ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಗೆ ಬರಲಿದ್ದಾರೆ ಕಾಂಗ್ರೆಸ್‌ನ ಪ್ರಮುಖ ನಾಯಕರು: ಬೊಮ್ಮಾಯಿ ಹೇಳಿಕೆ

ಲೋಕಸಭಾ ಚುನಾವಣೆಗೂ ಮೊದಲೇ ದೊಡ್ಡ ಬದಲಾವಣೆ: ಬೊಮ್ಮಾಯಿ
Published 26 ಜನವರಿ 2024, 0:30 IST
Last Updated 26 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್‌ನ ಪ್ರಮುಖ ನಾಯಕರು ಬಿಜೆಪಿಗೆ ಬರಲಿದ್ದು, ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಇಬ್ಭಾಗವಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

ಜಗದೀಶ ಶೆಟ್ಟರ್ ಅವರ ಘರ್ ವಾಪಸಿ ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಬಿಜೆಪಿ ಬಿಟ್ಟು ಹೋದವರು ಘರ್‌ ವಾಪಸಿ ಆಗುವುದರ ಜತೆಗೆ ಕಾಂಗ್ರೆಸ್‌ನ ಪ್ರಮುಖ ನಾಯಕರೂ ಬರುತ್ತಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಲೋಕಸಭಾ ಚುನಾವಣೆಗೂ ಮೊದಲೇ ಭಾರಿ ಪ್ರಮಾಣದ ಬದಲಾವಣೆ ಆಗಲಿದೆ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

‘ಜಗದೀಶ ಶೆಟ್ಟರ್ ಅವರು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಕಾಂಗ್ರೆಸ್‌ ಮೇಲಿನ ಪ್ರೀತಿಯಿಂದ ಹೋಗಿರಲಿಲ್ಲ, ಬಿಜೆಪಿಯಲ್ಲಿ ಆಗಿರುವ ಬೇಸರದಿಂದ ಕಾಂಗ್ರೆಸ್‌ಗೆ ಹೋಗಿದ್ದರು. ಅವರನ್ನು ನಾನು ಜನಸಂಘದ ದಿನದಿಂದಲೂ ಬಹಳ ಹತ್ತಿರದಿಂದ ನೋಡಿದ್ದೇನೆ. ಅವರಿಗೆ ಕಾಂಗ್ರೆಸ್‌ ಡಿಎನ್‌ಎ ಒಗ್ಗುವುದಿಲ್ಲ. ಶೆಟ್ಟರ್‌ ಅವರ ದೇಹ ಮಾತ್ರ ಕಾಂಗ್ರೆಸ್‌ಗೆ ಹೋಗಿತ್ತು. ಅವರ ಮನಸ್ಸು ಬಿಜೆಪಿಯಲ್ಲೇ ಇತ್ತು. ಕಾಂಗ್ರೆಸ್ ಸೇರಿದ ಮೇಲೆ ಅಲ್ಲಿನ ಮನಸ್ಥಿತಿ ಅವರಿಗೆ ಅರ್ಥವಾಗಿದೆ. ಇದು ಬಿಜೆಪಿ ಮತ್ತು ಶೆಟ್ಟರ್‌ ಅವರಿಗೂ ಅನುಕೂಲವಾಗಲಿದೆ’ ಎಂದು ಬೊಮ್ಮಾಯಿ ತಿಳಿಸಿದರು.

‘ಜಗದೀಶ ಶೆಟ್ಟರ್‌ ಅವರನ್ನು ಯಾರೂ ಬ್ಲ್ಯಾಕ್‌ ಮೇಲ್ ಮಾಡಲು ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಯಾವಾಗಲೂ ಬ್ಲ್ಯಾಕ್‌ಮೇಲ್‌ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ’ ಎಂದರು.

‘ದೇಶವೇ ಮೊದಲು ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಸಿದ್ಧಾಂತ. ಈಗ ಎಡ, ಬಲ ಸಿದ್ಧಾಂತ ಇಲ್ಲ. ದೇಶ ಮತ್ತು ದೇಶದ ಜನರ ಅಭಿವೃದ್ಧಿಯೇ ಮೊದಲ ಆದ್ಯತೆ. ಈಗ ಅದೇ ರಾಜಕೀಯ ಸಿದ್ಧಾಂತವಾಗಿದೆ’ ಎಂದು ಬೊಮ್ಮಾಯಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT