೆ. ಕೇಂದ್ರದ ನೆರವು ವಿಳಂಬವಾದರೂ, ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಬರಗಾಲದ ತೀವ್ರತೆ ಕಡಿಮೆಯಾಗಿದೆ. ಬಡವರು, ದುರ್ಬಲರು, ರೈತರು, ಶೋಷಿತರ ಬದುಕು ಸುಧಾರಿಸಿದೆ’ ಎಂದರು.

ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಸಚೇತಕ ಎನ್‌.ರವಿಕುಮಾರ್, ಬಿಜೆಪಿಯ ತೇಜಸ್ವಿನಿ ಗೌಡ, ಭಾರತಿ ಶೆಟ್ಟಿ ಮತ್ತಿತರರು ಮೋದಿ, ನಿರ್ಮಲಾ ಸೀತಾರಾಮನ್‌ ಹಾಗೂ ಕೇಂದ್ರ ಸರ್ಕಾರ ಟೀಕಿಸುವುದಕ್ಕೆ ಮುಖ್ಯಮಂತ್ರಿ ರಾಜ್ಯಪಾಲರ ಭಾಷಣ ಬಳಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಷತ್ತಿನ ಬುಧವಾರದ ಕಲಾಪದ ವೇಳೆ ರಾಜ್ಯಪಾಲರ ಭಾಷಣದ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ ಮತ್ತು ಸಂಪಾದಕೀಯವನ್ನು ಓದಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಭಾನಾಯಕ ಎನ್.ಎಸ್. ಬೋಸರಾಜು ಉಪಸ್ಥಿತರಿದ್ದರು
ಪರಿಷತ್ತಿನ ಬುಧವಾರದ ಕಲಾಪದ ವೇಳೆ ರಾಜ್ಯಪಾಲರ ಭಾಷಣದ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ ಮತ್ತು ಸಂಪಾದಕೀಯವನ್ನು ಓದಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಸಭಾನಾಯಕ ಎನ್.ಎಸ್. ಬೋಸರಾಜು ಉಪಸ್ಥಿತರಿದ್ದರು

‘ಒಕ್ಕೂಟ ವ್ಯವಸ್ಥೆಗೆ ಮೋದಿಯವರೇ ಅಪಾಯ’

ನ್ಯಾಯಯುತವಾಗಿ ನೀಡಬೇಕಾದ ರಾಜ್ಯದ ಪಾಲು ನೀಡದೇ ನಿರ್ಲಕ್ಷ್ಯ ಮಾಡುತ್ತಿರುವ ಪ್ರಧಾನಿ ಮೋದಿ ಅವರೇ ಒಕ್ಕೂಟ ವ್ಯವಸ್ಥೆಗೆ ಅಪಾಯ ಎಂದು ಸಿದ್ದರಾಮಯ್ಯ ಟೀಕಿಸಿದರು.

ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು ಹಣಕಾಸು ಆಯೋಗದ ಅನುದಾನ ಬರ ಪರಿಹಾರದ ನೆರವು ನೀಡಲು ಕೇಂದ್ರ ಸರ್ಕಾರ ಸತಾಯಿಸುತ್ತಿದೆ. ರಾಜ್ಯದಿಂದ ಪ್ರತಿ ವರ್ಷ ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ₹4.30 ಲಕ್ಷ ಕೋಟಿ ಸಂದಾಯವಾಗುತ್ತಿದೆ. ರಾಜ್ಯಕ್ಕೆ ಮರಳಿ ಸಿಗುತ್ತಿರುವುದು ಕೇವಲ ಶೇ 13ರಷ್ಟು ಮಾತ್ರ. ಇಂತಹ ಅನ್ಯಾಯ ಪ್ರಶ್ನಿಸಿದರೆ ಪ್ರಧಾನಿ ಮೋದಿ ಅವರು ದೇಶ ವಿಭಜನೆಯ ಮಾತಾಡುತ್ತಾರೆ ಎಂದು ಟೀಕೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನರೇಂದ್ರ ಮೋದಿ ಅವರು ಒಕ್ಕೂಟ ವ್ಯವಸ್ಥೆಯ ಸಹಕಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಅದು ಅವರ ನಡವಳಿಕೆಯಲ್ಲಿ ಕಾಣುತ್ತಿಲ್ಲ. ಅವರೇ ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ‘ಕೇಂದ್ರ ನಮಗೆ ಭಿಕ್ಷೆ ನೀಡುತ್ತಿಲ್ಲ. ರಾಜ್ಯದ ಪಾಲು ಕೊಡಲು ಸಾಧ್ಯವಾಗದಿದ್ದರೆ ಗುಜರಾತ್‌ನಿಂದ ತೆರಿಗೆಯನ್ನೇ ಸಂಗ್ರಹಿಸಬೇಡಿ. ನಮ್ಮ ತೆರಿಗೆ ನಮಗೇ ಬಿಡಿ’ ಎಂದಿದ್ದರು. ಅಂದು ಲಕ್ನೋದಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ್ದ ಅವರು ಯುಪಿಎ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಎಂದು ಹೇಳಿಕೆ ನೀಡಿದ್ದರು. ಈಗ ಕರ್ನಾಟಕ ತನ್ನ ಪಾಲು ಕೇಳುವುದೇ ಒಕ್ಕೂಟ ವ್ಯವಸ್ಥೆ ಅಪಾಯ ಎನ್ನುತ್ತಾರೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT