ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ ನೀಡಿಕೆಯಲ್ಲಿ ತಾರತಮ್ಯ: ಕೇಂದ್ರದ ನಡೆಗೆ ರಾಜ್ಯಪಾಲರ ‘ಕಿಡಿ’

ತೆರಿಗೆ ಹಂಚಿಕೆ ಪಾಲು, ಬರ ಪರಿಹಾರ ನೀಡಿಕೆಯಲ್ಲಿ ತಾರತಮ್ಯ: ಗೆಹಲೋತ್
Published 12 ಫೆಬ್ರುವರಿ 2024, 15:58 IST
Last Updated 12 ಫೆಬ್ರುವರಿ 2024, 15:58 IST
ಅಕ್ಷರ ಗಾತ್ರ

ಬೆಂಗಳೂರು: ‘ನ್ಯಾಯ, ಧರ್ಮದ ರೀತಿಯಲ್ಲಿ ರಾಜ್ಯ ಸರ್ಕಾರಕ್ಕೆ ಸಿಗಬೇಕಾದ ತೆರಿಗೆ ಪಾಲು ಸಿಗುತ್ತಿಲ್ಲ; ಅನೇಕ ಜ್ಞಾಪನ ಪತ್ರಗಳನ್ನು ಸಲ್ಲಿಸಿದರೂ ಬರ ಪರಿಹಾರ ಸಿಕ್ಕಿಲ್ಲ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

ಕೇಂದ್ರ ಸರ್ಕಾರವು ಕರ್ನಾಟಕದ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಆಪಾದಿಸಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಮ್ಮ ಸಚಿವರು, ಶಾಸಕರ ದಂಡಿನೊಂದಿಗೆ ಇತ್ತೀಚೆಗೆ ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿ, ದೇಶದ ಗಮನ ಸೆಳೆದಿತ್ತು. ಆ ಬೆನ್ನಲ್ಲೇ, ರಾಜ್ಯಪಾಲರ ಭಾಷಣದಲ್ಲೂ ರಾಜ್ಯದ ವಿಷಯದಲ್ಲಿ ಕೇಂದ್ರದ ಧೋರಣೆಯನ್ನು ಪ್ರಸ್ತಾವಿಸಲಾಗಿದೆ.

‘ಎಲ್ಲ ಜನಪರ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಸಿದ್ಧವಿದೆ. ಆದರೆ, ವಿವಿಧ ಮೂಲಗಳಿಂದ ಸಿಗಬೇಕಾದಷ್ಟು ಸಂಪನ್ಮೂಲಗಳು ಸಿಗುತ್ತಿಲ್ಲ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ರಾಜ್ಯಗಳಲ್ಲಿ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಆದರೆ, ತೆರಿಗೆ ಪಾಲು ಪಡೆಯುವ ವಿಚಾರದಲ್ಲಿ ಹತ್ತನೇ ಸ್ಥಾನದಲ್ಲಿದೆ. ನಮಗೆ ನ್ಯಾಯ ಮತ್ತು ಧರ್ಮದ ರೀತಿಯಲ್ಲಿ ಸಿಗಬೇಕಾದ ಪಾಲನ್ನು ಪಡೆಯುಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು. 

‘ಬರಪೀಡಿತ ತಾಲ್ಲೂಕುಗಳಲ್ಲಿ ಬರ ಪರಿಹಾರ ಕ್ರಮಗಳಿಗಾಗಿ ಎನ್‌ಡಿಆರ್‌ಎಫ್‌ನಿಂದ ₹18,171.44 ಕೋಟಿ ಆರ್ಥಿಕ ನೆರವು ಕೋರಿ ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೆ  ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಖಾರಿಫ್‌ ಬರ ಪರಿಹಾರಕ್ಕೆ ಜ್ಞಾಪನ ಪತ್ರಗಳನ್ನು ಸಲ್ಲಿಸಿದೆ. ಆದರೆ, ಈವರೆಗೂ ಯಾವುದೇ ಹಣ ಬಿಡುಗಡೆ ಆಗಿಲ್ಲ’ ಎಂದೂ ಹೇಳಿದರು.

‘ಬರ ಪರಿಹಾರವನ್ನು ತುರ್ತಾಗಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ನಾವು ಈ ಬಾರಿ ಸಂಪೂರ್ಣ ಪಾರದರ್ಶಕತೆ ತಂದಿದ್ದೇವೆ. ಹಿಂದಿನ ವರ್ಷಗಳಲ್ಲಿ ನೀಡಿದ ಪರಿಹಾರಗಳಲ್ಲಿ ಮತ್ತು ಇನ್‌ಪುಟ್‌ ಸಬ್ಸಿಡಿಗಳಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವುದು ಸರ್ಕಾರ ಗಮನಕ್ಕೆ ಬಂದಿದೆ. ಅರ್ಹ ರೈತರಿಗೆ ಪರಿಹಾರ ಸಿಗದೆ ಅನರ್ಹರಿಗೆ ಪರಿಹಾರ ನೀಡಿದ ಅನೇಕ ಪ್ರಕರಣಗಳು ಗಮನಕ್ಕೆ ಬಂದಿವೆ’ ಎಂದರು.

‘ಬರ ಪರಿಹಾರವಿರಲಿ, ಗ್ಯಾರಂಟಿ ಯೋಜನೆಗಳಿರಲಿ ಇವುಗಳನ್ನು ನನ್ನ ಸರ್ಕಾರವು ಜನರ ಹಕ್ಕುಗಳು ಎಂದು ಭಾವಿಸಿಯೇ ಕಾರ್ಯ ನಿರ್ವಹಿಸುತ್ತಿದೆ’ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸನ್ನು ತಮ್ಮ ಭಾಷಣದಲ್ಲಿ ‍ಪ್ರಸ್ತಾವಿಸಿರುವ ರಾಜ್ಯಪಾಲರು, ಸರ್ಕಾರದ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, ಗ್ಯಾರಂಟಿಗಳನ್ನು ಟೀಕಿಸುತ್ತಿರುವ ಕೇಂದ್ರ ಸರ್ಕಾರ ಮತ್ತು ರಾಜ್ಯದ ವಿರೋಧ ಪಕ್ಷಗಳ ನಿಲುವಿನ ಕುರಿತು ಪರೋಕ್ಷವಾಗಿ ಟೀಕಿಸಿದರು.

‘ನನ್ನ ಸರ್ಕಾರ ನಡೆ–ನುಡಿಗಳನ್ನು ಒಂದಾಗಿಸಿಕೊಂಡು ಕೆಲಸ ಮಾಡುತ್ತಿದೆ. ಮಾತು ಸ್ಫಟಿಕದ ಸಲಾಕೆಯಂತಿರಬೇಕು. ಕೊಟ್ಟ ಮಾತನ್ನು ಪಾಲಿಸಬೇಕೆನ್ನುವುದು ವಚನಕಾರರ ನಿಲುವು. ಹಾಗಾದಾಗ ಮಾತ್ರ ಮಾತಿಗೆ ಬೆಲೆ. ಹೇಳುವ ಮಾತಿಗೆ ಬೆಲೆ ನೀಡದೇ, ಭರವಸೆಗಳನ್ನೇ ಅವಹೇಳನ ಮಾಡುವ ವಾತಾವರಣವೇ ಎಲ್ಲೆಡೆ ತುಂಬಿರವಾಗ ನನ್ನ ಸರ್ಕಾರವು ಹೊಸ ಸಂಸ್ಕೃತಿಗೆ ನಾಂದಿ ಹಾಡಿದೆ. ನನ್ನ ಸರ್ಕಾರ ನುಡಿದಂತೆ ನಡೆದಿದೆ’ ಎಂದರು.

ಗ್ಯಾರಂಟಿಗಳಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂಬ ಮಾತುಗಳನ್ನು ಅಲ್ಲಗಳೆಯುವ ರೀತಿಯೊಳಗೆ, ಕಳೆದ ಎಂಟು ತಿಂಗಳಿನಿಂದ ಏನೇನು ಪ್ರಗತಿಯಾಗಿದೆ ಎಂಬುದನ್ನೂ ರಾಜ್ಯಪಾಲರು ತಮ್ಮ ಭಾಷಣದಲ್ಲಿ ವಿವರವಾಗಿ ಮಂಡಿಸಿದರು.

ಭಾಷಣದ ಮುಖ್ಯಾಂಶಗಳು:

  • ವಿವಿಧ ಇಲಾಖೆಗಳಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಆಗುತ್ತಿದೆ. ಈಗಾಗಲೇ 16 ಸಾವಿರಕ್ಕೂ ಅಧಿಕ ಯುವ ಜನರು ತರಬೇತಿ ಅವಧಿಯಲ್ಲಿದ್ದಾರೆ. ಅಲ್ಲದೇ, 14 ಸಾವಿರಕ್ಕೂ ಅಧಿಕ  ಹುದ್ದೆಗಳಿಗೆ ನೇಮಕಾತಿ ವಿವಿಧ ಹಂತಗಳಲ್ಲಿ ನಡೆಯುತ್ತಿದೆ.

  • ಇಂದಿರಾ ಕ್ಯಾಂಟೀನ್‌–2 ಯೋಜನೆಯಡಿ 2ನೇ ಹಂತದಲ್ಲಿ ಹೊಸ ಪಟ್ಟಣಗಳಲ್ಲಿ ಹಾಗೂ ಕ್ಯಾಂಟೀನ್‌ ನಿರ್ಮಾಣವಾಗದೇ ಇರುವ ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ಮೆನುವಿನೊಂದಿಗೆ 188 ಹೊಸ ಕ್ಯಾಂಟೀನ್‌ಗಳನ್ನು ಆರಂಭಿಸಲಾಗುತ್ತಿದೆ.

  • 2023–24ನೇ ಬಜೆಟ್‌ನಲ್ಲಿ ಜಲಸಂಪನ್ಮೂಲ ಇಲಾಖೆ ಒಟ್ಟು ₹16,735.49 ಕೋಟಿ ಅನುದಾನ ಒದಗಿಸಲಾಗಿದೆ. ಡಿಸೆಂಬರ್‌ ಕೊನೆಗೆ ₹10,357.91 ಕೋಟಿ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. 31,117.98 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿದೆ.

  • ಏಕಗವಾಕ್ಷಿ ಅನುಮೋದನಾ ಸಮಿತಿಯಲ್ಲಿ 165 ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ ₹45,325 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. 42,292 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ.

  • ಅನ್ನಭಾಗ್ಯ ಯೋಜನೆಯಡಿ  5 ಕೆ.ಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿ.ಗೆ ₹34ರಂತೆ ಕುಟುಂಬದ ಸದಸ್ಯರ ಬ್ಯಾಂಕ್‌ ಖಾತೆಗೆ ನೇರ ನಗದಿನ ಮೂಲಕ ಜನವರಿ ಅಂತ್ಯಕ್ಕೆ ₹4,595 ಕೋಟಿ ವರ್ಗಾಯಿಸಲಾಗಿದೆ. 

  • ಎಸ್‌ಸಿಎಸ್‌ಪಿ– ಟಿಎಸ್‌ಪಿ ಕಾರ್ಯಕ್ರಮಗಳಿಗೆ 2023–24ನೇ ಸಾಲಿನಲ್ಲಿ ₹34,580.38 ಕೋಟಿ ಅನುದಾನ ಒದಗಿಸಿ ಸಮರ್ಪಕ ಯೋಜನೆಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.

ಸುಸ್ಥಿರ ಅಭಿವೃದ್ಧಿ ಸಾಮಾಜಿಕ ಸಾಮರಸ್ಯವನ್ನು ಒಳಗೊಂಡ ‘ಕರ್ನಾಟಕ ಮಾದರಿ’ಯ ಮೂಲಕ ಇಡೀ ದೇಶದಲ್ಲಿ ಕರ್ನಾಟಕವನ್ನು ವಿಶಿಷ್ಟವಾಗಿ ರೂಪಿಸುವುದು ಸರ್ಕಾರದ ಗುರಿ
ಥಾವರಚಂದ್ ಗೆಹಲೋತ್ ರಾಜ್ಯಪಾಲ
ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ತನ್ನದೇ ಯೋಜನೆಯಾಗಿ ಬಿಂಬಿಸಿಕೊಂಡಿದೆ. ಕೇವಲ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ
ಆರ್. ಅಶೋಕ ವಿರೋಧ ಪಕ್ಷದ ನಾಯಕ
ದಿನಕ್ಕೆ ನೂರು ಸುಳ್ಳು ಹೇಳಿಕೊಂಡು ಓಡಾಡುವ ಮುಖ್ಯಮಂತ್ರಿ ಸಚಿವರು ರಾಜ್ಯಪಾಲರಿಂದಲೂ ಸುಳ್ಳು ಭಾಷಣ ಮಾಡಿಸಿದ್ದಾರೆ. ಭಾಷಣದಲ್ಲಿ ಉಪ್ಪು ಹುಳಿ ಖಾರ ಏನೂ ಇಲ್ಲ
ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

‘ಮನುವಾದದ ವಿರುದ್ಧ ಚಳವಳಿ ಸ್ಫೂರ್ತಿಯಾಗಲಿ’

‘ಮನುವಾದದ ವಿರುದ್ಧ ಚಳವಳಿ ರೂಪಿಸಿ ಸಮಾನತೆಯ ಕನಸನ್ನು ಬಿತ್ತಿದ ಬಸವಣ್ಣನವರು ಅಲ್ಲಮಪ್ರಭುಗಳು ಮುಂತಾದವರನ್ನು ಮತ್ತೆ ಮತ್ತೆ ನಮ್ಮ ನಿಜ ಜೀವನದಲ್ಲಿ ಸ್ಫೂರ್ತಿದಾಯಕರನ್ನಾಗಿ ಮಾಡಿಕೊಳ್ಳಲೇಬೇಕಾಗಿದೆ’ ಎಂದು ಗೆಹಲೋತ್ ಹೇಳಿದರು. ದುಡಿಮೆ ಮತ್ತು ಸಂಪತ್ತಿನ ಸಮಾನ ಹಂಚಿಕೆಯ ತತ್ವವನ್ನು ಪ್ರತಿಪಾದಿಸಿದ ಹಾಗೂ ಅನುಭವ ಮಂಟಪದ ಮೂಲಕ ಸಂಸದೀಯ ವ್ಯವಸ್ಥೆಯ ಮಾದರಿಯನ್ನು ಜಗತ್ತಿಗೆ ಪರಿಚಯಿಸಿದ ವಚನ ಚಳವಳಿಯ ನೇತಾರ ಬಸವಣ್ಣನವರನ್ನು ನಾಡಿನ ಸಾಂಸ್ಕತಿಕ ನಾಯಕ ಎಂದು ಘೋಷಿಸಿರುವುದು ಹೆಮ್ಮೆಯ ಸಂಗತಿ ಎಂದರು. ‘ಸಂವಿಧಾನದ ಪ್ರಕಾರ ಚುನಾವಣೆಗಳಲ್ಲಿ ಜಾತಿ ಧರ್ಮ ಬಳಕೆಗೆ ನಿರ್ಬಂಧವಿದೆ. ನಮ್ಮ ಎಲ್ಲಾ ಕಾರ್ಯಗಳು ಮತ್ತು ಚಟುವಟಿಕೆಗಳು ಸಂವಿಧಾನಕ್ಕೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದರು. ‘ಸಾಂವಿಧಾನಿಕ ಸಂಸ್ಥೆಗಳು ಯಾವುದೇ ಕಾರಣಕ್ಕೂ ದುರ್ಬಲವಾಗದಂತೆ ಅಥವಾ ದುರುಪಯೋಗ ಆಗದಂತೆ ಸಂಕಲ್ಪ ಮಾಡಿ ರಕ್ಷಿಸಬೇಕಾಗಿದೆ. ನಮಗೆ ಸಂವಿಧಾನವೇ ರಾಷ್ಟ್ರೀಯ ಧರ್ಮ ಸಂವಿಧಾನವನ್ನು ನಾವು ರಕ್ಷಿಸಿದರೆ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂಬ ದೃಢವಾದ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು’ ಎಂದರು.

‘ಮಧ್ಯಮವರ್ಗಕ್ಕೇರಿದ 1.2 ಕೋಟಿ ಕುಟುಂಬಗಳು’

‘ನನ್ನ ಸರ್ಕಾರ ಪ್ರಾರಂಭಿಸಿರುವ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ.ಈ ಗ್ಯಾರಂಟಿಗಳನ್ನು ಅಳವಡಿಸಿಕೊಳ್ಳಲು ಇನ್ನಿತರೆ ಸರ್ಕಾರಗಳು ಪೈಪೋಟಿಗೆ ಮುಂದಾಗಿವೆ’ ಎಂದು ಗೆಹಲೋತ್ ಹೇಳಿದರು. ‘ಗ್ಯಾರಂಟಿಗಳಿಂದ 1.2 ಕೋಟಿಗೂ ಅಧಿಕ ಕುಟುಂಬಗಳು ಬಡತನ ರೇಖೆಗಿಂತ ಹೊರಗೆ ಬಂದು ಮಧ್ಯಮವರ್ಗದ ಸ್ಥಿತಿಗೆ ಏರುತ್ತಿವೆ. ಸರ್ಕಾರದ ಒಂದು ನಿರ್ಣಯದಿಂದಾಗಿ ರಾಜ್ಯದ 5 ಕೋಟಿಗೂ ಹೆಚ್ಚು ಜನರು ಮಧ್ಯವರ್ಗದ ಸ್ಥಿತಿಗೆ ಏರುವುದು ಜಾಗತಿಕ ದಾಖಲೆಯಾಗಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಸವಳಿದ ಜನರಿಗೆ ಪಂಚ ಗ್ಯಾರಂಟಿಗಳು ಸಾಂತ್ವನ ಒದಗಿಸಿವೆ. ಈ ಯೋಜನೆಗಳು ಆರ್ಥಿಕವಾಗಿ ಅಶಕ್ತರಾದವರಿಗೆ ಎಷ್ಟೊಂದು ಅಗತ್ಯವಿತ್ತು ಎನ್ನುವುದಕ್ಕೆ ಬೃಹತ್ ಸಂಖ್ಯೆಯಲ್ಲಿ ಹರಿದು ಬಂದ ಅರ್ಜಿಗಳೇ ನಿದರ್ಶನ’ ಎಂದರು.

‘ಜೈ ಶ್ರೀರಾಮ್’ಗೆ ಪರ್ಯಾಯವಾಗಿ ಜೈಭೀಮ್ ಭಾರತ್‌ ಮಾತಾಕಿ ಜೈ ಘೋಷಣೆ

ಜಂಟಿ ಅಧಿವೇಶನದ ವೇಳೆ ಇದೇ ಮೊದಲ ಬಾರಿಗೆ ಘೋಷಣೆ ಮೊಳಗಿಸುವ ಹೊಸ ‘ಸಂಪ್ರದಾಯ’ವನ್ನು ಬಿಜೆಪಿ ಸದಸ್ಯರು ಶುರು ಮಾಡಿದರು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಸದಸ್ಯರು ಭಾರತ್‌ ಮಾತಾಕೀ ಜೈ ಜೈ ಭೀಮ್ ಎಂದು ಘೋಷಣೆ ಕೂಗಿದ್ದೂ ನಡೆಯಿತು. ರಾಜ್ಯಪಾಲರು ವಿಧಾನಸಭೆ ಸಭಾಂಗಣದೊಳಗೆ ಆಗಮಿಸುವಾಗ ಮತ್ತು ನಿರ್ಗಮಿಸುವಾಗ ಕೇಸರಿಶಾಲು ಧರಿಸಿದ್ದ ಬಿಜೆಪಿ ಸದಸ್ಯರು ‘ಜೈಶ್ರೀರಾಮ್‌’ ಘೋಷಣೆ ಮೊಳಗಿಸಿದರು.  ಈ ಸಂದರ್ಭದಲ್ಲಿ ಕಾಂಗ್ರೆಸ್‌ ಕೆಲವು ಸದಸ್ಯರು ‘ಜೈ ಶ್ರೀರಾಮ್‌’ ಜತೆಗೆ ‘ಭಾರತ್‌ ಮಾತಾಕೀ ಜೈ’ ‘ಜೈ ಭಾರತ್‌’ ವಂದೇ ಮಾತರಂ ಎಂದು ಘೋಷಣೆ ಕೂಗಿದರು. ಸಚಿವ ಬೈರತಿ ಸುರೇಶ್‌ ಅವರು ‘ಜೈ ಭೀಮ್‌’ ಎಂಬ ಘೋಷಣೆ ಹಾಕಿದರು. ರಾಜ್ಯಪಾಲರು ಸದನದ ಒಳಗೆ ಬರುವ ಮೊದಲೇ ಬಿಜೆಪಿಯ ಮುನಿರತ್ನ ಅವರು ತಮ್ಮ ಪಕ್ಷದ ಸದಸ್ಯರಿಗೆ ಕೇಸರಿ ಶಾಲು ವಿತರಿಸಿದ್ದರು. ಕಾಂಗ್ರೆಸ್‌ನತ್ತ ಒಂದು ಕಾಲಿಟ್ಟಿರುವ ಎಸ್.ಟಿ.ಸೋಮಶೇಖರ್ ಅವರೂ ಕೇಸರಿ ಶಾಲು ಹಾಕಿ ಕುಳಿತಿದ್ದರು. ಮುಂಚಿತವಾಗಿ ಬಂದ ರಾಜ್ಯಪಾಲ ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಜಂಟಿ ಅಧಿವೇಶನಕ್ಕೆ ಐದು ನಿಮಿಷ ಮುಂಚಿತವಾಗಿಯೇ ಬಂದ ರಾಜ್ಯಪಾಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಸಚಿವ ಎಚ್‌.ಕೆ.ಪಾಟೀಲ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT